ರೈತರ ಕೈಹಿಡಿದ ಗೊಂಚಲು ಈರುಳ್ಳಿ

KannadaprabhaNewsNetwork |  
Published : Apr 05, 2025, 12:45 AM IST
ಸಮೃದ್ಧ ಬೆಳೆ ಕೈಹಿಡಿದ ಸಂಭ್ರಮದಲ್ಲಿ ನಾಗೇಶ ನಾಯ್ಕ  | Kannada Prabha

ಸಾರಾಂಶ

ಈರುಳ್ಳಿಗೆ ತಗುಲಿದ್ದ ರೋಗದಿಂದ 4-5 ವರ್ಷಗಳಿಂದ ತತ್ತರಿಸಿದ್ದ ಬೆಳೆಗಾರರು, ರೋಗ ಹತೋಟಿಗೆ ತಂದು ಬೆಳೆ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ವಸಂತಕುಮಾರ್ ಕತಗಾಲ

ಕಾರವಾರ: ಈರುಳ್ಳಿಗೆ ತಗುಲಿದ್ದ ರೋಗದಿಂದ 4-5 ವರ್ಷಗಳಿಂದ ತತ್ತರಿಸಿದ್ದ ಬೆಳೆಗಾರರು, ರೋಗ ಹತೋಟಿಗೆ ತಂದು ಬೆಳೆ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಈ ಬಾರಿ ಕುಮಟಾದ ಅಳ್ವೆಕೋಡಿ, ಹಂದಿಗೋಣದಲ್ಲಿ ಹೆದ್ದಾರಿಯ ಇಕ್ಕೆಲದಲ್ಲಿ ಜಡೆ ಈರುಳ್ಳಿಯ ಹಂಗಾಮು ಶುರುವಾಗಿದೆ. ಈರುಳ್ಳಿ ಬೆಳೆಗೆ ಹಾವು ಸುಳಿರೋಗ ತಗುಲಿ 4-5 ವರ್ಷಗಳಿಂದ ಇಳುವರಿ ತೀರಾ ಕುಂಠಿತವಾಗಿತ್ತು. ಕೆಲವು ರೈತರು ಈರುಳ್ಳಿ ಬೆಳೆಯುವುದನ್ನೇ ನಿಲ್ಲಿಸಿದ್ದರು. ಛಲ ಬಿಡದೇ ಕೆಲವು ರೈತರು ಬೆಳೆಗೆ ತಾವಾಗಿಯೇ ಕೀಟನಾಶಕಗಳನ್ನು ಪ್ರಯೋಗ ಮಾಡಿ ಯಶಸ್ಸು ಗಳಿಸಿದ್ದಾರೆ. ಇವರಲ್ಲಿ ವನ್ನಳ್ಳಿಯ ನಾಗೇಶ ಸೀತಾರಾಮ ನಾಯ್ಕ ಪ್ರಮುಖರು.

ಪ್ರತಿ ವರ್ಷ 75-80 ಕ್ವಿಂಟಲ್ ಬೆಳೆಯುತ್ತಿದ್ದ ನಾಗೇಶ ನಾಯ್ಕ, 5 ವರ್ಷಗಳ ಹಿಂದೆ ಹಾವು ಸುಳಿ ರೋಗದಿಂದಾಗಿ ಬೆಳೆಯನ್ನೆಲ್ಲ ಕಳೆದುಕೊಂಡ ತರುವಾಯ ಈರುಳ್ಳಿ ಬೆಳೆಯುವುದನ್ನೇ ಬಿಟ್ಟಿದ್ದರು. ಆದರೆ ಯಾವ ಅಧಿಕಾರಿಯೂ ಇವರಿಗೆ ಕೀಟನಾಶಕ ಬಳಕೆ ಸೇರಿದಂತೆ ಯಾವುದೇ ಮಾಹಿತಿ ನೀಡಲಿಲ್ಲ. ಈ ಸಲ ಪ್ರಯೋಗಕ್ಕಿಳಿದ ನಾಗೇಶ ನಾಯ್ಕ ಕೀಟನಾಶಕ ಬಳಕೆ ಮಾಡಿ 25 ಕ್ವಿಂಟಲ್‌ನಷ್ಟು ಈರುಳ್ಳಿ ಬೆಳೆಯುವಲ್ಲಿ ಸಫಲರಾಗಿದ್ದಾರೆ. ಅವರಿಂದ ಮಾರಾಟಗಾರರು ಪ್ರತಿ ಕಿಗ್ರಾಂಗೆ ₹80-90ನಂತೆ ಖರೀದಿಸುತ್ತಿದ್ದಾರೆ. ಮುಂದಿನ ವರ್ಷದಿಂದ ಹಿಂದಿನಂತೆ 75-80 ಕ್ವಿಂಟಲ್ ಬೆಳೆಯುವ ಕನಸು ಕಂಡಿದ್ದಾರೆ.

ವನ್ನಳ್ಳಿಯ ಬಾಬು ನಾಯ್ಕ ಸಹ ಪ್ರಗತಿಪರ ಈರುಳ್ಳಿ ಕೃಷಿಕರು. ಈರುಳ್ಳಿ ಬೆಳೆಗೆ ರೋಗ ನಿವಾರಣೆಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ರೋಗ ನಿವಾರಣೆಯಲ್ಲಿ ಸಫಲರಾದ ನಾಗೇಶ ನಾಯ್ಕ ಅವರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈರುಳ್ಳಿ ಬೆಳೆಯುವುದನ್ನೇ ನಿಲ್ಲಿಸಿದ್ದ ಸುಮಾರು 10 ರೈತರು ಈ ಬಾರಿ ರೋಗ ನಿಯಂತ್ರಿಸಿ ಈರುಳ್ಳಿ ಬೆಳೆಯುವುದರಲ್ಲಿ ಯಶಸ್ವಿಯಾಗಿದ್ದಾರೆ.

ಕುಮಟಾದ ವನ್ನಳ್ಳಿ, ಅಳ್ವೆಕೋಡಿ, ಹಂದಿಗೋಣಗಳಲ್ಲಿ ಬೆಳೆಯುವ ಜಡೆ ಈರುಳ್ಳಿ, ಸ್ವಲ್ಪ ಸಿಹಿಯಾಗಿ ವರ್ಷವಿಡೀ ಬಾಳಿಕೆ ಬರುವುದರಿಂದ ಜನತೆ ಮುಗಿಬಿದ್ದು ಖರೀದಿಸುತ್ತಾರೆ. ಈಗ ಅಳ್ವೆಕೋಡಿ, ಹಂದಿಗೋಣದ ಹೆದ್ದಾರಿಯ ಇಕ್ಕೆಲಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಪ್ರತಿ ಕಿಗ್ರಾಂಗೆ ₹100-110 ದರ ಇದ್ದರೂ ಜನತೆ ಖರೀದಿಸುತ್ತಿದ್ದಾರೆ.

ಈರುಳ್ಳಿ ಬೆಳೆಗೆ ತಗುಲಿದ ರೋಗದಿಂದ ಬೆಳೆಗಾರರು ತತ್ತರಿಸಿದ್ದರೂ ಸರ್ಕಾರಿ ಅಧಿಕಾರಿಗಳು ನೆರವಿಗೆ ಬರಲಿಲ್ಲ. ಆದರೆ ಬದುಕಿನ ಪ್ರಶ್ನೆ. ಹಾಗಾಗಿ ನಾನೇ ಪ್ರಯೋಗ ಮಾಡಿ ಸಫಲನಾದೆ ಎನ್ನುತ್ತಾರೆ ಈರುಳ್ಳಿ ಬೆಳೆಗಾರ ನಾಗೇಶ ಸೀತಾರಾಮ ನಾಯ್ಕ.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ