ಬಸ್ ಡಿಕ್ಕಿ, ಯುವಕ ಸಾವು: ನಾಲ್ಕು ಗಂಟೆ ರಸ್ತೆ ತಡೆದು ಪ್ರತಿಭಟನೆ

KannadaprabhaNewsNetwork |  
Published : Mar 28, 2024, 12:51 AM IST
ಶಹಾಬಾದ್ ತಾಲೂಕಿನ ಮಾಲಗತ್ತಿ ಗ್ರಾಮದ ಬಳಿ ರಸ್ತೆ ದಾಟುತ್ತಿದ್ದ ಯುವಕ ವಿರೇಶ ಹೊನ್ನೆಕನೋರಗೆ ಬಸ್ ಡಿಕ್ಕಿ ಹೊಡೆದ ಸ್ಥಳದಲ್ಲಿಯೇ ಮೃತ ಪಟ್ಟಿದ್ದರಿಂದ ಮುಖಂಡರ ಅವ್ವಣ್ಣ ಮ್ಯಾಕೇರಿ, ನಿಂಗಣ್ಣ ಹುಳಗೋಳ, ಶರಣು ಸಣಮೋ, ಕಾಶೀನಾಥ ಸಣಮೋ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ರಸ್ತೆ ದಾಟುತ್ತಿದ್ದ ವಿರೇಶನಿಗೆ ಕಲಬುರಗಿಯಿಂದ ವೇಗವಾಗಿ ಬಂದ್ ಎಕ್ಸ್‌ಪ್ರೆಸ್ ಬಸ್‌ ಡಿಕ್ಕಿ ಹೊಡೆದಿದ್ದು, ಯುವಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ

ಕನ್ನಡಪ್ರಭ ವಾರ್ತೆ ಶಹಾಬಾದ್‌

ತಾಲೂಕಿನ ಮಾಲಗತ್ತಿ ಗ್ರಾಮದ ಬಳಿ ಕಲಬುರಗಿಯಿಂದ ಯಾದಗಿರಿಗೆ ಹೋಗುತ್ತಿದ್ದ ಬಸ್, ರಸ್ತೆ ದಾಟುತ್ತಿದ್ದ ಯುವಕ ವಿರೇಶ ಮಲ್ಕಪ್ಪ ಹೊನ್ನೆಕನೋರ (22) ಎಂಬುವವನಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಬಸ್ ಚಾಲಕನ ನಿರ್ಲಕ್ಷ್ಯತನ ಎಂದು ಆರೋಪಿಸಿ, ವಿರೇಶನ ಬಂಧಗಳು, ಗ್ರಾಮಸ್ಥರು ಸುಮಾರು ನಾಲ್ಕು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

ಮಂಗಳವಾರ ಮಧ್ಯಾಹ್ನ 2.30ಕ್ಕೆ ರಸ್ತೆ ದಾಟುತ್ತಿದ್ದ ವಿರೇಶನಿಗೆ ಕಲಬುರಗಿಯಿಂದ ವೇಗವಾಗಿ ಬಂದ್ ಎಕ್ಸ್‌ಪ್ರೆಸ್ ಬಸ್‌ ಡಿಕ್ಕಿ ಹೊಡೆದಿದ್ದು, ಯುವಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಗ್ರಾಮಸ್ಥರ ರಸ್ತೆ ತಡೆಗೆ ಬೆಂಬಲಿಸಿ ಕೋಲಿ ಸಮಾಜದ ಮುಖಂಡ ಅವ್ವಣ್ಣ ಮ್ಯಾಕೇರಿ, ಶಹಾಬಾದ್ ಮಂಡಲ ಬಿಜೆಪಿ ಅಧ್ಯಕ್ಷ ನಿಂಗಣ್ಣ ಹುಳಗೋಳ, ತಾಲೂಕ ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ನಾಟಿಕಾರ, ಗ್ರಾಪಂ ಅಧ್ಯಕ್ಷ ಸದಾಶಿವ ನಡುವಿನಮನಿ, ರಾವೂರನ ಕಾಂಗ್ರೆಸ್ ಮುಖಂಡ ಗುರುನಾಥ ಗುದ್ಗಲ್, ನಾಗೇಂದ್ರ ಜಯಗಂಗಾ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಣ್ಣ ಅಲ್ಲೂರ, ಶರಣಪ್ಪ ಸಣಮೋ, ಕಾಶೀನಾಥ ಸಣಮೋ ನೇತೃತ್ವದಲ್ಲಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಅವ್ವಣ್ಣ ಮ್ಯಾಕೇರಿ, ನಿಂಗಣ್ಣ ಹುಳಗೋಳ, ಚಾಲಕನ ನಿರ್ಲಕ್ಷ್ಯತನದಿಂದ ಅತಿಯಾದ ವೇಗವಾಗಿ ಬಸ್ ಚಾಲನೆ ಮಾಡುತ್ತಿರುವದರಿಂದ ಈ ಅಪಘಾತ ನಡೆದಿದೆ. ಸ್ಥಳಕ್ಕೆ ಕ.ಕ.ಸಾರಿಗೆ ಸಂಸ್ಥೆ ಜಿಲ್ಲಾಧಿಕಾರಿ ಬರಬೇಕು ಎಂದು ಪಟ್ಟು ಹಿಡಿದು, ಮೃತ ಯುವಕನ ಪರಿವಾರಕ್ಕೆ ₹1 ಕೋಟಿ ಪರಿಹಾರ ನೀಡಬೇಕು. ಕುಟುಂಬಸ್ಥರಿಗೆ ನೌಕರಿ ನೀಡಬೇಕು, ಚಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಡಿವೈಎಸ್‍ಪಿ ಶಂಕರಗೌಡ ಪಾಟೀಲ, ಪಿಐ ನಟರಾಜ ಲಾಡೆ, ಸಿಪಿಐ ವಿಜಯಕುಮಾರ ಬಾವಗಿ, ಎಎಎಸ್‍ಐ ಗುಂಡಪ್ಪ, ಸಿಬ್ಬಂದಿ ಹಾಗೂ ಕ.ಕ.ಸಾರಿಗೆ ಸಂಸ್ಥೆ ಜಿಲ್ಲಾಧಿಕಾರಿ ನಾರಾಯಣಪ್ಪ ಕುರುಬರ್, ಅಧಿಕಾರಿ ನಾಗರಾಜ ಅವರು ಆಗಮಿಸಿ, ಮೃತ ವ್ಯಕ್ತಿಯ ಕುಟುಂಬಕ್ಕೆ ಸ್ಥಳದಲ್ಲಿಯೇ ₹25 ಸಾವಿರ ನೀಡುವದಾಗಿ ತಿಳಿಸಿ, ನ್ಯಾಯಾಲಯದ ಆದೇಶದಂತೆ ಮೃತನ ಕುಟುಂಬಕ್ಕೆ ಪರಿಹಾರ ನೀಡಲಾಗುವದು. ಚಾಲನಾ ಪರವಾನಗಿ ಇದ್ದರೆ, ಕುಟುಂಬದಲ್ಲಿ ಒಬ್ಬರಿಗೆ ಹೊರ ಗುತ್ತಿಗೆ ಆಧಾರದ ಮೇಲೆ ನೌಕರ ಕೊಡುವದಾಗಿ ಆಶ್ವಾಸನೆ ನೀಡಿದರು. ಬಸ್ ಚಾಲಕನನ್ನು ಕೂಡಲೇ ಅಮಾನತು ಮಾಡಲಾಗುವುದು ಎಂದು ಆಶ್ವಾಸನೆ ನೀಡಿದ ನಂತರ ರಸ್ತೆ ತಡೆ ಹಿಂಪಡೆಯಲಾಯಿತು.

ಸುಮಾರ 4 ಗಂಟೆ ಕಾಲ ನಡೆದ ರಸ್ತೆ ತಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಗ್ರಾಮಸ್ಥರಾದ ದೇವರಾಜ ಕುಲಕುಂದಿ, ಬಾಲಕೃಷ್ಣ ಜೋಶಿ, ನಿಂಗಪ್ಪ ಮುದಕಪ್ಪಗೋಳ, ಮಲ್ಲಿಕಾರ್ಜುನ ಇಟಗಿ, ದೇವಪ್ಪ ಸಣಮೋ, ಸಾಬಣ್ಣ ಯರಗೋಳ, ಅರ್ಜುನ ನಾಯಕ, ಭೀಮು ನಾಯಕ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು. ನಂತರ ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಶಹಾಬಾದ್ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ