- ಬೆಳವಾಡಿ ಗ್ರಾಮದಲ್ಲಿ ನಿರ್ಮಿಸಿರುವ ಸಾಧನ ಧಾಮ । ಸೂರ್ಯಮಂದಿರ- ಗೋಶಾಲೆ ಲೋಕಾರ್ಪಣೆ
ದೇವಸ್ಥಾನಗಳ ನಿರ್ಮಾಣದ ಜೊತೆಗೆ ಧಾರ್ಮಿಕ ಕೇಂದ್ರಗಳನ್ನೂ ನಿರ್ಮಿಸುವುದು ಧರ್ಮದ ಮಹತ್ವದ ಭಾಗವಾಗುತ್ತದೆ ಎಂದು ಮೈಸೂರು-ಕೊಡಗು ಸಂಸದ ಹಾಗೂ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಬೆಳವಾಡಿ ಯೋಗಕ್ಷೇಮ ಯೋಗ ಸಾಧನಾ ಧಾಮದ ಆಶ್ರಯದಲ್ಲಿ ಭಾನುವಾರ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಿರ್ಮಿಸಿರುವ ಸಾಧನ ಧಾಮ, ಸೂರ್ಯಮಂದಿರ ಹಾಗೂ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಕೌಶಲ್ಯಾಭಿವೃದ್ಧಿ, ಸಮಾಜ ಸೇವೆಯಂತಹ ಪೂರಕ ಕೆಲಸಗಳಿಗೆ ಪ್ರೋತ್ಸಾಹ ನೀಡಬೇಕು. ಅದೇ ರೀತಿ ಧಾರ್ಮಿಕ ಕೇಂದ್ರಗಳ ಮೂಲಕ ಚಟುವಟಿಕೆಗಳನ್ನು ಮಾಡಿದರೆ ಉತ್ತಮ ಹೋರಾಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಪ್ರತಿದಿನ ಸೂರ್ಯದೇವನನ್ನು ಆರಾಧಿಸಬೇಕು ಎನ್ನುವ ಪದ್ಧತಿ ನಮ್ಮಲ್ಲಿದೆ. ಭಾರತೀಯ ಧರ್ಮದ ಮಾರ್ಗ ಸೂರ್ಯದೇವನಿಂದಲೇ ಬರುವಂತಹದ್ದು, ಬದುಕಿನ ಅರಿವಿನ ಜ್ಞಾನ ಬೇಕಿದೆ. ಅದಕ್ಕಾಗಿ ಸೂರ್ಯನನ್ನು ಪ್ರತಿನಿತ್ಯ ನೆನಪಿಸಿಕೊಳ್ಳಬೇಕು ಎಂದರು.ಆಧುನಿಕ ಯೋಗ ಮೈಸೂರು ಸಂಸ್ಥಾನ ಹಾಗೂ ಕನ್ನಡಿಗರಿಂದಲೇ ಆರಂಭವಾಗಿದೆ. ಇಂದು ವಿಶ್ವಮಟ್ಟ ದಲ್ಲಿ ಅದು ಬಳಸುವಂತಾಗಿದೆ. ಯೋಗವನ್ನು ಸಾತ್ವಿಕ ಶಕ್ತಿಯಾಗಿ ವಿಶ್ವಸಂಸ್ಥೆ ಮೂಲಕ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆಯಾಗಿ ಭಾರತವೇ ಘೋಷಣೆ ಮಾಡಿಸಿರುವುದು ಸಂತಸ ತರುವಂತಹದ್ದು. ಯೋಗದ ರಕ್ಷಣಾ ಕೇಂದ್ರಗಳನ್ನು ಆರಂಭಿಸಬೇಕಿದೆ. ಯೋಗದ ತತ್ವ ಶಾಸ್ತ್ರಗಳನ್ನು ಅಳವಡಿಸುವ ಪ್ರಯತ್ನಗಳು ಆಗಬೇಕಿದೆ ಎಂದು ಹೇಳಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಶ್ರೀ ತತ್ವ ನಿಧಿಯಲ್ಲಿ 108 ಆಸನಗಳನ್ನು ದಾಖಲು ಮಾಡಿದ್ದಾರೆ. ನಂತರ ಅನೇಕ ಯೋಗ ತಜ್ಞರು ಅದರಲ್ಲಿ ಅಡಕವಾಗಿರುವ ಆಸನಗಳ ಬಗ್ಗೆ ತಿಳುವಳಿಕೆ ಪಡೆದು ಆಸನಗಳ ಅಭ್ಯಾಸ ಮಾಡಿದರು. ಅದರಲ್ಲಿ ಟಿ.ಕೃಷ್ಣಮಾಚಾರಿ ಎಂಬುವವರು ಒಬ್ಬರು. ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಪ್ರಾರಂಭಿಸಿದ ಬನಾರಸ್ ಹಿಂದೂ ಯೂನಿವರ್ಸಿಟಿಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಅರಸರು ಕುಲಪತಿಯಾಗಿ ನೇಮಕಗೊಂಡ ನಂತರ ಕೃಷ್ಣಮಾಚಾರಿ ಅವರ ಮೂಲಕ ಮೈಸೂರು ಸಂಸ್ಥಾನಕ್ಕೂ ಯೋಗಾಭ್ಯಾಸ ಲಭ್ಯವಾಗಿಸಿದರು ಎಂದು ವಿವರಿಸಿದರು.ಗೋರಕ್ಷಣೆ ಹೋರಾಟದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಿರುವುದು ಅತಿ ಅವಶ್ಯ. ಕೆಲವರಿಗೆ ಇದು ಒಂದು ತಮಾಷೆ ವಿಚಾರ ಎನ್ನುವಂತಾಗಿದೆ. ಪ್ರಾಚೀನ ಕಾಲದಿಂದಲೂ ಗೋವುಗಳನ್ನು ಮನುಷ್ಯನ ದೃಷ್ಟಿಕೋನದಿಂದ ನೋಡುತ್ತಿದ್ದೆವು. ಈಗಲೂ ಹಾಗೆಯೇ ಮುಂದುವರಿದಿದೆ. ಭಾರತದ ಎಲ್ಲಾ ಪುರಾಣ ಗಳು, ಮಹಾಭಾರತ ಸೇರಿದಂತೆ ಯಾವುದೇ ಗ್ರಂಥದಲ್ಲಿ ಗೋವಿನ ಪಾತ್ರ ಮಹತ್ವದ್ದಿದೆ. ಹಾಗಾಗಿ ನಾವದನ್ನು ಪೂಜಿಸುತ್ತೇವೆ ಎಂದು ಹೇಳಿದರು. ಬೆಳವಾಡಿ ಗ್ರಾಮಕ್ಕೂ ಮೈಸೂರು ಸಂಸ್ಥಾನಕ್ಕೂ ಅವಿನಾಭಾವ ಸಂಬಂಧವಿದೆ. ಇಮ್ಮಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಬದಲಾವಣೆಯಾದ ಬಳಿಕ ಧಾರ್ಮಿಕ ಸಂರಕ್ಷಣೆ ಮಾಡಬೇಕೆಂದು ಶೃಂಗೇರಿ ಮಠಕ್ಕೆ ಬೆಳವಾಡಿ ಗ್ರಾಮವನ್ನು ದತ್ತು ನೀಡಲಾಗಿತ್ತು ಎಂದರು.ಖ್ಯಾತ ಹೋಮಿಯೋಪತಿ ತಜ್ಞ ನಾಡೋಜ ಡಾ. ಬಿ.ಟಿ.ರುದ್ರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ನಿರ್ವಹಣೆ ಬಹಳ ಸುಲಭ. ಆದರೆ ರೋಗ ನಿರ್ವಹಣೆ ಕಷ್ಟ. ಇಡೀ ಪ್ರಪಂಚ ಇಂದು ರೋಗ ನಿರ್ವಹಣೆ ಬಗ್ಗೆ ಮಾತನಾಡುತ್ತಿದೆ. ಆರೋಗ್ಯ ನಿರ್ವಹಣೆ ಬಗ್ಗೆ ಯಾರೊಬ್ಬರೂ ಮಾತ ನಾಡುತ್ತಿಲ್ಲ. ನೀವು ಧನವಂತರಾಗದ ಹೊರತು ಧನ್ವಂತರಿ ದಯೆ ದೊರಕದು ಎನ್ನುವ ಸ್ಥಿತಿಗೆ ಭಾರತ ಬಂದು ತಲುಪಿದೆ ಎಂದರು.ಹೆಚ್ಚಿನ ಹಣಕಾಸಿನ ತೊಂದರೆ ಇಲ್ಲದೆ ಆರೋಗ್ಯ ನಿರ್ವಹಣೆಯನ್ನು ಹೋಮಿಯೋಪತಿ ಹೇಳುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಆರೋಗ್ಯ ಸಿಗುತ್ತದೆ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಂಘಕ್ಕೆ ಇದು ಶತಾಬ್ಧಿ ವರ್ಷ, ಅದು ಸಮಾಜದಲ್ಲಿ ಕುಟುಂಬ, ಸಂಸ್ಕೃತಿ ಮತ್ತು ಸಂಬಂಧ ಗಟ್ಟಿಗೊಳಿಸುವುದು. ಹಿಂದೂ ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು ಮತ್ತು ಅಸ್ಪೃಶ್ಯತೆ ಹೋಗಲಾಡಿಸುವಂತ ಪಂಚ ಪರಿವರ್ತನೆ ಬಯಸಿದೆ ಎಂದರು. ಉತ್ತರ ಕಾಶಿಯ ನಿರಂಜನಿ ಅಖಾಡದ ಯಮುನೋತ್ರಿಯ ನಾಗಾಸಾಧು ಶ್ರೀ ದಿಗಂಬರ ಕೃಷ್ಣಗಿರಿ ಮಹಾರಾಜ್ ಆಶಿರ್ವಚನ ನೀಡಿ, ಇದು ಯೋಗ ಸಾಧನೆಗೆ ಮಾತ್ರ ಸೀಮಿತವಲ್ಲ. ಇದೊಂದು ಸನಾತನ ಧಾಮವೂ ಆಗಿದೆ ಎಂದರು.ಮುಂಬೈನ ಬಡೇ ಉದಾಸಿ ಅಖಾಡದ ನಾಗಾಸಾಧು ಶ್ರೀ ಹರ ಹರ ಮಹಾದೇವ್ ಗುರೂಜಿ, ಕೋಳ ಗುಂದ ಶ್ರೀ ಕೇದಿಕೆ ಮಠದ ಜಯಚಂದ್ರಶೇಖರ ಸ್ವಾಮೀಜಿ ಆಶೀರ್ವಚನ ನೀಡಿದರು. ರಂಗಕರ್ಮಿ ಬೆಳವಾಡಿ ಪ್ರಕಾಶ್, ಚಲನಚಿತ್ರ ನಟ ಶಶಿಕುಮಾರ್ ಮಾತನಾಡಿದರು. ಯೋಗಕ್ಷೇಮ ಯೋಗ ಸಾಧನಾ ಧಾಮದ ಸಂಸ್ಥಾಪಕ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ವಿರೂಪಾಕ್ಷ ಬೆಳವಾಡಿ ಸಾಧನ ಧಾಮ ರಚನೆ ಗೊಳ್ಳಲು ಕಾರಣವಾದ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಟ್ಟಸ್ಟಿನ ಅಧ್ಯಕ್ಷ ಅನಿಲ್ ಕುಮಾರ್ ಹಾಗೂ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಸಾಧನಾ ಯೋಗ ಧಾಮದ ಸ್ವಯಂ ಸೇವಕರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಸೂರ್ಯ ಮಂದಿರದ ಕಳಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮತ್ತಿತರ ಧಾರ್ಮಿಕ ವಿಧಿಗಳು ನೆರವೇರಿದವು. 25 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ನಿರ್ಮಿಸಿರುವ ಸಾಧನ ಧಾಮ, ಸೂರ್ಯಮಂದಿರ ಹಾಗೂ ಗೋಶಾಲೆ ಲೋಕಾರ್ಪಣೆ ಕಾರ್ಯಕ್ರಮವನ್ನು ರಾಜವಂಶಸ್ಥ ಯದುವೀರ ಕೃಷ್ಣದತ್ತ ಒಡೆಯರ್ ಅವರು ಭಾನುವಾರ ಉದ್ಘಾಟಿಸಿದರು.