ಬ್ಯಾಡಗಿ: ನೂರಾರು ಕೋಟಿ ವ್ಯಯಿಸಿದರೂ ತಾಲೂಕಿನ 13 ಸಾವಿರ ಹೆಕ್ಟೇರ್ ರೈತರ ಜಮೀನಿಗೆ ನೀರು ಒದಗಿಸಬೇಕಾಗಿದ್ದ ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ದುರದೃಷ್ಟವಶಾತ್ ರೈತರ ನೆರವಿಗೆ ಬರಲು ಸಾಧ್ಯವಾಗಿಲ್ಲ, ಅದೇ ಯೋಜನೆಯಡಿ ಇದೀಗ ಪೈಪಲೈನ್ ಮೂಲಕ ನೀರು ಕೊಡಲು ನಿರ್ಧರಿಸಿದ್ದು, ಟೆಂಡರ್ ಪ್ರಕ್ರಿಯೆ ಬಳಿಕ ಕಾಮಗಾರಿಗೆ ಚಾಲನೆ ನೀಡುವುದಾಗಿ ಶಾಸಕ ಬಸವರಾಜ ಶಿವಣ್ಣನವರ ತಿಳಿಸಿದರು.
ನೀರಾವರಿ ಯೋಜನೆಗಳಿಲ್ಲದೇ ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ವರ್ಷಕ್ಕೆ ಎರಡೆರಡು ಬೆಳೆ ತೆಗೆಯಬೇಕಾಗಿದ್ದ ಕಡೆಗೆ ಮಳೆಯನ್ನಾಧರಿಸಿ ಒಂದೇ ಬೆಳೆಗೆ ಸೀಮಿತವಾಗಿದೆ. ರೈತರ ನೆರವಿಗೆ ಬಂದಿರುವ ರಾಜ್ಯ ಸರ್ಕಾರ ₹ 115 ಕೋಟಿ ವೆಚ್ಚದಲ್ಲಿ ಕಾಲುವೆ ಬದಲಾಗಿ ಪೈಪಲೈನ್ ಮೂಲಕ ನೀರು ಹರಿಸಲು ನಿರ್ಧರಿಸಿದ್ದು ಯೋಜನೆಯಡಿ ಕಾಮಗಾರಿಗೆ ₹ 50 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಹಂತಕ್ಕೆ ಬಂದಿದೆ ಎಂದರು.
ಹಿರೇಹಳ್ಳಿ ಗ್ರಾಮದ ಲಿಂ.ಗುಬ್ಬಿ ಅಜ್ಜಯ್ಯನವರ ಹೊಂಡದ ಅಭಿವೃದ್ಧಿಗೆ ಕಳೆದ 2013 ಶಾಸಕನಾಗಿದ್ದಾಗ ₹ 50 ಲಕ್ಷ ನೀಡಿದ್ದೆ, ಇದೀಗ ಮತ್ತೆ ₹ 70 ಲಕ್ಷ ಅನುದಾನ ಬಿಡುಗಡೆ ಮಾಡಿಸಿದ್ದೇನೆ, ಕಾಮಗಾರಿ ಪೂರ್ಣಗೊಳಿಸಲು ₹ 1 ಕೋಟಿ ಅಗತ್ಯವಿದ್ದು ಮಂಜೂರು ಮಾಡಿಸಲಾಗುವುದು, ಗ್ರಾಮದ ಗಜೇಶ್ವರ ದೇವಸ್ಥಾನದ ಗೋಪುರ ಮತ್ತು ಕಂಪೌಂಡ್ ನಿರ್ಮಿಸಲು ಕೂಡ ಶೀಘ್ರದಲ್ಲೇ ಅನುದಾನ ನೀಡುವುದಾಗಿ ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ. ಕೋಟಿ ಮಾತನಾಡಿ, ತಾಲೂಕಿನ ಬಹುತೇಕ ಶಾಲೆಗಳಲ್ಲಿ ಕೊಠಡಿ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಬಿಸಲಹಳ್ಳಿ, ಕಾಕೋಳ, ಬ್ಯಾಡಗಿ ಸೇರಿದಂತೆ ಹಲವಡೆ ಕರ್ನಾಟಕ ಪಬ್ಲಿಕ ಶಾಲೆಗಳನ್ನು ಮಂಜೂರು ಮಾಡಿಸಿದ್ದು, ನರ್ಸರಿಯಿಂದ ಪಿಯುಸಿವರೆಗೂ ಕನ್ನಡ ಮತ್ತು ಇಂಗ್ಲೀಷ್ ಮಾದ್ಯಮಗಳಲ್ಲಿ ಶಿಕ್ಷಣ ಲಭ್ಯವಿದೆ ಎಂದರು.