ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸುಸಂಸ್ಕೃತ ಮನಸ್ಸುಗಳು ಮಾತ್ರ ಶಾಂತಿಯುತ ಸಮಾಜಗಳನ್ನು ನಿರ್ಮಿಸಬಲ್ಲವು ಎಂದು ರಾಜ್ಯ ರೈತ ಸಂಘದ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ನಂದಿನಿ ಜಯರಾಂ ಅಭಿಪ್ರಾಯಪಟ್ಟರು.ಪಟ್ಟಣದ ಗ್ರಾಮಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಎಸ್.ಎಂ.ಲಿಂಗಪ್ಪ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಕವಿಗೋಷ್ಠಿ ಮತ್ತು ಗ್ರಾಮ ಭಾರತಿ ಕಾವ್ಯ ಸಂಭ್ರಮ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾವಂತರು ಪುಸ್ತಕದ ಗೆರೆ ಮೇಲೆ ಅಕ್ಷರ ಬರೆದರೆ ರೈತರಾದ ನಾವು ನೇಗಿಲ ಗೆರೆಯ ಮೇಲೆ ಅನ್ನವನ್ನು ಬೆಳೆಯುತ್ತೇವೆ. ಅನ್ನ ಬೆಳೆಯುವುದೇ ಜಗತ್ತಿನ ಬಹುದೊಡ್ಡ ಸಂಸ್ಕಾರಯುತ ಕಾಯಕ. ಅನ್ನ ಬೆಳೆಯುವವನಿಗೂ ಮತ್ತು ಅನ್ನ ತಿನ್ನುವವನಿಗೂ ನೇರ ಸಂಬಂಧವಿದೆ. ಇದರ ಅರಿವಿಲ್ಲದ ಕೃಷಿಯೇತರ ಜಗತ್ತು ಅನ್ನದಾತನನ್ನು ಕಡೆಗಣಿಸುತ್ತಿದೆ ವಿಷಾದಿಸಿದರು.ಜಡ ದೇವಾಲಯಗಳಿಗಿಂತ ಜ್ಞಾನ ದೇವಾಲಯಗಳು ಸಹಸ್ರ ಸಂಖ್ಯೆಯಲ್ಲಿ ಹೆಚ್ಚಾಗಬೇಕು. ಶಾಲೆಗಳು ಜ್ಞಾನ-ವಿಜ್ಞಾನವನ್ನು ಕೊಡುವ ಸರಸ್ವತಿಯ ಮಂದಿರಗಳಾಗಿದ್ದು, ಗ್ರಾಮೀಣ ಮಕ್ಕಳ ಕೈಗೆಟುವ ಶಾಲೆಗಳ ಸಂಖ್ಯೆ ಹೆಚ್ಚಬೇಕು ಎಂದರು.
ಗ್ರಾಮ ಭಾರತಿ ವಿದ್ಯಾ ಸಂಸ್ಥೆಯಲ್ಲಿ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಕವಿಗೋಷ್ಠಿಯ ಮೂಲಕ ಕವನ ವಾಚಿಸಿದ ಮಕ್ಕಳ ಕವನಗಳನ್ನು ಪೂರ್ವಾನ್ವಯವಾಗಿ ಸಂಗ್ರಹಿಸಿ ಅದನ್ನು ಗ್ರಾಮ ಭಾರತಿ ಕಾವ್ಯ ಸಂಭ್ರಮ’ ಹೆಸರಿನಲ್ಲಿ ಪುಸ್ತಕವನ್ನಾಗಿ ಹೊರತಂದಿರುವುದು ವಿನೂತ ಪ್ರಯೋಗವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಪ್ರಾಥಮಿಕ ಹಂತದಿಂದ ಹಿಡಿದು ಕಾಲೇಜು ಹಂತದವರೆಗಿನ ಗ್ರಾಮ ಭಾರತಿ ಸಮೂಹ ಶಿಕ್ಷಣ ಸಂಸ್ತೆಗಳ 27 ವಿದ್ಯಾರ್ಥಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಸ್ವ ರಚಿತ ಕವನಗಳನ್ನು ವಾಚಿಸಿದರು.
ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಸಿ.ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪುಟ್ಟಲಕ್ಷ್ಮಮ್ಮ ಉದ್ಘಾಟಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎಚ್.ಆರ್. ಪೂರ್ಣಚಂದ್ರ ತೇಜಸ್ವಿ ಕವಿಗೋಷ್ಠಿಗೆ ಚಾಲನೆ ನೀಡಿದರು. ಪತ್ರಕರ್ತ ಎಂ.ಕೆ. ಹರಿಚರಣತಿಲಕ್ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉದಯ ರವಿ ಸೇವಾ ಟ್ರಸ್ಟಿನ ಅಧ್ಯಕ್ಷ ಕೆ.ಎಸ್. ಸೋಮಶೇಖರ್, ತಾಲೂಕು ಜಾನಪದ ಪರಿಷತ್ ಕಾರ್ಯದರ್ಶಿ ಶೀಳನೆರೆ ಶಿವಕುಮಾರ್, ನಿವೃತ್ತ ಕನ್ನಡ ಪಂಡಿತ ಚಾ.ಶಿ.ಜಯಕುಮಾರ್, ಶಿಕ್ಷಕರಾದ ವಜ್ರಪ್ರಸಾದ್ , ಹಿರೇಮಠ ಮತ್ತಿತರರಿದ್ದರು.