ಕನ್ನಡಪ್ರಭ ವಾರ್ತೆ ಹನೂರು
ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ನಾಲಾ ರೋಡ್ ಗ್ರಾಮದಲ್ಲಿ ಜ್ಯೋತಿ ರವಿ ಎಂಬ ಬಡ ಕುಟುಂಬ ಜೀವನೋಪಾಯಕ್ಕಾಗಿ ಕಳೆದ 30 ವರ್ಷಗಳಿಂದ ಪೆಟ್ಟಿಗೆ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದು ಅರಣ್ಯಾಧಿಕಾರಿಗಳು ಬಡ ಕುಟುಂಬಕ್ಕೆ ಯಾವುದೇ ನೋಟಿಸ್ ಜಾರಿಗೊಳಿಸದೆ ಅವರ ಗಮನಕ್ಕೂ ತರದೆ ರಾತ್ರಿ ವೇಳೆ ಪೊಲೀಸರ ಸಹಕಾರ ಪಡೆದು ಪೆಟ್ಟಿಗೆ ಅಂಗಡಿಯನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಅವರ ದಾಖಲಾತಿಗಳು, ಎಟಿಎಂ ಕಾರ್ಡ್ ಹಾಗೂ ಮನೆ ಬಳಕೆಯ ಗ್ಯಾಸ್ ಇನ್ನಿತರ ಪದಾರ್ಥಗಳನ್ನು ಸಹ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅರಣ್ಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಅರಣ್ಯಅಧಿಕಾರಿ ಭೇಟಿ:ನಾಲಾ ರೋಡ್ ಗ್ರಾಮದಲ್ಲಿ ರಾಜ್ಯ ರೈತ ಸಂಘ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಎಸಿಎಫ್ ಗಜಾನನ ಹೆಗಡೆ ಭೇಟಿ ನೀಡಿ ರೈತರ ಜೊತೆ ಮಾತನಾಡಿ, ಅರಣ್ಯ ಇಲಾಖೆ ಸ್ಥಳದಲ್ಲಿ ಪೆಟ್ಟಿಗೆ ಅಂಗಡಿಯನ್ನು ಇಡಲಾಗಿತ್ತು, ಆದರಿಂದ ವಶಕ್ಕೆ ಪಡೆಯಲಾಗಿದೆ. ಈ ಸ್ಥಳ ಕಂದಾಯ ಇಲಾಖೆಗೆ ಸೇರಿದೆ ಎಂದು ರೈತ ಸಂಘಟನೆ ತಿಳಿಸಿದಾಗ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ರೈತರು ಜನಸಾಮಾನ್ಯರ ಸಮ್ಮುಖದಲ್ಲಿ ಸ್ಥಳವನ್ನು ಜಂಟಿ ಸರ್ವೆ ನಡೆಸಿ ವರದಿ ಬಂದ ನಂತರ ಯಾವ ಇಲಾಖೆಗೆ ಸೇರಿದೆ ಎಂಬುದನ್ನು ನಿರ್ಧರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೈತ ಸಂಘಟನೆಯಿಂದ 8 ದಿನಗಳ ಗಡುವು ನೀಡಿ ಅಷ್ಟರಲ್ಲಿ ಜಂಟಿ ಸರ್ವೆ ನಡೆಸಿ ಬಡ ಕುಟುಂಬದ ಪೆಟ್ಟಿಗೆ ಅಂಗಡಿ ಮತ್ತು ಅವರಿಗೆ ಸೇರಬೇಕಾಗಿರುವ ದಾಖಲಾತಿ ಮತ್ತು ಅವರ ಪರಿಕರಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ಅಳಲು ಸ್ವಾಮಿ, ಕೂಡ್ಲೂರು ವೆಂಕಟೇಶ್, ರಾಜಣ್ಣ ಪಳನಿ, ಶೆಟ್ಟಿ ಮಾದೇವ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ರಾಜಾಮಣಿ ಇತರ ರೈತ ಮುಖಂಡರು ಉಪಸ್ಥಿತರಿದ್ದರು.