ಡಾ। ಎಚ್.ಸಿ.ಮಹದೇವಪ್ಪ‌ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ನಮ್ಮ ತಂದೆ ಸಿದ್ದರಾಮಯ್ಯ ಕೇಳಿದ್ದರು. ಹೈಕಮಾಂಡ್ ಮಹದೇವಪ್ಪ‌ ಅವರಿಗೆ ಸಚಿವ ಸ್ಥಾನ ಕೊಡಲು ಒಪ್ಪಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಮೈಸೂರು : ಡಾ। ಎಚ್.ಸಿ.ಮಹದೇವಪ್ಪ‌ ಅವರಿಗೆ ಸಚಿವ ಸ್ಥಾನ ಕೊಡಿ ಎಂದು ನಮ್ಮ ತಂದೆ ಸಿದ್ದರಾಮಯ್ಯ ಕೇಳಿದ್ದರು. ಹೈಕಮಾಂಡ್ ಮಹದೇವಪ್ಪ‌ ಅವರಿಗೆ ಸಚಿವ ಸ್ಥಾನ ಕೊಡಲು ಒಪ್ಪಿಲ್ಲ ಎಂದು ನಗರಾಭಿವೃದ್ಧಿ ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ 14 ಜನಕ್ಕೆ ಸಚಿವ ಸ್ಥಾನಕ್ಕೆ ಶಿಫಾರಸು ಮಾಡಿದ್ದರು. ಅದರಲ್ಲಿ ಬಹುತೇಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಸಿದ್ದರಾಮಯ್ಯ ಎರಡು ಹಂತದ ಪಟ್ಟಿಯಲ್ಲೂ ಮಹದೇವಪ್ಪ‌ ಅವರ ಹೆಸರಿತ್ತು ಎಂದರು.

ಜಮೀರ್ ಅಹಮದ್ ಅವರಿಗೂ ಸಚಿವ ಸ್ಥಾನ ಕೇಳಿರಲಿಲ್ಲ

ಜಮೀರ್ ಅಹಮದ್ ಅವರಿಗೂ ನಮ್ಮ ತಂದೆ ಸಚಿವ ಸ್ಥಾನ ಕೇಳಿರಲಿಲ್ಲ. ಗಾಯತ್ರಿ ಅವರು ಸಚಿವರಾಗದ ವಿಚಾರದಲ್ಲಿ ನಮ್ಮ ತಂದೆ ಪಾತ್ರ ಇಲ್ಲ. ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ತಪ್ಪಿದರ ಹಿಂದೆ ನಮ್ಮ ತಂದೆ ಪಾತ್ರ ಇಲ್ಲ. ನಾನು ಖುದ್ದು ಮಹದೇವಪ್ಪ‌ ಹಾಗೂ ತನ್ವೀರ್ ಸೇಠ್ ಅವರನ್ನು ಭೇಟಿ ಮಾಡುತ್ತೇನೆ. ಅವರೆಲ್ಲಾ ನಮ್ಮ ಪಕ್ಷದ ಹಿರಿಯರು. ಅವರನ್ನು ಭೇಟಿಯಾಗಿ ಮಾತನಾಡುತ್ತೇನೆ ಎಂದರು.

ಈ ಸಚಿವ ಸಂಪುಟದ ಬಗ್ಗೆ ನಮ್ಮ ತಂದೆಗೆ ಯಾವ ಅಸಮಾಧಾನ ಇಲ್ಲ. ಆ.3ರಂದು ನಮ್ಮ ತಂದೆಯ ಹುಟ್ಟುಹಬ್ಬ. ಹೀಗಾಗಿ, ಅವರು ಪ್ರಮಾಣವಚನ ಕಾರ್ಯಕ್ರಮಕ್ಕೆ ಬರಲಿಲ್ಲ. ಕೆಲವೊಂದು ಬಾರಿ ಕೆಲವು ಜಾತಿಗಳಿಗೆ ಸ್ಥಾನಮಾನ ತಪ್ಪುತ್ತದೆ. ಅದನ್ನು ಬೇರೆ ರೀತಿಯಲ್ಲಿ ಪಕ್ಷ ಸರಿದೂಗಿಸುತ್ತದೆ ಎಂದರು.

ತಂದೆ ಸಿಎಂ ಸ್ಥಾನ ತ್ಯಜಿಸಿದ್ದಕ್ಕೆ ನನಗೆ ಸಚಿವ ಸ್ಥಾನ: ಯತೀಂದ್ರ

ನಮ್ಮ ತಂದೆ ಅರ್ಧಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಕಾರಣ ನನಗೆ ಸಚಿವ ಸ್ಥಾನ ನೀಡಲಾಗಿದೆ. ನನಗೆ ಸಚಿವ ಸ್ಥಾನ ನೀಡದೆ ಇದ್ದರೆ ಸಹಜವಾಗಿ ನಮ್ಮ ಸಮುದಾಯಕ್ಕೆ ಬೇಜಾರಾಗುತ್ತಿತ್ತು. ನನಗೆ ಸಚಿವ ಸ್ಥಾನ ನೀಡಿದರಲ್ಲಿ ಯಾವ ತಪ್ಪು ಇಲ್ಲ ಎಂದು ಅವರು ತಿಳಿಸಿದರು.