ಶಿಗ್ಗಾವಿ: ಕನ್ನಡ ಕಟ್ಟುವ ಕೆಲಸ ವೇದಿಕೆಗಳಿಂದ ಆಗುವುದಿಲ್ಲ. ಮನಸ್ಸುಗಳನ್ನು ಕಟ್ಟುವುದರಿಂದ ಕನ್ನಡ ಹೆಮ್ಮರವಾಗಿ ಬೆಳೆಸಬಹುದಾಗಿದೆ ಎಂದು ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ಶುದ್ಧ ಮನಸ್ಸಿನಿಂದ ಮಾಡುವ ಕಾರ್ಯಗಳಲ್ಲಿ ಕನ್ನಡ ಕಟ್ಟುವ ಕಾಯಕ ಒಂದಾಗಿದೆ. ಕನ್ನಡ ಕಟ್ಟಿ ಬೆಳೆಸುವುದು ಜೀವನದ ಉದ್ದೇಶವಾಗಿ ನಾವೆಲ್ಲ ಕೆಲಸ ಮಾಡಿ ಮುಂದಿನ ಪೀಳಿಗೆಗಳಿಗೆ ಮತ್ತಷ್ಟು ಸಮೃದ್ಧ ಕನ್ನಡವನ್ನು ಇಟ್ಟು ಹೋಗಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕಸಾಪ ಅಧ್ಯಕ್ಷ ನಾಗಪ್ಪ ಬೆಂತೂರ ವಹಿಸಿ ಮಾತನಾಡಿದರು. ಸಾಹಿತ್ಯದ ವಿವಿಧ ಪ್ರಕಾರಗಳನ್ನು ಬೆಳೆಸುವುದು ಸಾಧನೆಯಾಗಿದೆ. ಸಾಹಿತ್ಯ, ಕಲೆ, ಜಾನಪದ ಸೇರಿದಂತೆ ಕನ್ನಡವನ್ನು ಕಟ್ಟಿ ಬೆಳೆಸಬಹುದಾದ ಕ್ಷೇತ್ರಗಳಲ್ಲಿ ಯುವಕರು ಮುಂದೆ ಬರಬೇಕು. ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಒತ್ತಾಸೆಯಾಗಿ ನಿಲ್ಲಲಿದೆ. ಪಟ್ಟಣ ಪ್ರದೇಶಗಳಲ್ಲಿ ಅಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕನ್ನಡವನ್ನು ಹಮ್ಮಿಕೊಂಡು ಕನ್ನಡವನ್ನು ಕಟ್ಟುವ ಕಾರ್ಯ ಮಾಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಚನ್ನಪ್ಪ ಕುನ್ನೂರ ಶಾಲೆಯ ಪ್ರಾಚಾರ್ಯ ಡಾ. ನಾಗರಾಜ್ ದ್ಯಾಮನಕೊಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಹುಟ್ಟು, ಇತಿಹಾಸ ಕುರಿತು ಉಪನ್ಯಾಸ ಮಾಡಿದರು.
ಆರ್.ಎಸ್. ರಟ್ಟಳ್ಳಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಬಂಕಾಪೂರ ಹೋಬಳಿ ಕಸಾಪ ಅಧ್ಯಕ್ಷ ಎ.ಕೆ. ಅದ್ವಾನಿಮಠ ವಂದಿಸಿದರು.
ಬಸವರಾಜ್ ಶಿಗ್ಗಾವಿ ಹಾಗೂ ಶರೀಫ್ ಮಾಕಪ್ಪನವರ ಕಲಾ ಬಳಗ ಜಾನಪದ ಗೀತೆಗಳನ್ನು ಹೇಳಿದರು.