ಕಾರ್ಕಳ: ಯುವಕರು ನಿಸ್ವಾರ್ಥವಾಗಿ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಸದೃಢ ಸಮಾಜದ ನಿರ್ಮಾಣ ಸಾಧ್ಯ. ಆರೋಗ್ಯ ಸೇವೆಯ ಜೊತೆಗೆ ಜನಸೇವೆಯಲ್ಲೂ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಮಾದರಿ ಸಂಸ್ಥೆಯಾಗಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.ಅವರು ಭಾನುವಾರ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ವತಿಯಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಆಯೋಜಿಸಲಾದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಯುವ ಮನಸ್ಸುಗಳು ಒಂದಾಗಿ ಕಾರ್ಯನಿರ್ವಹಿಸಿದಾಗ ಸಮಾಜದಲ್ಲಿ ನಿಜವಾದ ಪರಿವರ್ತನೆ ಸಾಧ್ಯವಾಗುತ್ತದೆ ಎಂದರು.ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನತೆಗೆ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ನಡೆಸುತ್ತಿರುವ ಆರೋಗ್ಯ ತಪಾಸಣಾ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ದೇವ ನಿರ್ಮಿತ ನಮ್ಮೂರಿನಲ್ಲಿ ಒತ್ತಡ ಮುಕ್ತವಾಗಿ ಆರೋಗ್ಯಕರ ಜೀವನ ನಡೆಸಬೇಕಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಒತ್ತಡ ರಹಿತ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಅಧ್ಯಕ್ಷ ಚೇತನ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆ, ಆರ್ಥಿಕ ನೆರವು, ಶಾಲೆ ಹಾಗೂ ಧಾರ್ಮಿಕ ಕೇಂದ್ರಗಳ ಪರಿಸರ ಸ್ವಚ್ಛತೆ, ಮಾನವ ಸಂಪತ್ತಿನ ಅಭಿವೃದ್ಧಿ, ಮಾವಿನಕಟ್ಟೆಯ ಹೆಸರನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮಾವಿನ ಗಿಡ ನೆಡುವ ಯೋಜನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ತಿಳಿಸಿದರು.ವರಂಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ ಅಮೀನ್ ಶಿಬಿರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಗೌರವ ಸಲಹೆಗಾರ, ಪ್ರಸ್ತುತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜಸೇವಕರಾದ ಮಾವಿನಕಟ್ಟೆ ಶಂಕರ ಶೆಟ್ಟಿ (ಪಂಚವಟಿ, ಮುನಿಯಾಲು) ಅವರನ್ನು ಸನ್ಮಾನಿಸಲಾಯಿತು.ಶಿಬಿರದಲ್ಲಿ ಹೃದಯ ತಪಾಸಣೆ, ಸ್ತನ ಹಾಗೂ ಗರ್ಭಕೋಶ ತಪಾಸಣೆ, ಸಿಪಿಆರ್ ತರಬೇತಿ, ಮಧುಮೇಹ ಹಾಗೂ ಸಾಮಾನ್ಯ ಆರೋಗ್ಯ ಪರೀಕ್ಷೆಗಳು ನಡೆಸಲಾಯಿತು. ನೂರಾರು ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭ ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ನೂತನ ಲೋಗೋವನ್ನು ಬಿಡುಗಡೆಗೊಳಿಸಲಾಯಿತು.ಆರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರು ಬೀಡು ಎಂ.ಡಿ. ಅಧಿಕಾರಿ ಅವರ ಪುತ್ಥಳಿಗೆ ನಿವೃತ್ತ ಪೋಸ್ಟ್ ಮಾಸ್ಟರ್ ಎಳ್ಳಾರೆ ಕೆಂಜರಜಡ್ಡು ವಿಶ್ವನಾಥ ನಾಯಕ್ ಮಾಲಾರ್ಪಣೆ ಮಾಡಿದರು.
ಮುನಿಯಾಲು ಕೆಪಿಎಸ್ ಶಿಕ್ಷಕ ಮಾತಿಬೆಟ್ಟು ಪ್ರಕಾಶ ಪೂಜಾರಿ ನಿರೂಪಣೆ ಮಾಡಿದರು. ಕುಕ್ಕುದಕಟ್ಟೆ ಜನನಿ ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಸನ್ನ ಶೆಟ್ಟಿ ವಂದಿಸಿದರು.