ಮಂಡ್ಯ : ಕಬ್ಬು ಕಡಿಯಲು ಬಳ್ಳಾರಿಯಿಂದ ಬಂದಿದ್ದ ಗರ್ಭಿಣಿಯೊಬ್ಬಳ ಮೂಲಕ ಡೆಕಾಯ್ ಆಪರೇಷನ್ ನಡೆಸಿ ಹೆಣ್ಣು ಭ್ರೂಣ ಹತ್ಯೆ ನಡೆಸುವ ದಂಧೆಕೋರರ ಗ್ಯಾಂಗ್ ಪತ್ತೆ ಹಚ್ಚಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಡಾ। ಕೆ.ಮೋಹನ್ ಆಂಧ್ರದಲ್ಲಿ ಹೆಣ್ಣು ಭ್ರೂಣ ಹತ್ಯೆ ಯತ್ನ ಪ್ರಕರಣದ ಸುಳಿವು ನೀಡಿ, ಅಲ್ಲಿನ ದಂಧೆಕೋರರ ಪತ್ತೆಗೆ ನೆರವಾಗಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಷ್ಟಕ್ಕೂ ನಡೆದಿದ್ದೇನು?:
ಬಳ್ಳಾರಿ ಜಿಲ್ಲೆಯಿಂದ ಬಂದಿರುವ ಕಬ್ಬು ಕಟಾವು ಮಾಡುವವರ ತಂಡ ಮಳವಳ್ಳಿ ತಾಲೂಕಿನ ಬಂಡೂರು ಸಮೀಪದ ದೇವಸ್ಥಾನದ ಬಳಿ ನೆಲೆಸಿತ್ತು. ದುಗ್ಗನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ನಂದಿನಿ ಆರೋಗ್ಯ ತಪಾಸಣೆ ವೇಳೆ ಮಹಿಳೆಯೊಬ್ಬಳು ಗರ್ಭಿಣಿ ಆಗಿರುವುದು ಪತ್ತೆಯಾಯಿತು.
ಆ ಮಹಿಳೆಗೆ ನಾಲ್ಕೂವರೆ ತಿಂಗಳಾಗಿದ್ದರಿಂದ ಮಗುವಿನ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸ್ಕ್ಯಾನಿಂಗ್ ಮಾಡಿಸುವಂತೆ ಆರೋಗ್ಯ ಸುರಕ್ಷಾ ಅಧಿಕಾರಿ ನಂದಿನಿ ಸಲಹೆ ನೀಡಿದ್ದರು. ಆ ವೇಳೆಗಾಗಲೇ ಆಕೆಗೆ ಮೂರು ಹೆಣ್ಣು ಮಕ್ಕಳಿದ್ದರು. ನಾಲ್ಕನೆಯ ಮಗು ಹೆಣ್ಣಾಗಿದ್ದು ಅದನ್ನೂ ಅಬಾರ್ಷನ್ ಮಾಡಿಸಿದ್ದರು. ನಂತರದ ನಾಲ್ಕು ವರ್ಷದ ಬಳಿಕ ಆಕೆ ಮತ್ತೆ ಗರ್ಭಿಣಿಯಾಗಿದ್ದಳು.
ಆಂಧ್ರದಲ್ಲಿ ಸ್ಕ್ಯಾನಿಂಗ್:
ಸ್ಕ್ಯಾನಿಂಗ್ ಮಾಡಿಸುವಂತೆ ಸಲಹೆ ನೀಡಿ ಬಂದ ನಂತರ ಆಕೆ ವಾಪಸ್ ಬಳ್ಳಾರಿಗೆ ತೆರಳಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಕುಡಮೂರಿನ ಬಾಷಾ ನರ್ಸಿಂಗ್ ಹೋಂನಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಹೆಣ್ಣು ಶಿಶು ಎಂಬುದು ಗೊತ್ತಾಗಿದೆ. ನಂತರ, ಆಕೆ ಹಣಕಾಸನ್ನು ಹೊಂದಿಸಿಕೊಳ್ಳಲು ಮಳವಳ್ಳಿಯ ಬಂಡೂರಿಗೆ ಬಂದಿದ್ದಳು. ಸ್ಕ್ಯಾನಿಂಗ್ ಮಾಡಿಸಲು ಹೇಳಿ ಒಂದು ವಾರವಾದರೂ ಬಾರದ ಗರ್ಭಿಣಿಯ ನಡೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂದಿನಿ, ಈ ವಿಷಯವನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ। ಕೆ.ಮೋಹನ್ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ। ಜಿ.ಸಿ.ಬೆಟ್ಟಸ್ವಾಮಿ ಅವರ ಗಮನಕ್ಕೆ ತಂದರು.
ಬಳಿಕ, ಆಕೆಯನ್ನು ಭೇಟಿಯಾಗಿ ಸ್ಕ್ಯಾನಿಂಗ್ ಮಾಡಿಸಲು ಏಕೆ ಬರಲಿಲ್ಲವೆಂದು ವಿಚಾರಿಸಿದಾಗ, ನಮಗೆ ಈಗಾಗಲೇ ಮೂರು ಹೆಣ್ಣು ಮಕ್ಕಳಿವೆ. ನಾಲ್ಕನೆಯದು ಹೆಣ್ಣಾಗಿದ್ದು ಅಬಾರ್ಷನ್ ಆಗಿತ್ತು. ಈಗ ಮತ್ತೆ ಹೆಣ್ಣು ಮಗುವಿರುವುದು ಗೊತ್ತಾಗಿದೆ. ನಮಗೆ ತುಂಬಾ ಸಾಲವಿದೆ. ಮಕ್ಕಳನ್ನು ಸಾಕುವುದು ಕಷ್ಟ ಎಂದು ಹೇಳಿಕೊಂಡಿದ್ದಾಳೆ.
ಆ ಸಮಯದಲ್ಲಿ ಎಲ್ಲಿ ಸ್ಕ್ಯಾನಿಂಗ್ ಮಾಡಿಸಿದೆ, ಹೆಣ್ಣು ಮಗು ಇರುವ ವಿಷಯವನ್ನು ಹೇಳಿದವರು ಯಾರು ಎಂದಾಗ, ಆರಂಭದಲ್ಲಿ ನಿಜಾಂಶ ಬಾಯಿಬಿಡಲು ಹಿಂದೇಟು ಹಾಕಿದಳು. ಆಗ ಹೆಣ್ಣು ಭ್ರೂಣ ಹತ್ಯೆಯ ಸುಳಿವು ನೀಡಿದವರಿಗೆ ನೀಡುವ ₹1 ಲಕ್ಷ ಬಹುಮಾನವನ್ನು ಅವರಿಗೇ ನೀಡುವುದಾಗಿ ಹೇಳಿದಾಗ ಸ್ಕ್ಯಾನಿಂಗ್ ಮಾಡಿಸಿದ ಜಾಗ ತೋರಿಸುವುದಕ್ಕೆ ಒಪ್ಪಿಕೊಂಡರು. ಅದು ಆಂಧ್ರ ಕರ್ನೂಲ್ ಜಿಲ್ಲೆಯ ಕುಡಮೂರು ಎಂಬ ವಿಷಯ ತಿಳಿದಾಗ, ಡಾ। ಕೆ.ಮೋಹನ್ ಅವರು ರಾಜ್ಯ ಆರೋಗ್ಯ ಇಲಾಖೆಗೆ ಮಾಹಿತಿ ರವಾನಿಸಿದರು.
ಡಾ। ಮೋಹನ್ ‘ಸುವರ್ಣನ್ಯೂಸ್,
ಕನ್ನಡಪ್ರಭ’ ಅವಾರ್ಡ್ ಪುರಸ್ಕೃತ
ಜಿಲ್ಲಾ ಆರೋಗ್ಯಾಧಿಕಾರಿ ಡಾ। ಕೆ.ಮೋಹನ್ ಅವರು 2024ನೇ ಸಾಲಿನ ಏಷ್ಯಾ ನೆಟ್ ಸುವರ್ಣನ್ಯೂಸ್- ಕನ್ನಡಪ್ರಭ ಡಾಕ್ಟರ್ ಅವಾರ್ಡ್ ಪುರಸ್ಕೃತರಾಗಿದ್ದಾರೆ. ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕಿದ್ದನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.