ನಿಂತ ಲಾರಿಗಳಿಗೆ ಬಸ್ ಡಿಕ್ಕಿ: ಮೂವರ ಸಾವು, ಹಲವರಿಗೆ ಗಾಯ

KannadaprabhaNewsNetwork |  
Published : Apr 30, 2026, 02:30 AM IST
ಸಾಧ್ಯ. | Kannada Prabha

ಸಾರಾಂಶ

ಬುಧವಾರ ಮಧ್ಯಾಹ್ನ ತ್ರಾಸಿ- ಮರವಂತೆ ಕಡಲ ಕಿನಾರೆಯ ಎದುರಿನ‌ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ಬಸ್ಸು ಹಾಗೂ ಲಾರಿಗಳ ಡಿಕ್ಕಿಯಲ್ಲಿ ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಾಳುಗಳಾದ ಘಟನೆ ಸಂಭವಿಸಿದೆ.

ಕುಂದಾಪುರ: ಬುಧವಾರ ಮಧ್ಯಾಹ್ನ ತ್ರಾಸಿ- ಮರವಂತೆ ಕಡಲ ಕಿನಾರೆಯ ಎದುರಿನ‌ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದ ಬಸ್ಸು ಹಾಗೂ ಲಾರಿಗಳ ಡಿಕ್ಕಿಯಲ್ಲಿ ಬಸ್ಸಿನಲ್ಲಿ‌ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಾಳುಗಳಾದ ಘಟನೆ ಸಂಭವಿಸಿದೆ.

ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವರು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕೊಂಡೊಯ್ಯುತ್ತಿದ್ದ ಮಾರ್ಗಮಧ್ಯೆ ಮೃತಪಟಿದ್ದಾರೆ‌.ಅಡುಗೆ ಸಹಾಯಕ ಭದ್ರಾವತಿ‌ ಗೋಣಿಬೀಡಿನ ಹೇಮಂತ್ (19), ಬಸ್ಸಿನಲ್ಲಿ‌ ಚಾಲಕರಾಗಿ‌ ಬಂದಿದ್ದ ಉಮೇಶ್ ಹಾಗೂ‌ ಕ್ಲೀನರ್ ರಂಗನಾಥ್ ಮೃತರು. ಘಟನೆಯಲ್ಲಿ ಗಾಯಗೊಂಡಿರುವ 40 ಕ್ಕೂ ಅಧಿಕ ವಿದ್ಯಾರ್ಥಿಗಳು ಕುಂದಾಪುರದ ಖಾಸಗಿ‌ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.ಘಟನೆಯ ವಿವರ: ಶಿವಮೊಗ್ಗ ಜಿಲ್ಲೆಯ ಕುವೆಂಪು ವಿಶ್ವವಿದ್ಯಾನಿಲಯದ ಶ್ರೀಮದ್ ರಂಭಾಪುರಿ ಕಲಾ, ವಾಣಿಜ್ಯ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿಗಳು ಭಾನುವಾರ ಸಂಜೆ ಪ್ರವಾಸಕ್ಕೆಂದು ಹೊರಟಿದ್ದರು. 25 ವಿದ್ಯಾರ್ಥಿಗಳು ಹಾಗೂ 22 ವಿದ್ಯಾರ್ಥಿನಿಯರು 4 ಮಂದಿ ಉಪನ್ಯಾಸಕರು, ಒಂದು ಉಪನ್ಯಾಸಕಿಯ ಮಗು, ಮೂವರು ಬಸ್ ನಿರ್ವಹಣಾ ಸಿಬ್ಬಂದಿ, ಮೂವರು ಅಡುಗೆ ನಿರ್ವಹಣಾ ತಂಡದವರು ಸೇರಿ ಒಟ್ಟು 58 ಪ್ರಯಾಣಿಕರು ಬಸ್ಸಿನಲ್ಲಿದ್ದರು.‌ದಾಂಡೇಲಿ ಪ್ರವಾಸವನ್ನು ಮುಗಿಸಿ ಮುರುಡೇಶ್ವರಕ್ಕೆ ಬಂದಿದ್ದ ತಂಡ ಆ ಬಳಿಕ ಹೊನ್ನಾವರಕ್ಕೆ ತೆರಳಿ ಬೋಟಿಂಗ್ ಮುಗಿಸಿಕೊಂಡು ಬುಧವಾರ ಉಡುಪಿಯ ಕೃಷ್ಣ ಮಠಕ್ಕೆ‌ ಹೊರಟಿದ್ದರು. ದಾರಿಮಧ್ಯೆ ಮರವಂತೆಯ ಮಾರಸ್ವಾಮಿ ಕಡಲತೀರದಲ್ಲಿ ಸಮುದ್ರತೀರದ ವೀಕ್ಷಣೆಗಾಗಿ ನಿಂತಿದ್ದ ಬಸ್ ಪುನಃ ಉಡುಪಿ ಕಡೆಗೆ ಹೊರಟಿತ್ತು. ಕೇವಲ ಒಂದು ಕಿ.ಮೀ ಅಂತರದ ನಡುವೆ, ಮರವಂತೆ ಕಡಲ ಕಿನಾರೆಯ ಎದುರಿಗಿನ ಖಾಸಗಿ ರೆಸಾರ್ಟ್ ವೊಂದರ ಮುಂಭಾಗದಲ್ಲಿ ನಿಂತಿದ್ದ ಖಾಲಿ ಟ್ಯಾಂಕರ್ ಹಾಗೂ ಸರಕು ತುಂಬಿದ ಲಾರಿಯ ಹಿಂಭಾಗಕ್ಕೆ ಬಸ್ಸು ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ಸಿನ ಮುಂಭಾಗದ ಎಡಬದಿ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಹೇಮಂತ್ ಹಾಗೂ ರಂಗನಾಥ್ ಸ್ಥಳದಲ್ಲೇ ಮೃತಪಟ್ಟರೆ, ಉಮೇಶ್ ಆಸ್ಪತ್ರೆಗೆ ಸಾಗಿಸುವಾಗ ಅಸುನೀಗಿದ್ದಾರೆ‌.

ಅಪಘಾತದ ರಭಸಕ್ಕೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 40 ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳಿಗೆ, ಉಪನ್ಯಾಸಕಿಯ ಮಗುವಿಗೆ ಹಾಗೂ ಇತರರಿಗೆ ಗಾಯಗಳುಂಟಾಗಿದೆ. ಕೈಕಾಲು, ತಲೆ, ಭುಜಕ್ಕೆ ತೀವ್ರವಾದ ಗಾಯಗಳಾದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಮಗುವಿಗೆ ಸ್ಥಳೀಯ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಸಣ್ಣ-ಪುಟ್ಟ ಗಾಯಗಳಾದವರಿಗೆ ಹೊರರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ.

ಎಸ್ಪಿ‌ ಭೇಟಿ: ಅಪಘಾತದ ಮಾಹಿತಿ ಪಡೆದುಕೊಂಡ ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ಘಟನಾಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ‌.‌ ಡಿವೈಎಸ್ಪಿ ಎಚ್.ಡಿ ಕುಲಕರ್ಣಿ, ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ ಭೇಟಿ ನೀಡಿದ್ದಾರೆ.

ಗಾಯಾಳುಗಳಿಗೆ ಸ್ಥೈರ್ಯ ತುಂಬಿದ ಶಾಸಕ ಗಂಟಿಹೊಳೆ: ಮದುವೆ ಸಮಾರಂಭಕ್ಕೆ ಭೇಟಿ ನೀಡಿ ಬೈಂದೂರಿನತ್ತ ತೆರಳುತ್ತಿದ್ದ ಶಾಸಕ ಗುರುರಾಜ್ ಗಂಟಿಹೊಳೆ ಅವರು, ಅಪಘಾತ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ದುರ್ಘಟನಾ ಸ್ಥಳಕ್ಕೆ ತಲುಪಿದ್ದರು. ನಜ್ಜುಗುಜ್ಜಾದ ಬಸ್ ನಡುವೆ ಸಿಲುಕಿ‌ ಪ್ರಾಣ ರಕ್ಷಣೆಗಾಗಿ ಮೊರೆ ಇಡುತ್ತಿದ್ದವರ ರಕ್ಷಣೆಗೆ ಸ್ವತಃ ಧಾವಿಸಿದ ಶಾಸಕ ಗಂಟಿಹೊಳೆ ಸ್ಥಳೀಯರ ಸಹಕಾರದಿಂದ ಗಾಯಗೊಂಡವರನ್ನು ಮತ್ತು ಮೃತರನ್ನು ಕುಂದಾಪುರ ಆಸ್ಪತ್ರೆಗೆ ಸಾಗಿಸುವಲ್ಲಿ ಮಾನವೀಯತೆ ತೋರಿದ್ದಾರೆ. ಬಳಿಕ ಕುಂದಾಪುರದ ಆಸ್ಪತ್ರೆಗೆ ಬಂದು ಪ್ರತೀ ಗಾಯಾಳುಗಳನ್ನು‌ ಕೂಡ ವೈಯಕ್ತಿಕ ಭೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿ ಮಾನಸಿಕ ಸ್ಥೈರ್ಯವನ್ನು ತುಂಬಿದ್ದಲ್ಲದೇ ತಮ್ಮ‌ ತಂಡದ ಮೂಲಕ ಗಾಯಾಳುಗಳಿಗೆ ಅಗತ್ಯವಾಗಿರುವ ನೆರವು ನೀಡಿದ್ದಾರೆ. ತಾಲೂಕು ಆರೋಗ್ಯ ವೈದ್ಯಾಧಿಕಾರಿ ಹಾಗೂ ಆಸ್ಪತ್ರೆಯ ವೈದ್ಯ ತಂಡದೊಂದಿಗೆ ಸಮಾಲೋಚನೆ ನಡೆಸಿ ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆಯನ್ನು ನೀಡುವಂತೆ ಸೂಚಿಸಿದ್ದಾರೆ.ಸಂಸದ ಕೋಟ ಭೇಟಿ: ಅಪಘಾತದ ಮಾಹಿತಿ ಪಡೆದುಕೊಂಡ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ‌ ಶ್ರೀನಿವಾಸ ಪೂಜಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ‌ ಗಾಯಾಳುಗಳಿಗೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ‌‌ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆದರ್ಶ ಆಸ್ಪತ್ರೆಯ ವೈದ್ಯಾಧಿಕಾರಿಗಳೊಂದಿಗೆ ಮಾತನಾಡಿದ್ದು, ಇಲ್ಲಿ‌ ಚಿಕಿತ್ಸೆ ಪಡೆದುಕೊಂಡಿರುವ ಹಾಗೂ ಪಡೆದುಕೊಳ್ಳುತ್ತಿರುವ ಯಾರಿಗೂ ಪ್ರಾಣಾಪಾಯವಿಲ್ಲವೆಂದು ತಿಳಿಸಿದ್ದಾರೆ. ಘಟನೆ ದುರದೃಷ್ಟಕರವಾಗಿದ್ದು, ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಹೆಚ್ಚಿನ ವೈದ್ಯಕೀಯ ಸಿಬ್ಬಂದಿಗಳನ್ನು‌ ನಿಯೋಜನೆ ಮಾಡಿಕೊಳ್ಳಲು ಸಲಹೆ ನೀಡಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನೆರವನ್ನು ಅಪೇಕ್ಷಿಸಿದ್ದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ‌ ತಿಳಿಸಿದರು.

ದುರಂತದ ಬಗ್ಗೆ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ ಅವರು, ಅಪಘಾತದ ಭೀಕರತೆಯನ್ನು ಕಂಡು ಒಂದುಕ್ಷಣ ನಾನೇ ಮೂಕವಿಸ್ಮಿತನಾಗಿದ್ದೆ. ಅಪಘಾತದಲ್ಲಿ ಸಿಲುಕಿಕೊಂಡವರನ್ನು ರಕ್ಷಣೆ ಮಾಡಬೇಕು ಎನ್ನುವುದು ನಮ್ಮ‌ ಮೊದಲ ಆದ್ಯತೆಯಾಗಿತ್ತು. ವಾಹನಗಳ‌ ನಡುವೆ ಸಿಕ್ಕಿ‌ಸಹಾಯಕ್ಕಾಗಿ ಕೂಗುತ್ತಿದ್ದವರ ಆರ್ತನಾದ ಕಲ್ಲೆದೆಯನ್ನು ಕರಗಿಸುವಂತಿತ್ತು. ಸ್ಥಳೀಯರ ಸಹಕಾರದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿರುವುದು ತೃಪ್ತಿ ತಂದಿದೆಯಾದರೂ ಅಪಘಾತದ ಸಾವು-ನೋವುಗಳು ಮನಸ್ಸಿಗೆ ತೀವ್ರವಾದ ಆಘಾತವನ್ನುಂಟು ಮಾಡಿದೆ. ಎಸ್ಪಿಯವರ ನೇತೃತ್ವದ ಪೊಲೀಸ್ ತಂಡ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.‌ಪ್ರೇಮಾನಂದ ಅವರ ತಂಡ ಅಗತ್ಯ ಕಾಳಜಿಯನ್ನು ತೋರಿರುವ ಬಗ್ಗೆ ಮೆಚ್ಚುಗೆ ಇದೆ‌.ತುರ್ತು ಸಂದರ್ಭದಲ್ಲಿ ಪ್ರವಾಸಿಗರಿಗೆ ರಕ್ಷಣೆಯನ್ನು ನೀಡುವುದು ಮಾನವೀಯತೆಯ ಧರ್ಮ. ಇಂದು ಯಾರಿಗೊ ನಾಳೆ‌ ನಮಗೂ ಎನ್ನುವ ಭಾವನೆ ಇದ್ದಾಗ ಮಾತ್ರ ರಕ್ಷಣಾ ಕಾರ್ಯದಲ್ಲಿ‌ ಎಲ್ಲರೂ ತೊಡಗಿಸಿಕೊಳ್ಳಲು ಸಾಧ್ಯ.-ಗುರುರಾಜ್ ಗಂಟಿಹೊಳೆಶಾಸಕರು, ಬೈಂದೂರು

ಅಡುಗೆ ಸಹಾಯಕನಾಗಿ‌ ಬಂದಿದ್ದ ಹೇಮಂತ್ ಬಸ್ಸಿನ ಹಿಂಭಾಗದಲ್ಲಿ‌ ಕುಳಿತಿದ್ದವರು ಅಪಘಾತ ನಡೆಯುವ ಕೆಲವೇ ಕ್ಷಣಗಳ‌ ಮೊದಲು ಸಾಮಾನು‌ ತರಲೆಂದು ಮುಂಭಾಗಕ್ಕೆ ಬಂದವರು ದುರ್ಘಟನೆಯಲ್ಲಿ‌ ಸಾವನ್ನಪ್ಪಿದ್ದಾರೆ‌‌. ಪ್ರವಾಸಕ್ಕೆ ಬರುವುದಿಲ್ಲ‌ ಎಂದು ತೀರ್ಮಾನಿಸಿದ್ದ ನಾನು ಕೊನೆ ಕ್ಷಣದಲ್ಲಿ ಬಸ್ಸು ಏರಿದ್ದೆ‌. ಹೆಚ್ಚೇನು ಪೆಟ್ಟಾಗಿಲ್ಲವಾದರೂ ಅಪಘಾದ ಭೀಕರತೆ ನನ್ನಿಂದ ದೂರವಾಗಿಲ್ಲ ಎಂದು ಗಾಯಾಳು ವಿದ್ಯಾರ್ಥಿ ವರುಣ್ ಅಪಘಾತದ ಭೀಕರತೆಯನ್ನು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಬಹಿರಂಗ ಸಭೆ, ಅದ್ಧೂರಿ ಜಯಂತ್ಯುತ್ಸವ
ಶಿವಬೋಧರಂಗ ಸೊಸೈಟಿಗೆ ₹7.30 ಕೋಟಿ ಲಾಭ