ಅನುದಾನಿತ ಶಿಕ್ಷಣ ಸಂಸ್ಥೆಗಳ ಮೇಲೆ ತೂಗುಗತ್ತಿ

KannadaprabhaNewsNetwork |  
Published : Jun 12, 2025, 02:38 AM IST
1-ಎನ್ಪಿ ಕೆ-2ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮದಲ್ಲಿರುವ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆ.11-ಎನ್ಪಿ ಕೆ-3   ಕೋಚನ ಲವೀನಾ  | Kannada Prabha

ಸಾರಾಂಶ

ಸಾವಿರಾರು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಬೆಳಕಾಗಿದ್ದ ಶಾಲೆಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿದೆ. ಹಲವು ಶಾಲೆಗಳು ಮುಚ್ಚವ ಹಂತದಲ್ಲಿದೆ.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲುಇವು ಸರ್ಕಾರಿ ಶಾಲೆಗಳಲ್ಲ. ಖಾಸಗಿ ಶಾಲೆಗಳೂ ಅಲ್ಲ. ಅನುದಾನಿತ ಶಾಲೆಗಳು. ಒಂದು ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಶಾಲೆಗಳು. ಅಚ್ಚುಕಟ್ಟಾದ ಶಾಲೆಗಳು. ಸಕಲ ಮೂಲಭೂತ ಸೌಲಭ್ಯ, ಉತ್ತಮ ಗುಣಮಟ್ಟ, ಉತ್ತಮ ಫಲಿತಾಂಶಗಳಿಂದ ಹೆಸರು ಮಾಡಿದ ಶಾಲೆಗಳು ಇಂದು ಸದ್ದಿಲ್ಲದೆ

ಮುಚ್ಚುತ್ತಿವೆ. ಸಾವಿರಾರು ಗ್ರಾಮೀಣ ಪ್ರದೇಶದ ಮಕ್ಜ ಳಿಗೆ ಬೆಳಕಾಗಿದ್ದ ಶಾಲೆಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತಿವೆ. ವಿದ್ಯಾರ್ಥಿಗಳ, ಶಿಕ್ಷಕರ ಕೊರತೆಯಿಂದ ನಲುಗುತ್ತಿರುವ ಇನ್ನೂ ಹಲವು ಶಾಲೆಗಳು ಮುಚ್ಚುವ ಹಂತದಲ್ಲಿವೆ.

ಇವು ಖಾಸಗಿ ಅನುದಾನಿತ ಶಾಲೆಗಳ ಇಂದಿನ ಪರಿಸ್ಥಿತಿ. ಕೆಲವೇ ಕೆಲವು ಶಾಲೆಗಳು ಮಾತ್ರ ಆ ಶಾಲೆಗಳ ಶಿಕ್ಷಕರ ಪ್ರಯತ್ನದಿಂದ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಿವೆ. ಆಡಳಿತ ಮಂಡಳಿಗಳು ಶಾಲೆ ನಡೆಸಲಾರದೇ ತಮ್ಮ ಪ್ರಯತ್ನವನ್ನು ಕೈಬಿಟ್ಟಿದ್ದಾರೆ.

ಕಳೆದ ವರ್ಷ ಮಡಿಕೇರಿ ತಾಲೂಕಿನಲ್ಲಿ ಕಡಂಗ, ಮಡಿಕೇರಿಯ ಶ್ರೀರಾಜರಾಜೇಶ್ವರಿ ಶಾಲೆಗಳು ಮುಚ್ಚಿದ್ದವು. ಅದಕ್ಕೂ ಮುನ್ನ ಮದೆನಾಡು, ಗರ್ವಾಲೆ ಶಾಲೆಗಳಿಗೆ

ಬೀಗ ಹಾಕಲಾಗಿತ್ತು.

ಈ ವರ್ಷ ಬಾಗಿಲು ಮುಚ್ಚಲಿದೆ 62 ವರ್ಷ ಇತಿಹಾಸದ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆ. ಅದರೊಂದಿಗೆ ಚೆಯ್ಯಂಡಾಣೆಯ ನರಿಯಂದಡ ಪ್ರೌಢಶಾಲೆಯೂ ಈ ವರ್ಷ ಮುಚ್ಚಿದೆ.

ಬೆಟ್ಟಗೇರಿಯ ಉದಯ ಪ್ರೌಢಶಾಲೆ, ಬಲ್ಲಮಾವಟಿಯ ನೇತಾಜಿ ಪ್ರೌಢಶಾಲೆ, ಭಾಗಮಂಡಲದ ಕಾವೇರಿ ಪ್ರೌಢಶಾಲೆಗಳು ಸೇರಿದಂತೆ ಹಲವು ಶಾಲೆಗಳು ಮುಚ್ಚುವ ಹಂತದಲ್ಲಿವೆ ಎಂದು ಎನ್ನಲಾಗುತ್ತಿದೆ.

ಮಕ್ಕಳಿಗೆ ವರದಾನವಾಗಿದ್ದ ವಿದ್ಯಾಸಂಸ್ಥೆ: ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದಲ್ಲಿರುವ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆ 1963 ಜುಲೈನಲ್ಲಿ ಸ್ಥಾಪನೆಗೊಂಡಿತು. ಈ ಅನುದಾನಿತ ವಿದ್ಯಾಸಂಸ್ಥೆ ಇಲ್ಲಿಯವರೆಗೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಾ ಬಂದಿತ್ತು. ಗ್ರಾಮೀಣ ಭಾಗದ ಮಕ್ಕಳಿಗೆ ವರದಾನವಾಗಿದ್ದ ವಿದ್ಯಾಸಂಸ್ಥೆ ಇಂದು ಇತಿಹಾಸದ ಪುಟಗಳಲ್ಲಿ ಸೇರಿ ಹೋಗುತ್ತಿದೆ.ಸರ್ಕಾರದ ಈ ದ್ವಂದ್ವ ನಿಲುವುಗಳಿಂದ ರಾಜ್ಯದ ಸಾವಿರಾರು ಕನ್ನಡ ಶಾಲೆಗಳು ಮುಚ್ಚಿ ಹೋಗಿದ್ದು, ಇವುಗಳ ಸಾಲಿಗೆ ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆಯೂ ಸೇರ್ಪಡೆಯಾಗಲಿದೆ.ಇದೇ ಹಾದಿಯಲ್ಲಿದ್ದ ನರಿಯಂದಡ ಪ್ರೌಢಶಾಲೆಯೂ ನುರಿತ ಶಿಕ್ಷಕರ ಪಾಠ, ಉತ್ತಮ ಫಲಿತಾಂಶ, ಮೂಲಭೂತ ಸೌಲಭ್ಯಗಳ ಲಭ್ಯತೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ತೋರಿದ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿತ್ತು. ಮಕ್ಕಳ ಕೊರತೆಯಿಂದ ,ತನ್ನ ಒಳ ಬೇಗುದಿಯಿಂದ ಈ ವರ್ಷ ಮುಚ್ಚಿದ್ದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸಮಸ್ಯೆಯಾಗಿದೆ.

ಚರ್ಚೆ ನಡೆಸುವುದು ಅನಿವಾರ್ಯ

ಮುಂದಿನ 3-4 ವರ್ಷಗಳಲ್ಲಿ ಕೊಡಗಿನ ಬಹುತೇಕ ಅನುದಾನಿತ ಶಾಲೆಗಳು ಇದೇ ಹಾದಿ ತುಳಿಯಲಿದೆ. ಈ ದಿವಸ ಅವರ ಶಾಲೆ ಮುಚ್ಚುತ್ತಿದೆ. ಮುಂದಿನ ದಿವಸಗಳಲ್ಲಿ ನಮ್ಮ ಶಾಲೆಗೆ ಇದೇ ಗತಿ. ಇದಕ್ಕೆ ಪರಿಹಾರವೇನು ಎಂಬುದರ ಬಗ್ಗೆ ನಾವು ಕಿಂಚಿತ್ತು ಚಿಂತಿಸದಿರುವುದು ವಿಪರ್ಯಾಸವೇ ಸರಿ. ಕೊಡಗಿನ ಅನುದಾನಿತ ಶಾಲೆಯ ಜಿಲ್ಲಾ ಸಂಘಟನೆಯ ತುರ್ತು ಸಭೆಯನ್ನು ಕರೆದು ಎಲ್ಲಾ ಶಾಲೆಯ ಅನುದಾನಿತ ನೌಕರರನ್ನು ಆಹ್ವಾನಿಸಿ ಈ ವಿಷಯದ ಬಗ್ಗೆ ಚರ್ಚೆಯನ್ನು ನಡೆಸುವುದು ಅನಿವಾರ್ಯವಾಗಿದೆ.

ಮುಚ್ಚುತ್ತಿರುವ ಶಾಲೆಗಳ ಕುರಿತು ಪ್ರತಿಕ್ರಿಯಿಸಿರುವ ಅನುದಾನಿತ ಶಾಲೆಗಳ ಸಂಘದ ಪದಾಧಿಕಾರಿಗಳು, ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಅನುದಾನಿತ ಶಿಕ್ಷಣ ಸಂಸ್ಥೆ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುತ್ತಾರೆ. ಆದರೆ ಅನುದಾನಿತ ಶಿಕ್ಷಣ ಸಂಸ್ಥೆಯನ್ನು ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಗಳ ಮೇಲೆ ಅಥವಾ ಶಾಲೆಗಳ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳದೆ ಇರುತ್ತಾರೆ. ಇದೆಲ್ಲ ನಮ್ಮ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಒಗ್ಗಟ್ಟಿನ ಬಲ ಇಲ್ಲದೆ ಇರುವುದು ಎಂದು ತಮ್ಮ ಅಳಲು ತೋಡಿಕೊಂಡರು.

ಶಾಲೆಗಳು ಮುಚ್ಚುವ ಹಂತಕ್ಕೆ ಬರುತ್ತಿದ್ದಂತೆ ಕೆಲವೆಡೆ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರ ನಡುವೆ ತಿಕ್ಕಾಟಕ್ಕೂ ಕಾರಣವಾಗಿದೆ. ಯಾವುದೇ

ಹಂತದಲ್ಲಿ ಕನ್ನಡ ಶಾಲೆಗಳು ಉಳಿವು ಸಾಧ್ಯವಿಲ್ಲ ಎಂದು ಮನಗಂಡ ಕೆಲವು ಆಡಳಿತ ಮಂಡಳಿಗಳು ಮಠಮಾನ್ಯಗಳಿಗೆ ನೀಡುವ ಬಗ್ಗೆ ಆಲೋಚಿಸಿದ್ದು ಇದಕ್ಕೆಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. 50 ವರ್ಷಗಳಿಗೂ ಹಿಂದೆ ಹಿರಿಯರು ಕಷ್ಟಪಟ್ಟು ಆರಂಭಿಸಿದ ಶಾಲೆಗಳನ್ನು , ಹತ್ತಾರು ಏಕ್ರೆ ಅಮೂಲ್ಯ ಆಸ್ತಿಯನ್ನು ಇತರರಿಗೆ ನೀಡಲು ಸ್ಥಳೀಯರ ಪ್ರಬಲ ವಿರೋಧವಿದೆ. ಹಾಗಿದ್ದರೆ ಶಾಲೆಯ ಆಸ್ತಿಪಾಸ್ತಿಗೆ ಹೊಣೆ ಯಾರು ಎಂಬುದು ಎಲ್ಲರ ಮುಂದಿರುವ ಪ್ರಶ್ನೆ.

ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳ ದಾಖಲಾತಿಯನ್ನು ರದ್ದು ಪಡಿಸುವಂತೆ ಶಿಕ್ಷಣ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಈ ಕಾರಣದಿಂದಾಗಿ ಇಲ್ಲಿರುವ ವಿದ್ಯಾರ್ಥಿಗಳನ್ನು ಹಾಕತ್ತೋರು ಪ್ರೌಢ ಶಾಲೆಗೆ ಕಳುಹಿಸಿ ಕೊಡುವಂತೆ ಸೂಚಿಸಲಾಗಿದೆ. ಕಳೆದ ವರ್ಷದಲ್ಲಿ 67 ವಿದ್ಯಾರ್ಥಿಗ

ಗಳಿದ್ದರು. ಇಲ್ಲಿ ಸಿಬ್ಬಂದಿ ಸ್ಥಳಾವಕಾಶ ಇರುವ ಸಂಸ್ಥೆಗಳ ಹುಡುಕಾಟದಲ್ಲಿ ಇದ್ದಾರೆ. ವಿದ್ಯಾ ಸಂಸ್ಥೆಯ ಕಟ್ಟಡಗಳು ಹಾಗೂ ಮೂರು ಎಕರೆ ಕಾಫಿ ತೋಟ ಸೇರಿದಂತೆ ಒಟ್ಟು 6.5 ಎಕರೆ ಜಾಗಗಳಿದೆ.

। ಕೋಚನ ಲವೀನಾ

ಮರಗೋಡು ಭಾರತಿ ಸಂಯುಕ್ತ ವಿದ್ಯಾಸಂಸ್ಥೆ. ಆಡಳಿತ ಮಂಡಳಿ ಉಪಾಧ್ಯಕ್ಷ.

14 ರಂದು ಸಭೆ

ಕೊಡಗು ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆ ನಡೆಸುವ ಬಗ್ಗೆ ಜೂನ್ 14 ರಂದು ಶನಿವಾರ ಮದ್ಯಾಹ್ನ 2 ಗಂಟೆಗೆ ಮಡಿಕೇರಿಯಲ್ಲಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ವೇತನ ವಿಳಂಬ ಮತ್ತು ವೇತನ ತಡೆಹಿಡಿಯುತ್ತಿರುವ ಬಗ್ಗೆ, ಮಕ್ಕಳ ದಾಖಲಾತಿ ಕಡಿಮೆ ಇರುವ ಶಾಲೆಗಳಿಗೆ ನೋಟಿಸ್ ಜಾರಿ ಮಾಡುತ್ತಿರುವ ಬಗ್ಗೆ, 10ನೇ ತರಗತಿ ಫಲಿತಾಂಶ ಕಡಿಮೆ ಇರುವ ಶಾಲೆಗಳಿಗೆ ನೋಟಿಸ್ ಕೊಟ್ಟು ವೇತನ ತಡೆಹಿಡಿಯುತ್ತಿರುವ ಬಗ್ಗೆ, ಈಗಾಗಲೇ ಶಾಲೆ ಮುಚ್ಚಿರುವ ಶಿಕ್ಷಕರಿಗೆ ಪರ್ಯಾಯ ವ್ಯವಸ್ಥೆ ಏನು? ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಘಟಕ ಮತ್ತು ಮೂರು ತಾಲೂಕು (ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ) ಅಧ್ಯಕ್ಷರು /ಕಾರ್ಯದರ್ಶಿ ಗಳು ಮತ್ತು ಎಲ್ಲಾ ಪದಾಧಿಕಾರಿಗಳು ಅನುದಾನಿತ ಪ್ರೌಢಶಾಲಾ ಮತ್ತು ನೌಕರರ ಸಂಘದ ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!