ತಮ್ಮ ಆಸ್ತಿಗೆ ಬೆಲೆ ಬರಲೇಂದು ದೂರದಲ್ಲಿ ಪ್ರಜಾಸೌಧ ನಿರ್ಮಾಣ

KannadaprabhaNewsNetwork |  
Published : Jun 01, 2025, 02:00 AM IST
ರಟಗಿಯಲ್ಲಿ ಮಾಜಿ ಶಾಸಕ ಬಸವರಾಜ ದಢೇಸ್ಗೂರು ಕೆರೆ ಪ್ರದೇಶದಲ್ಲಿ ಉಳಿದ ಭೂಮಿಯ ವಿವರಗಳನ್ನು ನಕ್ಷೆ ಪ್ರದರ್ಶಿಸಿದರು. | Kannada Prabha

ಸಾರಾಂಶ

ಕೆರೆ ಪ್ರದೇಶ ಎನ್ನುವ ನೆಪ ಹೇಳುವುದು, ಪದೇ ಪದೇ ಸುಪ್ರೀಂಕೋರ್ಟ್‌ನ ಗುಮ್ಮ ತೋರಿಸುತ್ತಾ ಜನರಿಗೆ ನಿಲುಕುವಷ್ಟು ದೂರದಲ್ಲಿ ನಿರ್ಮಿಸಬೇಕಾದ ಪ್ರಜಾಸೌಧವನ್ನು ಮತ್ತೆಲ್ಲೋ ನಿರ್ಮಿಸುವುದಕ್ಕೆ ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ.

ಕಾರಟಗಿ:

ಪಟ್ಟಣದ ಮಧ್ಯಭಾಗದ ಕೆರೆಯ ಜಾಗದಲ್ಲಿಯೇ ಪ್ರಜಾಸೌಧ ಕಟ್ಟುವುದನ್ನು ಬಿಟ್ಟು, ತಮ್ಮ ಆಸ್ತಿಗೆ ಬೆಲೆ ಬರಲಿ ಎನ್ನುವ ನಿರ್ಧಾರಕ್ಕೆ ಬಂದಿರುವ ಸಚಿವ ಶಿವರಾಜ ತಂಗಡಗಿ ದೂರದ ಪ್ರದೇಶದಲ್ಲಿ ಪ್ರಜಾಸೌಧ ಕಟ್ಟಿಸುವುದು ಎಷ್ಟು ಸರಿ, ಇದು ಜನವಿರೋಧಿ ನೀತಿ ಎಂದು ಮಾಜಿ ಶಾಸಕ ಬಸವರಾಜ ದಢೇಸೂಗೂರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಸರ್ವೇ ನಂ.೪೧೬ರಲ್ಲಿನ ೩೬ ಎಕರೆ ಪ್ರದೇಶದಲ್ಲಿಯೇ ಸರ್ಕಾರಿ ಕಚೇರಿಗಳು ಆರಂಭವಾಗಲಿ ಎಂದು ಭೂಮಿ ವಿಂಗಡಿಸಲಾಗಿತ್ತು. ಈ ಹಿಂದೆ ನನ್ನ ಅವಧಿಯಲ್ಲಿ ಪಟ್ಟಣಕ್ಕೆ ನೀರಿನ ಕೊರತೆಯಾಗಬಾರದು ಎನ್ನುವ ದೃಷ್ಟಿಯಿಂದ ಬೃಹತ್ ಕೆರೆ ನಿರ್ಮಿಸಿದೆ. ಸರ್ಕಾರಿ ಕಚೇರಿಗಳಿಗೂ ಭೂಮಿಯ ಕೊರತೆಯಾಗದಿರಲಿ ಎಂದು ದೂರದೃಷ್ಟಿಯಿಂದ ಸ್ಥಳೀಯರ ಭಾವನೆ ಅರಿತು ವಿವಿಧ ಇಲಾಖೆಗಳ ಹೆಸರಿಗೆ ಹಂಚಿಹೋಗಿದ್ದ ೩೬ ಎಕರೆ ಜಮೀನಿನಲ್ಲಿ ೧೩ ಎಕರೆಯನ್ನು ಕೆರೆಯಾಗಿ ಮಾರ್ಪಡಿಸಿ, ಉಳಿದ ೬ ಎಕರೆ ಜಾಗವನ್ನು ಕಂದಾಯ ಇಲಾಖೆ ಹೆಸರಿನಲ್ಲಿಯೇ ಉಳಿಸಿ ಪ್ರಜಾಸೌಧ ನಿರ್ಮಿಸಲು ನೀಲಿನಕ್ಷೆ ತಯಾರಿಸಿದ್ದೆ. ಆದರೆ, ಚುನಾವಣೆ ಬಂದ ಕಾರಣಕ್ಕೆ ಅದು ಪೂರ್ತಿಯಾಗಲಿಲ್ಲ ಎಂದರು.

ನನ್ನ ಅವಧಿಯಲ್ಲಿ ನಿರ್ಮಿಸಿದ ಕೆರೆ ಬಗ್ಗೆ ವ್ಯಂಗ್ಯವಾಡುತ್ತಾ ಜನರ ದಾರಿ ತಪ್ಪಿಸಿದರು. ಈಗ ಜೂರಟಗಿ ಬಳಿ ಖರೀದಿಸಿರುವ ಆಸ್ತಿಗೆ ಚಿನ್ನದ ಬೆಲೆ ಕೊಡಿಸುವ ಉದ್ದೇಶದಿಂದ ತಮ್ಮ ಜಮೀನು ಹತ್ತಿರದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗ ಮಧ್ಯಭಾಗದಲ್ಲಿನ ಕೆರೆ ಪ್ರದೇಶದಲ್ಲಿ ೬ ಎಕರೆ ಜಾಗೆ ಕಂದಾಯ ಇಲಾಖೆಯ ಹೆಸರಿನಲ್ಲಿಯೇ ಇದೆ. ನಿಮಗೆ ಇನ್ನು ಹೆಚ್ಚು ಭೂಮಿ ಬೇಕಾದರೆ, ಕೆಎಸ್‌ಆರ್‌ಟಿಸಿ ಹೆಸರಿನಲ್ಲಿರುವ ೪ ಎಕರೆ ಜಾಗೆವನ್ನು ಕೂಡಾ ಕಂದಾಯ ಇಲಾಖೆ ಹೆಸರಿನಲ್ಲಿ ಮಾಡಿಸಿಕೊಂಡು ಪ್ರಜಾಸೌಧಕ್ಕೆ ನಿರ್ಮಾಣ ಮಾಡಬಹುದಲ್ಲ ಎಂದು ದಢೇಸೂಗೂರು ಪ್ರಶ್ನಿಸಿದ್ದಾರೆ.

ಅಲ್ಲಿ ಕೆಲ ಇಲಾಖೆಗಳಿಗೆ ಯಥೇಚ್ಛ ಭೂಮಿ ಸಿಕ್ಕಂತಾಗಲಿಲ್ಲವೆ. ಡಿಪೋಕ್ಕೆ ಬೇಕಾದರೆ ಊರ ಹೊರಗಿನ ಜೂರಟಗಿ ಬಳಿಯ ಜಾಗೆದಲ್ಲಿ ನೀವು ಶಿಫ್ಟ್ ಮಾಡಲು ಸಾಧ್ಯವಿದೆ. ಅದು ಬಿಟ್ಟು ಬೇರೆ ಇಲಾಖೆಗೆ ಜಾಗೆ ಮಾಡಿಸಲು ಬರುವುದಿಲ್ಲ ಎನ್ನುವ ಸಬೂಬು ಹೇಳುವ ನಿಮ್ಮ ಮಾತು ಸರಿಯಲ್ಲ. ನಾನು ಕೆರೆಗೆಂದೆ ೧೩ ಎಕರೆ ಜಾಗ ಮಾಡಿಸಿ ಇಲಾಖೆ ಬದಲಾವಣೆಯಲ್ಲಿ ಯಶ ಕಂಡಿರುವಾಗ ಸಚಿವರಾದ ನಿಮ್ಮಿಂದ ಈ ಕೆಲಸ ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದರು. ಪ್ರಜಾಸೌಧಕ್ಕೆ ಕೆರೆ ಅಲ್ಲದ, ಕಂದಾಯ ಇಲಾಖೆ ಹೆಸರಿನಲ್ಲಿರುವ ಭೂಮಿಯ ವಿವರವುಳ್ಳ ನಕ್ಷೆ ತೋರಿಸಿ ಸಚಿವರ ಮೇಲೆ ಹರಿಹಾಯ್ದರು.

ಕೆರೆ ಪ್ರದೇಶ ಎನ್ನುವ ನೆಪ ಹೇಳುವುದು, ಪದೇ ಪದೇ ಸುಪ್ರೀಂಕೋರ್ಟ್‌ನ ಗುಮ್ಮ ತೋರಿಸುತ್ತಾ ಜನರಿಗೆ ನಿಲುಕುವಷ್ಟು ದೂರದಲ್ಲಿ ನಿರ್ಮಿಸಬೇಕಾದ ಪ್ರಜಾಸೌಧವನ್ನು ಮತ್ತೆಲ್ಲೋ ನಿರ್ಮಿಸುವುದಕ್ಕೆ ಮುಂದಾಗಿರುವುದಕ್ಕೆ ನಮ್ಮ ವಿರೋಧವಿದೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆ ವ್ಯಕ್ತಪಡಿಸುವುದಾಗಿ ಸ್ಪಷ್ಟಪಡಿಸಿದರು.

ಇದೇ ವೇಳೆ ಮುಖಂಡ ನಾಗರಾಜ್ ಬಿಲ್ಗಾರ್ ಮಾತನಾಡಿ, ಸಚಿವ ಶಿವರಾಜ ತಂಗಡಗಿ ಅವರು ಅಭಿವೃದ್ಧಿ ಮಾಡದೇ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಯಾವುದು ಶಾಶ್ವತವಲ್ಲ ಎನ್ನುವ ಅರಿವು ಇರಬೇಕಿತ್ತು. ಬೆನ್ನೂರು ಏತ ನೀರಾವರಿ ಕಾಮಗಾರಿಯನ್ನು ಪೂರ್ತಿಗೊಳಿಸದೇ ರೈತರಿಗೆ ಮೋಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಪುರಸಭೆ ಮಾಜಿ ಸದಸ್ಯ ಜಿ. ತಿಮ್ಮನಗೌಡ, ದುರ್ಗಾರಾವ್, ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೌನೇಶ ದಢೇಸೂಗೂರು, ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ರೈತ ಮೋರ್ಚಾದ ವಿಕ್ರಂ ಮೇಟಿ ಬೇವಿನಾಳ, ಮಲ್ಲಯ್ಯ ಬೇವಿನಾಳ ಇನ್ನಿತರರು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್