ಕನ್ನಡಪ್ರಭವಾರ್ತೆ ತಿಪಟೂರು
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಗರ ಪೊಲೀಸ್ ಠಾಣೆ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರುಪಯೋಗ ಹಾಗೂ ಅಕ್ರಮ ಸಾಗಾಣಿಕೆ ವಿರುದ್ಧದ ದಿನಾಚರಣೆಯಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನೈಜ ನಿದರ್ಶನಗಳ ಮೂಲಕ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳನ್ನು ತಿಳಿಸಿದರು. ಮಕ್ಕಳಿಗೆ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲಿ ತುಂಬಿದಾಗ ಅವರ ಬದುಕು ಹಸನಾಗುವುದು. ಉತ್ತಮ ವಿದ್ಯೆ ಕಲಿತು ಸಾಧಕರಾಗುತ್ತಾರೆ. ವಿದ್ಯಾರ್ಥಿಗಳು ಹಾಗೂ ಯುವಜನತೆಯಿಂದ ಮಾತ್ರ ಸುಭದ್ರ ದೇಶ ನಿರ್ಮಾಣ ಮಾಡಲು ಸಾಧ್ಯವಿರುವುದರಿಂದ ಪೋಷಕರು, ಶಿಕ್ಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಇಟ್ಟು ಬೆಳೆಸಬೇಕು. ಸುಂದರವಾದ ವಿದ್ಯಾರ್ಥಿ ಜೀವನವನ್ನು ಯಾವುದೆ ಆಮಿಷಗಳಿಗೆ ಒಳಗಾಗಿ ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಡಿವೈಎಸ್ಪಿ ಉಮೇಶ್ ಮಾತನಾಡಿ ದೈಹಿಕ, ಮಾನಸಿಕ ಆರೋಗ್ಯಕ್ಕೆ ಮಾದಕ ವಸ್ತುಗಳು ಹಾನಿಕರವಾಗಿವೆ. ಮಾದಕ ವ್ಯಸನಿಗಳು ತಮ್ಮ ಜೀವನ ಹಾಳು ಮಾಡಿಕೊಳ್ಳುವುದರ ಜೊತೆಗೆ ಸಹಪಾಠಿಗಳ ಜೀವನಕ್ಕೂ ತೊಂದರೆ ನೀಡುತ್ತಾರೆ. ಮಾದಕ ವಸ್ತು ಉತ್ಪಾದನೆ, ಸೇವನೆ ಹಾಗೂ ಸಾಗಾಣಿಕೆ ಮಾಹಿತಿ ತಿಳಿದಾಗ ತಕ್ಷಣ ೧೯೩೩ಕ್ಕೆ ಕರೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ನಗರಸಭೆ ಆಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಸಮಯ ಸಂಯಮ ಪಾಲಿಸಬೇಕು. ಜೊತೆಗೆ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾದಕ ದ್ರವ್ಯ ಸೇವನೆ ಬಹು ದೊಡ್ಡ ಪಿಡುಗಾಗಿದೆ. ಈ ಸಮಸ್ಯೆಯನ್ನು ಬೇರು ಸಹಿತ ಕೀಳಬೇಕು. ಯುವಕರೆ ದೇಶದ ಬೆನ್ನೆಲುಬು ದುಶ್ಚಟಗಳಿಂದ ದೂರವಿದ್ದಾಗ ಆರೋಗ್ಯಕರ ಬದುಕು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಾಂತರ ಠಾಣೆಯ ವೃತ್ತ ಆರಕ್ಷಕ ನಿರೀಕ್ಷಕರಾದ ಚಂದ್ರಶೇಖರ್ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ನಗರದ ಕಾಲೇಜಿನಿಂದ ಸಿಂಗ್ರಿ ನಂಜಪ್ಪ ವೃತ್ತದ ವರೆಗೆ ಬಿತ್ತಿಫಲಕಗಳ ಮುಖಾಂತರ ಅರಿವು ಮೂಡಿಸುತ್ತಾ ಜಾಥಾ ನಡೆಸಿದರು. ಕಾರ್ಯಕ್ರಮದಲ್ಲಿ ನಗರ ಠಾಣೆ ಇನ್ಸಪೆಕ್ಟರ್ ರವಿಕುಮಾರ್, ಗ್ರಾಮಾಂತರ ಠಾಣೆ ಇನ್ಸಪೆಕ್ಟರ್ ವೆಂಕಟೇಶ್ ಸೇರಿದಂತೆ ನೊಣವಿನಕೆರೆ, ಕಿಬ್ಬನಹಳ್ಳಿ, ಹೊನ್ನವಳ್ಳಿ, ಪೊಲೀಸ್ ಠಾಣೆಯ ಪೊಲೀಸರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.