ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು ಅನ್ನ ಅಕ್ಷರ, ಕಾಯಕದ ಜತೆಗೆ ಬಡಮಕ್ಕಳಿಗಾಗಿ ಪಾಠಶಾಲೆಯನ್ನು ತೆರೆದು ರಜತ ಗೋಪುರದಂತಿರುವ ಕರ್ನಾಟಕದ ಅಧ್ಯಾತ್ಮ ಪರಂಪರೆಗೆ ಸುವರ್ಣ ಕಳಶವನ್ನಿಟ್ಟ ಶತಮಾನದ ಶ್ರೇಷ್ಠ ಸಂತರು.

ನರಗುಂದ: ತಮ್ಮ ಜೀವನದುದ್ದಕ್ಕೂ ಸಮಾಜದ ಒಳಿತಿಗಾಗಿಯೆ ಬದುಕಿದವರು ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರು. ನಾಡಿಗೆ ಕನ್ನಡ ಜಗದ್ಗುರು ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳನ್ನು ನೀಡಿ ಆ ಮೂಲಕ ಜಾತ್ಯತೀತ ಸಂದೇಶ ಸಾರಿದರು ಎಂದು ಪತ್ರಕರ್ತ ರೇವಣಸಿದ್ದಯ್ಯ ಹಿರೇಮಠ ತಿಳಿಸಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ 380ನೇ ಮಾಸಿಕ ಶಿವಾನುಭವ ಹಾಗೂ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ 46ನೇ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿದರು.

ಅನ್ನ ಅಕ್ಷರ, ಕಾಯಕದ ಜತೆಗೆ ಬಡಮಕ್ಕಳಿಗಾಗಿ ಪಾಠಶಾಲೆಯನ್ನು ತೆರೆದು ರಜತ ಗೋಪುರದಂತಿರುವ ಕರ್ನಾಟಕದ ಅಧ್ಯಾತ್ಮ ಪರಂಪರೆಗೆ ಸುವರ್ಣ ಕಳಶವನ್ನಿಟ್ಟ ಶತಮಾನದ ಶ್ರೇಷ್ಠ ಸಂತರು. ಕಾರಣಿಕ ಯುಗಪುರುಷ ಹಾನಗಲ್ಲ ಕುಮಾರಶಿವಯೋಗಿಗಳ ಕರಕಮಲ ಸಂಜಾತರಾಗಿದ್ದ ಪಟ್ಟಾಧ್ಯಕ್ಷರು ಅವರ ಎಲ್ಲ ತತ್ವಾದರ್ಶಗಳನ್ನು ಅಕ್ಷರಶಃ ಪಾಲಿಸಿದ ಪೂಜ್ಯರು ನಮ್ಮೆಲ್ಲರಿಗೂ ಆದರ್ಶಪ್ರಾಯರು ಎಂದರು.ಮೃತ್ಯುಂಜಯ್ಯ ಕಾಡದೇವರಮಠ ಮಾತನಾಡಿ, ಕುಮಾರೇಶ್ವರ ಧಾರ್ಮಿಕ ಪಾಠಶಾಲೆಯನ್ನು ಪ್ರಾರಂಭಿಸಿ ಲಕ್ಷಾಂತರ ಬಡಜಂಗಮರ ಬಾಳಿಗೆ ಬೆಳಕಾದ ಸಿಂದಗಿ ಪಟ್ಟಾದ್ಯಕ್ಷರು ನಮ್ಮೆಲ್ಲ ಹೃದಯ ಸಿಂಹಾಸನದಲ್ಲಿ ಅಜರಾಮರವಾಗಿದ್ದಾರೆ ಎಂದರು.

ಈ ವೇಳೆ ಒಂದು ಸಾವಿರ ಸರ್ವಜ್ಞನ ವಚನಗಳನ್ನು ನಿರರ್ಗಳವಾಗಿ ಹೇಳುವ ಚೆನ್ನಯ್ಯ ಪರ್ವತದೇವರಮಠ ಅವರನ್ನು ಹಾಗೂ ಕನ್ನಡ ಕಟ್ಟಾಳು ಪ್ರಶಸ್ತಿ ಪಡೆದ ಎಸ್.ಕೆ. ಆಡಿನ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.ವಿಶ್ರಾಂತ ಪೊಲೀಸ್ ಅಧಿಕಾರಿ ಶರಣಯ್ಯ ಮೇಟಿ, ಶೋಭಾ ಆಡಿನ, ಪ್ರೊ. ಆರ್.ಬಿ. ಚಿನಿವಾಲರ ಸೇರಿದಂತೆ ಇತರರು ಇದ್ದರು. ಪ್ರೊ. ಆರ್.ಕೆ. ಐನಾಪೂರ ಕಾರ್ಯಕ್ರಮ ನಿರ್ವಹಿಸಿದರು. ಮಹಾಂತೇಶ ಹಿರೇಮಠ ಸ್ವಾಗತಿಸಿ, ವಂದಿಸಿದರು.