ರೋಣದಲ್ಲಿ 2 ಮನೆಯಲ್ಲಿ ಕಳ್ಳತನ, 1 ಕಡೆ ಕಳ್ಳತನಕ್ಕೆ ಯತ್ನ

KannadaprabhaNewsNetwork | Published : May 3, 2025 12:16 AM

ಸಾರಾಂಶ

ರೋಣ ಪಟ್ಟಣದ ಶಿವಾನಂದ ನಗರ ಬಡಾವಣೆ, ಶಿವಪೇಟಿ ಬಡಾವಣೆಯ 11ನೇ ಕ್ರಾಸ್ ನಲ್ಲಿರುವ ಮನೆಗಳ ಬೀಗ ಮುರಿದು ಬಂಗಾರ, ಬೆಳ್ಳಿ‌ ಸಾಮಗ್ರಿ, ಲಕ್ಷಾಂತರ ನಗದು ಕಳ್ಳತನವಾಗಿದ್ದು, ಮತ್ತೊಂದು ಕಡೆ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ರೋಣ ಪಟ್ಟಣದಲ್ಲಿ ಗುರುವಾರ ಮತ್ತು ಶುಕ್ರವಾರ ಮಧ್ಯರಾತ್ರಿ ನಡೆದಿದ್ದು, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ರೋಣ: ಪಟ್ಟಣದ ಶಿವಾನಂದ ನಗರ ಬಡಾವಣೆ, ಶಿವಪೇಟಿ ಬಡಾವಣೆಯ 11ನೇ ಕ್ರಾಸ್ ನಲ್ಲಿರುವ ಮನೆಗಳ ಬೀಗ ಮುರಿದು ಬಂಗಾರ, ಬೆಳ್ಳಿ‌ ಸಾಮಗ್ರಿ, ಲಕ್ಷಾಂತರ ನಗದು ಕಳ್ಳತನವಾಗಿದ್ದು, ಮತ್ತೊಂದು ಕಡೆ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ರೋಣ ಪಟ್ಟಣದಲ್ಲಿ ಗುರುವಾರ ಮತ್ತು ಶುಕ್ರವಾರ ಮಧ್ಯರಾತ್ರಿ ನಡೆದಿದ್ದು, ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಪಟ್ಟಣದ ಶಿವಪೇಟಿ 11ನೇ ಕ್ರಾಸ್‌ನಲ್ಲಿರುವ ಜಯಶ್ರೀ ಮೇಟಿ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಿದ್ದ ಗುತ್ತಿಗೆದಾರ ಶಿವರಾಜ ಯಳವಾರ ಎಂಬುವರು ಗುರುವಾರ ರಾತ್ರಿ ಊಟ ಮಾಡಿ ಮನೆಯ ಮೇಲೆ ಮನೆಯವರೆಲ್ಲರೂ ಮಲಗಿದ್ದು, ಮನೆಗೆ ಹಾಕಿದ ಬೀಗ ಕಳ್ಳರು ಮುರಿದು ಬೆಡ್ ರೂಂ ನಲ್ಲಿದ್ದ ₹ 1.20 ಲಕ್ಷ ಹಣ ಹಾಗೂ 5 ಗ್ರಾಂ ಬಂಗಾರದ ಬೆಂಡೋಲೆ, 2.5 ಗ್ರಾಂ ಬಂಗಾರ ಲಕ್ಷ್ಮಿದೇವಿ ಮೂರ್ತಿ ತಾಳಿ ಸರ, 20 ಗ್ರಾಂ ಬೆಳ್ಳಿ ಲಕ್ಷ್ಮಿ ಮೂರ್ತಿ ಕಳ್ಳತನವಾಗಿವೆ.

ಶಿವಾನಂದ ನಗರ ಬಡಾವಣೆಯ 6ನೇ ಕ್ರಾಸ್‌ನಲ್ಲಿರುವ ಬಸಮ್ಮ ಕಾತರಕಿ ಎಂಬುವರು ಮನೆಯ ಮೇಲೆ‌ ಮಲಗಿದ್ದರಿಂದ ಮನೆಯ ಬೀಗ ಮುರಿದು ಮನೆಯಲ್ಲಿದ್ದ ₹ 80 ಸಾವಿರ ನಗದು, 2.5 ಗ್ರಾಂ ಬಂಗಾರದ ಬಂಡೋಲೆ, 2.5 ಗ್ರಾಂ ಲಕ್ಷ್ಮೀ ಮೂರ್ತಿ ತಾಳಿ, 2 ಗ್ರಾಂ ತಾಳಿಯಲ್ಲಿನ ಬಂಗಾರದ ಗುಂಡು, 40 ಗ್ರಾಂ ಬೆಳ್ಳಿ ಗುಣಗಡಗಿ, 20 ಗ್ರಾಂ ಬೆಳ್ಳಿ ಚೈನ್ ಕಳ್ಳತನವಾಗಿವೆ.‌ ಮೇ 23ರಂದು ಮಗನ ಮದುವೆ ಖರ್ಚಿಗೆಂದು ಕೂಲಿ ಮಾಡಿ ಕೂಡಿಟ್ಟ ಹಣ ಕಳ್ಳತನವಾಗಿರುವ ಕುರಿತು ಗೋಗರೆಯುತ್ತಿರುವ ತಾಯಿ ಬಸಮ್ಮ ಕಾತರಕಿ ದೃಶ್ಯ ಮನಕಲಕುವಂತಿತ್ತು. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಳ್ಳತನ ನಡೆದ ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಲ್ಲಿ ಅಳವಡಿಸಲಾದ ಸಿಸಿ ಟಿವಿ ಪುಟೇಜ್ ಸಂಗ್ರಹಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ‌. ಒಂದೇ ದಿನ 3 ಕಡೆಗಳಲ್ಲಿ ಕಳ್ಳತನ ಘಟನೆ ನಡೆದ ಹಿನ್ನೆಲೆಯಲ್ಲಿ ರೋಣ ಜನತೆ ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಇದೇ ರೀತಿ ಪಟ್ಟಣದ ಸಂಗಳದ ಅವರ ಆಯಲ್ ಮಿಲ್ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಇಲ್ಲಿ ಯಾವುದೇ ವಸ್ತುಗಳು ಕಳ್ಳತನವಾಗಿಲ್ಲ. ಈ ಕುರಿತು ಯಾವದೇ ಪ್ರಕರಣ ದಾಖಲಾಗಿರುವುದಿಲ್ಲ.

Share this article