ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಲೆಮಹದೇಶ್ವರ ಬೆಟ್ಟದ ವಜ್ರಮಲೆ ಎದುರಿನ ಜರ್ಮನ್ ಟೆಂಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ 2025 ಸಾಲಿನ ಸಚಿವ ಸಂಪುಟ ಸಭೆಯಲ್ಲಿ 78 ವಿಷಯಗಳಿಗೆ ಸಂಬಂಧಿಸಿದಂತೆ ಸುಮಾರು ₹3647 ಕೋಟಿ 62 ಲಕ್ಷ ರುಗಳಷ್ಟು ವೆಚ್ಚದ ಅಭಿವೃದ್ಧಿ ಕಾರ್ಯಗಳಿಗೆ ಅಂಗೀಕಾರ ನೀಡಲಾಯಿತು. ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜು ಇದ್ದು, ಕಾಲೇಜು ಆಸ್ಪತ್ರೆ ಇರುವುದರಿಂದ ಕೊಳ್ಳೇಗಾಲದಲ್ಲಿ 250 ಹಾಸಿಗೆಯುಳ್ಳ ಜಿಲ್ಲಾ ಆಸ್ಪತ್ರೆ ಸ್ಥಾಪಿಸಲಾಗುವುದು ಮತ್ತು ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ ₹50 ಕೋಟಿ ವೆಚ್ಚದಲ್ಲಿ ಎಂಡೋಸ್ಕೋಪಿ ವಿಭಾಗ ತೆರೆಯಲಾಗುವುದು ಎಂದರು.
ಕೆರೆಗಳ ಸಮಗ್ರ ಅಭಿವೃದ್ಧಿ:ತಾಲೂಕಿನ ಮರಗದ ಕೆರೆ, ಯಡಿಯೂರು, ಅಡ್ಡಹಳ್ಳ ಕೆರೆ, ಅಮಚವಾಡಿ ಕೆರೆ, ಹಾಗೂ ಕಥನಾಯಕನ ಕೆರೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗೆ 11 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಯಿತು. ಜಿಲ್ಲಾ ಕೇಂದ್ರಕ್ಕೆ 2ನೇ ಹಂತದ ಒಳಚರಂಡಿ ವ್ಯವಸ್ಧೆ ಕಲ್ಪಿಸಲು 138.31 ಕೋಟಿ ಮತ್ತು ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಮಾಲಂಗಿ ಗ್ರಾಮದ ಬಳಿಯಿಂದ ಕಾವೇರಿ ನದಿ ಮೂಲದಿಂದ 3ನೇ ಹಂತದ ನೀರು ಸರಬರಾಜು ಮಾಡುವ 154.28 ಕೋಟಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.ಅಭಿವೃದ್ಧಿ ಪ್ರಾಧಿಕಾರ: ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ ಹಾಗೂ ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸಲು ತೀರ್ಮಾನ ಕೈಗೊಳ್ಳಲಾಯಿತು. ಬುಡಕಟ್ಟು ಜನರು ವಾಸಿಸುವ ಪ್ರದೇಶದಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಮಾನವ-ಆನೆ ಸಂಘರ್ಷ ತಡೆಗಟ್ಟಲು ₹210 ಕೋಟಿ ರು.ಗಳನ್ನು ವಿನಿಯೋಗಿಸಲು ತೀರ್ಮಾನ ಕೈಗೊಳ್ಳಲಾಯಿತು. 8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ:ಮತ್ತು ತಾಲೂಕು ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್ ಕೆ ಪಾಟೀಲ್, ಮಹಾದೇವಪ್ಪ, ಸುಧಾಕರ್, ಎ.ಆರ್. ಕೃಷ್ಣಮೂರ್ತಿ, ಪುಟ್ಟರಂಗಶೆಟ್ಟಿ, ಎಂ.ಆರ್. ಮಂಜುನಾಥ್ ಇತರರು ಇದ್ದರು.ಉಳುವವನೆ ಒಡೆಯ:
ಗ್ಯಾರಂಟಿ ಯೋಜನಗಳಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಹಣ ಖಾಲಿಯಾಗಿದೆ ಎಂದು ಎಂದು ಬಿಜೆಪಿಗರು ಸುಳ್ಳು ಹೇಳುತ್ತಾರೆ.ಇಷ್ಟು ದೊಡ್ಡ ನಿರ್ಣಯ ಮಹದೇಶ್ವರ ಬೆಟ್ಟದಲ್ಲಿ ಇವತ್ತು ಆಗಿದೆ. ಬಿಜೆಪಿಯವರ ಸುಳ್ಳಿಗೆ 3647 ಕೋಟಿ ರು. ಯೋಜನೆಗಳಿಗೆ ಅಂಗೀಕಾರ ನೀಡುವ ಮೂಲಕ ಉತ್ತರ ನೀಡಿದ್ದೇವೆ. ಸರ್ಕಾರದ ಬಳಿ ಹಣ ಇಲ್ಲದೇ ಇದೆಲ್ಲ ಸಾಧ್ಯವಾ ನಾವು ಗ್ಯಾರಂಟಿಗೆ ಹಣ ಬಳಸುತ್ತಾರೆ ಎಂದು ಸುಳ್ಳು ಹೇಳ್ತಾರೆ. ಹೀಗಾಗಿ ಬಿಜೆಪಿ ಅವರಿಗೆ ತಿಳಿಸಿ.ನಿಮಗೆ ಕಳಕಳಿಯ ಮನವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.