ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ನಿಮಿತ್ತ ಸ್ವಚ್ಛತಾ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಚಾಲನೆ
ಕನ್ನಡಪ್ರಭ ವಾರ್ತೆ ಕುಷ್ಟಗಿಆಧುನಿಕ ಭರಾಟೆಯಲ್ಲಿ ಪರಿಸರ ಕಲುಷಿತಗೊಳ್ಳುತ್ತಿದ್ದು, ಪರಿಸರದ ಕುರಿತು ಜನರಲ್ಲಿ ಜಾಗೃತಿ ಮುಖ್ಯವಾಗಿದೆ. ಸ್ವಚ್ಛ ಪರಿಸರದಿಂದ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಮಂಜುನಾಥ ಹೇಳಿದರು.ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಹಾಗೂ ಪುರಸಭೆಯ ಸಹಯೋಗದಲ್ಲಿ ರಾಷ್ಟ್ರೀಯ ಸ್ವಚ್ಛತಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನ್ಯಾಯಾಲಯ ಆವರಣದಲ್ಲಿ ಗುರುವಾರ ಕಸಗುಡಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದಿದ್ದರೆ ಕ್ರಿಮಿಕೀಟಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡಿ ಮನುಷ್ಯನ ಸ್ವಾಸ್ಥ್ಯ ಹಾಳು ಮಾಡುತ್ತವೆ. ಸುಂದರ ಪರಿಸರದಿಂದ ವ್ಯಕ್ತಿಯ ಆರೋಗ್ಯ ಜೊತೆಗೆ ಸಕಾರಾತ್ಮಕ ಆಲೋಚನೆಗಳು ಬೆಳೆಯಲು ಸಾಧ್ಯ ಎಂದರು.ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಜನಸಾಮಾನ್ಯರು ತಮ್ಮ ಬಿಡುವಿನ ಸಮಯದಲ್ಲಿ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ಓಣಿಯನ್ನು ಮಾದರಿಯನ್ನಾಗಿಸಲು ಪಣ ತೊಡಬೇಕು ಎಂದರು.ಪುರಸಭೆ ಆರೋಗ್ಯ ನಿರೀಕ್ಷಕ ಅಧಿಕಾರಿ ಪ್ರಾಣೇಶ ಮಾತನಾಡಿ, ರಸ್ತೆ ಬದಿ, ಮನೆ ಅಕ್ಕಪಕ್ಕದಲ್ಲಿ ಕಸ ಬಿಸಾಡುವುದು ಆರೋಗ್ಯಕ್ಕೆ ಮತ್ತು ನಿಸರ್ಗಕ್ಕೆ ಕೆಡಕನ್ನು ಉಂಟುಮಾಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸ್ವಚ್ಛತೆಗೆ ಆದ್ಯತೆ ನೀಡಿ ಹಸಿ ಕಸ ಹಾಗೂ ಒಣ ಕಸಗಳನ್ನು ವಿಂಗಡಿಸಿ ಕಸ ಸಂಗ್ರಹ ವಾಹನದಲ್ಲಿ ಹಾಕಬೇಕು. ಸರ್ಕಾರ ನೈರ್ಮಲ್ಯ ಕಾಪಾಡಲು ಸಾಕಷ್ಟು ಶ್ರಮಿಸುತ್ತಿದೆ. ಜನರ ಸದೃಢ ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡುತ್ತಿದೆ. ನಾವು ಸಹ ಸ್ವಚ್ಛತೆಗೆ ಆದ್ಯತೆ ನೀಡಿ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬೇಕು ಎಂದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಹಾಂತೇಶ ಚೌಳಗಿ, ಅಪರ ಸರ್ಕಾರಿ ವಕೀಲರಾದ ಪರಸಪ್ಪ ಗುಜಮಾಗಡಿ, ವಕೀಲರಾದ ಆರ್.ಕೆ. ದೇಸಾಯಿ, ಎಂ.ಎಚ್. ಗೋಡಿ, ಡಿ. ಗೋಪಾಲ್ ರಾವ್ ವಕೀಲರು, ನ್ಯಾಯಾಂಗ ಇಲಾಖೆಯ ಸಿಬ್ಬಂದಿ, ಪುರಸಭೆಯ ಸಿಬ್ಬಂದಿ, ಪೌರಕಾರ್ಮಿಕರು ಸ್ವಚ್ಛತೆ ಕಾರ್ಯದಲ್ಲಿದ್ದರು.