ಕೋರ್ಟ್‌ನಲ್ಲಿ ಬುರುಡೆ ಚಿನ್ನಯ್ಯನ ತಪ್ಪೊಪ್ಪಿಗೆ

KannadaprabhaNewsNetwork |  
Published : Sep 26, 2025, 01:00 AM ISTUpdated : Sep 26, 2025, 11:02 AM IST
Dharmasthala Mask Man Chinnayya

ಸಾರಾಂಶ

ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಗುರುವಾರ ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲಾಯಿತು.

 ಬೆಳ್ತಂಗಡಿ/ಮಂಗಳೂರು :  ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನನ್ನು ಗುರುವಾರ ಶಿವಮೊಗ್ಗ ಜೈಲಿನಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಲಾಯಿತು.

ಮಧ್ಯಾಹ್ನ 12 ಗಂಟೆಗೆ ನ್ಯಾಯಾಧೀಶರ ಮುಂದೆ ಆತನನ್ನು ಹಾಜರುಪಡಿಸಲಾಗಿದ್ದು, ಸಂಜೆಯವರೆಗೂ ಚಿನ್ನಯ್ಯನ ಹೇಳಿಕೆಯನ್ನು ನ್ಯಾಯಾಧೀಶರು ದಾಖಲು ಮಾಡಿದ್ದಾರೆ. ಸೆ.23ರಂದು ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಚಿನ್ನಯ್ಯ, 183 ಹೇಳಿಕೆ ನೀಡುವ ವೇಳೆ ಗಳಗಳನೆ ಕಣ್ಣೀರು ಹಾಕಿದ್ದ. ಗುರುವಾರ ಚಿನ್ನಯ್ಯ ನ್ಯಾಯಾಧೀಶರ ಎದುರು ಯಾವೆಲ್ಲ ವಿಚಾರಗಳನ್ನು ಹೇಳಿದ್ದಾನೆ ಎಂಬ ಮೇಲೆ ಪ್ರಕರಣದ ದಿಕ್ಕು ನಿಂತಿದೆ.

ಬುರುಡೆ ಫೋಟೋ ವೈರಲ್‌:

ಚಿನ್ನಯ್ಯ ಈ ಹಿಂದೆ ಕೋರ್ಟ್‌ಗೆ ಹೋಗುವಾಗ ಕೊಂಡೊಯ್ದಿದ್ದ ಬುರುಡೆಯ ಫೋಟೋ ಇದೀಗ ವೈರಲ್ ಅಗಿದೆ. ಹಲವಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿ ದೂರು ನೀಡಿದ್ದ ಚಿನ್ನಯ್ಯ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ವೇಳೆ ತೆಗೆದ ಫೋಟೋ ಇದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.2ನೇ ಅಸ್ಥಿಪಂಜರ ಗುರುತು ಪತ್ತೆ!

ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆ ಪ್ರದೇಶದಲ್ಲಿ ಸೆ‌.17, 18ರಂದು ಎಸ್ಐಟಿ ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾದ ಏಳು ಅಸ್ಥಿಪಂಜರಗಳ ಪೈಕಿ 2ನೇ ಅಸ್ಥಿಪಂಜರದ ಗುರುತನ್ನು ಎಸ್‌ಐಟಿ ಪತ್ತೆ ಹಚ್ಚಿದ್ದು, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ ಆದಿಶೇಷ ನಾರಾಯಣ ಎಂದು ಗುರುತಿಸಲಾಗಿದೆ. 2013ರ ಅ.2ರಂದು ಇವರು ನಾಪತ್ತೆಯಾಗಿದ್ದರು ಎಂಬ ಅಂಶವೂ ಬಯಲಾಗಿದೆ.

ಅಸ್ಥಿಪಂಜರದ ಸಮೀಪ ದೊರೆತ ಡ್ರೈವಿಂಗ್‌ ಲೈಸನ್ಸ್‌ ಆಧಾರದಲ್ಲಿ ಅವರ ಮನೆಯವರ ಪತ್ತೆಯಾಗಿದೆ. ಆದಿಶೇಷನ ಅಕ್ಕಂದಿರಾದ ಲಕ್ಷ್ಮಿ, ಪದ್ಮಾ ಹಾಗೂ ಕುಟುಂಬ ಸದಸ್ಯರು ಗುರುವಾರ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಬಂದು, ಡ್ರೈವಿಂಗ್ ಲೈಸೆನ್ಸ್ ಅವರದದೇ ಎಂದು ಗುರುತಿಸಿದ್ದಾರೆ. ಆದಿಶೇಷ, 2013ರಲ್ಲಿ ನಾಪತ್ತೆಯಾದ ಬಗ್ಗೆಯೂ ಸಂಪೂರ್ಣ ಮಾಹಿತಿ‌ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಡಿಎನ್ಎ ಪರೀಕ್ಷೆ ಮಾಡಿಸುವುದಾಗಿ ಎಸ್‌ಐಟಿ ಅಧಿಕಾರಿಗಳು ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆದಿಶೇಷನ ಸಹೋದರಿಯರಾದ ಲಕ್ಷ್ಮೀ, ಪದ್ಮಾ ಹಾಗೂ ಬಾವ ಶಿವಕುಮಾರ್, ಬೆಂಗಳೂರಿನ ಬಾರ್‌ವೊಂದರಲ್ಲಿ ಕ್ಯಾಶಿಯರ್‌ ಆಗಿ ಕೆಲಸ ಮಾಡುತ್ತಿದ್ದ ಆದಿಶೇಷ, 2013ರ ಅ.2ರಿಂದ ನಾಪತ್ತೆಯಾಗಿದ್ದರು. ಅವರ ತಂದೆ ದುಡಿಯಬೇಕು ಅಂತ ಜೋರು ಮಾಡುತ್ತಿದ್ದ ಕಾರಣಕ್ಕೆ ಆಗಾಗ ಮನೆ ಬಿಟ್ಟು ಹೋಗುತ್ತಿದ್ದರು. ಹಾಗಾಗಿ ಅವರು ನಾಪತ್ತೆ ಆದಾಗ ತಂದೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಅವರಿಗೆ ಮದುವೆ ಆಗಿರಲಿಲ್ಲ. ಆಗಾಗ ಧರ್ಮಸ್ಥಳಕ್ಕೆ ಬರುತ್ತಿದ್ದರು. ಆಮೇಲೆ ಏನಾಗಿತ್ತು ಎಂಬುದು ಗೊತ್ತಿಲ್ಲ. 

ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿ ಅವರಿಗೆ ಇರಲಿಲ್ಲ. ಸಾವು ಹೇಗೆ ಆಗಿದೆ ಎನ್ನುವ ಬಗ್ಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.2ನೇ ನೋಟಿಸ್‌ಗೂ ಬಾರದ ತಿಮರೋಡಿ:ರುಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಡಿ ಪ್ರಕರಣ ದಾಖಲಾದ ಬಳಿಕ ಬೆಳ್ತಂಗಡಿ ಪೊಲೀಸರ 2ನೇ ನೋಟಿಸ್‌ಗೂ ಮಹೇಶ್‌ ಶೆಟ್ಟಿ ತಿಮರೋಡಿ ವಿಚಾರಣೆಗೆ ಆಗಮಿಸದೆ ತಲೆಮರೆಸಿಕೊಂಡಿದ್ದಾರೆ.  

ಗುರುವಾರ ಸಂಜೆಯಾದರೂ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದಿರಲಿಲ್ಲ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಅಜ್ಞಾತ ಸ್ಥಳದಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಶುಕ್ರವಾರ ಮತ್ತೆ ತಿಮರೋಡಿ ಮನೆಗೆ ಮೂರನೇ ನೋಟಿಸ್‌ ಅಂಟಿಸುವ ಸಾಧ್ಯತೆ ಇದೆ. ದ‌.ಕ.ಜಿಲ್ಲೆ ಬಿಟ್ಟು ಬೇರೆ ಭಾಗದಲ್ಲಿ ತಲೆ ಮರೆಸಿಕೊಂಡಿರುವ ಸಾಧ್ಯತೆಯ ಬಗ್ಗೆ ಚರ್ಚೆ ನಡೆದಿದೆ. ಇನ್ನೊಂದೆಡೆ, ಗಡೀಪಾರು ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ತಿಮರೋಡಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. 

ಎಸ್‌ಐಟಿ ಕಚೇರಿಗೆ ಅಯ್ಯಪ್ಪ ಪುತ್ರ:ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆಯಲ್ಲಿ ಅಸ್ಥಿಪಂಜರದ ಗುರುತು ಪತ್ತೆಯಾಗಿದ್ದ ಪೊನ್ನಂಪೇಟೆ ಟಿ.ಶೆಟ್ಟಿಗೇರಿ ಗ್ರಾಮದ ಯು.ಬಿ.ಅಯ್ಯಪ್ಪ ಎಂಬುವರ ಪುತ್ರ ಜೀವನ್‌, ಗುರುವಾರ ಮತ್ತೆ ಎಸ್‌ಐಟಿ ಕಚೇರಿಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ.ಬಂಗ್ಲೆಗುಡ್ಡೆ ಕಾಡಿನ ಅಸ್ತಿಪಂಜರದ ಬಳಿ ಪತ್ತೆಯಾದ ಯು.ಬಿ.ಅಯ್ಯಪ್ಪ ಅವರ ಐಡಿ ಕಾರ್ಡ್, ವಾಕಿಂಗ್ ಸ್ಟಿಕ್ ಮೂಲಕ ಅವರ ಕುಟುಂಬಸ್ಥರನ್ನು ಈ ಮೊದಲೇ ಎಸ್‌ಐಟಿ ಪತ್ತೆ ಮಾಡಿತ್ತು. ಸೆ.20ರಂದು ಜೀವನ್‌ ಆಗಮಿಸಿ ಮಾಹಿತಿ ನೀಡಿ ತೆರಳಿದ್ದರು. ಇದೀಗ ಮತ್ತೆ ಆಗಮಿಸಿ ತಂದೆಯ ಕುರಿತಾದ ಉಳಿದ ದಾಖಲೆಗಳನ್ನು ಒದಗಿಸಿದ್ದಾರೆ.

PREV
Read more Articles on

Recommended Stories

ಕಾಸರಗೋಡಲ್ಲಿ ಕನ್ನಡ ಫಲಕ: ಕೇರಳಕ್ಕೆ ಕೇಂದ್ರ ನಿರ್ದೇಶನ
ಒಂದು ತಿಂಗಳಾದ್ರೂ ಬೈಕ್‌ ಟ್ಯಾಕ್ಸಿಗೆ ನೀತಿ ರೂಪಿಸದ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್‌ ಗರಂ