ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯ । ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ
ಕನ್ನಡಪ್ರಭ ವಾರ್ತೆ ಸಿಂಧನೂರುಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಶುಕ್ರವಾರ ಬೆಳಗಿನ ಜಾವ 3.15ಕ್ಕೆ ಸಂಭವಿಸಿದೆ.ರಾಚಪ್ಪ ಕಾಳಪ್ಪ ರಘುನಾಥಹಳ್ಳಿ (51) ಮೃತ ದುರ್ದೈವಿ. ರಾಯಚೂರು ಡಿಪೋ ಘಟಕ-3ಕ್ಕೆ ಸಂಬಂಧಿಸಿದ ಕೆಎ-36 ಎಫ್-1253 ಸಂಖ್ಯೆಯ ಸ್ಲೀಪರ್ ಕೋಚ್ ಬಸ್ ಗುರುವಾರ ರಾತ್ರಿ 10.30 ಗಂಟೆ ಹುಬ್ಬಳ್ಳಿಯಿಂದ ಹೊರಟು ರಾಯಚೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ಸಿಂಧನೂರಿನ ವೀಣಾ ಬಾರ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್‌ನಿಂದ ಹೊರಗಡೆ ಜಿಗಿಯಲು ಪ್ರಯತ್ನಿಸಿದಾಗ ಬಸ್‌ನ ಕೆಳಭಾಗಕ್ಕೆ ಸಿಲುಕಿ ಚಾಲಕ ರಾಚಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಸ್‌ನಲ್ಲಿದ್ದ 9ಜನ ಪ್ರಯಾಣಿಕರಲ್ಲಿ ಸಂತೋಷಕುಮಾರ ಹುಬ್ಬಳ್ಳಿ (34) ಅವರಿಗೆ ತಲೆಗೆ ತೀವ್ರ ಪೆಟ್ಟುಬಿದಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ವಿಷಯ ತಿಳಿಯುತ್ತಿದ್ದಂತೆ ಸಂಚಾರಿ ಮತ್ತು ಶಹರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಂಗಾವತಿ ಮುಖ್ಯರಸ್ತೆಯಲ್ಲಿ ಬಿದ್ದಿದ್ದ ಬಸ್‌ನ್ನು ಎರಡು ಕ್ರೇನ್‌ಗಳ ಮೂಲಕ ಎತ್ತಿ, ಕೆಳಗೆ ಸಿಲುಕಿಕೊಂಡಿದ್ದ ಚಾಲಕನ ಮೃತದೇಹವನ್ನು ಹೊರಗೆ ತೆಗೆದರು. ಗಾಯಾಳುಗಳನ್ನು ಸ್ಥಳೀಯ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾದ ಬಸ್ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ನಂತರ ಡಿವೈಎಸ್‌ಪಿ ಬಿ.ಎಸ್.ತಳವಾರ, ಶಹರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸುಧೀರ್‌ಕುಮಾರ, ಸಂಚಾರಿ ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್ ವೆಂಕಟೇಶ ಚವ್ಹಾಣ್, ಅಪರಾಧ ವಿಭಾಗದ ಸಬ್ಇನ್ಸ್‌ಪೆಕ್ಟರ್ ಬೆಟ್ಟಪ್ಪ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ತಾಂತ್ರಿಕ ಅಭಿಯಂತರ ಹಸನ್ ಅಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.