ವೈದ್ಯರಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ: ಯು. ಟಿ. ಖಾದರ್

KannadaprabhaNewsNetwork |  
Published : Jul 13, 2026, 01:30 AM IST
ಸಚಿವ ಯು. ಟಿ. ಖಾದರ್ ಅವರನ್ನು ಧರ್ಮಪ್ರಾಂತ್ಯದ ಪರವಾಗಿ ಸನ್ಮಾನಿಸಲಾಯಿತು  | Kannada Prabha

ಸಾರಾಂಶ

ತಮ್ಮ ವೈಯಕ್ತಿಕ ಬದುಕನ್ನೂ ಪಕ್ಕಕ್ಕಿಟ್ಟು, ಪರರ ಆರೋಗ್ಯಕ್ಕೆ ಆದ್ಯತೆ ನೀಡಿ, ಅನೇಕ ಜೀವಗಳನ್ನು ಉಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅತ್ಯಂತ ಅಮೂಲ್ಯವಾದುದು ಎಂದು ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್ ಶ್ಲಾಘಿಸಿದರು.

ಉಡುಪಿ: ತಮ್ಮ ವೈಯಕ್ತಿಕ ಬದುಕನ್ನೂ ಪಕ್ಕಕ್ಕಿಟ್ಟು, ಪರರ ಆರೋಗ್ಯಕ್ಕೆ ಆದ್ಯತೆ ನೀಡಿ, ಅನೇಕ ಜೀವಗಳನ್ನು ಉಳಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ವೈದ್ಯರ ಪಾತ್ರ ಅತ್ಯಂತ ಅಮೂಲ್ಯವಾದುದು ಎಂದು ರಾಜ್ಯ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವರಾದ ಯು. ಟಿ. ಖಾದರ್ ಶ್ಲಾಘಿಸಿದರು.ಅವರು ಭಾನುವಾರ ಉಡುಪಿ ಶೋಕಮಾತಾ ಚರ್ಚಿನ ಆವೆ ಮರಿಯಾ ಸಭಾಂಗಣದಲ್ಲಿ ಉಡುಪಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ವತಿಯಿಂದ ಆಯೋಜಿಸಿದ್ದ ಎರಡನೇ ವರ್ಷದ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿಯೊಬ್ಬ ವೈದ್ಯರೂ ಕೂಡ ಜಗತ್ತಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದೆ, ಪ್ರತಿಯೊಬ್ಬ ರೋಗಿಯ ಗೌರವಕ್ಕೆ ಧಕ್ಕೆಯಾಗದಂತೆ ಸೇವೆ ನೀಡಬೇಕಾದ ಜವಾಬ್ದಾರಿ ಅವರ ಮೇಲಿದೆ. ವೈದ್ಯ ವೃತ್ತಿ ಅತ್ಯಂತ ಪವಿತ್ರ ಹಾಗೂ ಗೌರವಯುತವಾಗಿದ್ದು. ವೈದ್ಯರು ಜನರಲ್ಲಿ ಉತ್ತಮ ಆಹಾರ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸಿದರೇ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯವಿದೆ. ಈ ನಿಟ್ಟಿನಲ್ಲಿ ವೈದ್ಯ ಸಮುದಾಯ ಹೆಚ್ಚು ಆಸಕ್ತಿ ತೋರಬೇಕು ಎಂದರು.

ಚಾಲನೆ ನೀಡಿದ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಹಿಂದುಳಿದ ಹಾಗೂ ಬಡವರನ್ನು ಶೈಕ್ಷಣಿಕ ಹಾಗೂ ಆರೋಗ್ಯ ಸೇವೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ನಡೆಯಬೇಕಾಗಿದ್ದು ಈ ನಿಟ್ಟಿನಲ್ಲಿ ಮಾಹೆ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಿದೆ. ಬಡವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೋರುತ್ತಿರುವ ಸಂಸ್ಥೆ ಆರೋಗ್ಯ ಕಾರ್ಡ್ ಮೂಲಕ ರಿಯಾಯತಿ ದರದ ಸೇವೆ ನೀಡುತ್ತಿದ್ದು ಇದನ್ನು ಪ್ರತಿಯೊಬ್ಬರಿಗೂ ಲಭ್ಯವಾಗುವಂತೆ ನೋಡಿಕೊಂಡಿದ್ದೇವೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ|ಡಾ|ಲೆಸ್ಲಿ ಕ್ಲಿಫರ್ಡ್ ಡಿಸೋಜಾ ವಹಿಸಿದ್ದು ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ ಬದಲಿಗೆ ಅದೊಂದು ಪವಿತ್ರ ಹಾಗೂ ಮಹಾನ್ ಸೇವೆಯಾಗಿದೆ ಎಂದರಲ್ಲದೇ, ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಅವರಿಂದ ಮುಂದೆಯೂ ಇದೇ ರೀತಿಯ ಸಮಾಜ ಸೇವೆ ನಡೆಯಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಧರ್ಮಪ್ರಾಂತ್ಯದ ಆರೋಗ್ಯ ಆಯೋಗದ ಮೂಲಕ ಸಂತೆಕಟ್ಟೆ ಗೊರೆಟ್ಟಿ ಆಸ್ಪತ್ರೆಯಲ್ಲಿ ನೂತನ ದಂತ ಚಿಕಿತ್ಸಾ ವಿಭಾಗ ಹಾಗೂ ಮಧುಮೇಹ ತಪಾಸಣಾ ಘಟಕದ ಉದ್ಘಾಟನೆ ನೆರವೇರಿಸಲಾಯಿತು. ಎರಡು ಆರೋಗ್ಯ ಸಂಸ್ಥೆಗಳಿಗೆ ಇಸಿಜಿ ಯಂತ್ರಗಳನ್ನು ಹಸ್ತಾಂತರಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕಿ ಡಾ. ಜಸಿಂತಾ ಡಿಸೋಜಾ ದಿಕ್ಸೂಚಿ ಭಾಷಣ ಮಾಡಿದರು.

ಇದೇ ವೇಳೆ 2027 ರ ಸಾಲಿನ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ನೊಂದಣಿ ಅಭಿಯಾನಕ್ಕೆ ಡಾ. ಎಚ್ ಎಸ್ ಬಲ್ಲಾಳ್ ಚಾಲನೆ ನೀಡಿದರು. ವಲಯಗಳ ನಿರ್ದೇಶಕರು ಹಾಗೂ ಸಂಚಾಲಕರು, ಸಂಪನ್ಮೂಲ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಯಿತು.ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ, ಕುಲಪತಿ ವಂ|ಸ್ಟೀಫನ್ ಡಿಸೋಜಾ, ಆರೋಗ್ಯ ಇಲಾಖೆಯ ಡಾ. ನಾಗರತ್ನ ಶಾಸ್ತ್ರಿ, ಉಡುಪಿ ಶೋಕ ಮಾತಾ ದೇವಾಲಯದ ಸಹಾಯಕ ಧರ್ಮಗುರು ವಂ|ಲಿಯೊ ಪ್ರವೀಣ್ ಡಿಸೋಜಾ ಹಾಗೂ ಇತರರು ಉಪಸ್ಥಿತರಿದ್ದರು.ಆರೋಗ್ಯ ಆಯೋಗದ ನಿರ್ದೇಶಕಿ ಹಿಲ್ಡಾ ಕರ್ನೆಲಿಯೋ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ರೆನ್ ಡಾಯಸ್ ವಂದಿಸಿದರು. ಡಾ. ಸೋನಿ ಡಿಕೊಸ್ತಾ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಸ್ಪೂರ್ತಿಯಾಗಬೇಕು: ಹರೀಶ್ ಪೂಂಜ
ಉಡುಪಿ ಜಿಲ್ಲಾಸ್ಪತ್ರೆಗೆ ಸಚಿವ ಖಾದರ್ ದಿಢೀರ್ ಭೇಟಿ