ಪ್ರಸಾದ್ ನಗರೆ
ಬೆಳಗ್ಗೆ 7.30 ರಿಂದ 7.45ರ ವರೆಗೆ ಬರುವ ಬಸ್ ನಿಲ್ಲಿಸುತ್ತಾರೆಯೇ ವಿನಃ: ನಂತರದ ಬಸ್ ನಿಲ್ಲಿಸುವುದಿಲ್ಲ. ಮುಖ್ಯವಾಗಿ ಹಡಿನಬಾಳ, ಕವಲಕ್ಕಿ, ಹುಲಿಯಪ್ಪನಕಟ್ಟೆ, ಬಾಳೆಗದ್ದೆ, ಭಾಸ್ಕೇರಿ, ಆರೊಳ್ಳಿ, ಮುಗ್ವಾ ಚರ್ಚ್ ಕ್ರಾಸ್, ಮೂರುಕಟ್ಟೆ ಈ ನಿಲ್ದಾಣಗಳಲ್ಲಿ ಬೆಳಗ್ಗಿನ ತರಗತಿಗೆ ಹೋಗಲು ಬಂದು ನಿಲ್ಲುವ ವಿದ್ಯಾರ್ಥಿಗಳು ನಿಂತಲ್ಲೆ ನಿಲ್ಲಬೇಕು. ಯಾಕೆಂದರೆ ಬಸ್ ರಶ್ ಆಗಿ ಬರುತ್ತದೆ, ನಿಗದಿತ ಸ್ಥಳದಲ್ಲಿ ನಿಲ್ಲಿಸದೆ ಮುಂದೆ ಸಾಗುತ್ತದೆ.
ಹೊನ್ನಾವರದ ಖಾಸಗಿ, ಅನುದಾನಿತ ಮತ್ತು ಸರ್ಕಾರಿ ಶಾಲೆ, ಪದವಿಪೂರ್ವ, ಐಟಿಐ, ಪದವಿ ಹಾಗೂ ಸ್ನಾತಕ ಪದವಿ ಅಭ್ಯಸಿಸುವ ವಿದ್ಯಾರ್ಥಿಗಳು ಹಾಗೂ ನೌಕರರು ಎಲ್ಲ ಜನರಿಗೂ ಬಸ್ ಸರಿಯಾಗಿ ನಿಲ್ಲಿಸದೇ ಇರುವುದು ದೊಡ್ಡ ತಲೆನೋವಾಗಿದೆ. ಈ ಸಮಸ್ಯೆ ಈಗಿನದ್ದಲ್ಲ. ಹಲವು ವರ್ಷಗಳಿಂದ ಇದೇ ಪರಿಸ್ಥಿತಿ ಇದೆ. ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಒಂದು ವಾರ ಸರಿಯಾದಂತೆ ಕಾಣುತ್ತದೆ. ಬಳಿಕ ಯಥಾಪ್ರಕಾರ ಸಮಸ್ಯೆ ಮುಂದುವರಿಯುತ್ತದೆ. ಹೊನ್ನಾವರ ಬಸ್ ನಿಲ್ದಾಣದಿಂದ ಗೇರುಸೊಪ್ಪಾ ಮಾರ್ಗಕ್ಕೆ ಬೆಳಗ್ಗಿನ ಟ್ರಿಪ್ ನಲ್ಲಿ ತೆರಳುವ ಬಸ್ ಗಳು ವಾಪಸ್ ಬರುವಾಗ ವಿದ್ಯಾರ್ಥಿಗಳು ಹತ್ತಬೇಕಾಗುತ್ತದೆ. ಈ ಬಸ್ ಗಳು ಬರಲು 9 ಗಂಟೆ ಕಳೆದಿರುತ್ತದೆ.ಬೈಕ್ , ರಿಕ್ಷಾಕ್ಕೆ ಕೈ ಮಾಡಿ ಹೋಗಬೇಕಾದ ಪರಿಸ್ಥಿತಿ
ಹೊನ್ನಾವರ-ಹಡಿನಬಾಳ ಬಸ್ ಆರಂಭಿಸಲಿ
ಪ್ರತಿದಿನ ಶಾಲಾ-ಕಾಲೇಜಿಗೆ ಸರಿಯಾದ ಸಮಯಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ನಾವು ಕಾಲೇಜಿಗೆ ಹೋಗುವಷ್ಟರಲ್ಲಿ ವೇಳಾಪಟ್ಟಿಯಂತೆ ತರಗತಿ ಆರಂಭವಾಗಿರುತ್ತದೆ. ಅಲ್ಲದೆ ಇದೀಗ ಮಳೆಗಾಲ ಆದ್ದರಿಂದ ಬಸ್ ರಶ್ ಇದ್ದಾಗ ಹತ್ತಲು ಕಷ್ಟವಾಗುತ್ತದೆ. ಬಾಗಿಲಲ್ಲಿ ನೇತಾಡಿಕೊಂಡು ಹೋಗಬೇಕಾಗುತ್ತದೆ. ಬಸ್‌ಗಳು ಬೆಳಗ್ಗಿನ ಅವಧಿಯಲ್ಲಿ ಎಲ್ಲಾ ಬಸ್ ನಿಲ್ದಾಣದಲ್ಲಿ ನಿಲ್ಲಿಸುವಂತಾಗಬೇಕು. ಹೊನ್ನಾವರ-ಹಡಿನಬಾಳ ಬಸ್ ಪ್ರತಿ ಅರ್ಧಗಂಟೆಗೆ ಒಮ್ಮೆ ಬಿಟ್ಟರೆ ಒಳ್ಳೆಯದು ಎಂದು ಕಾಲೇಜು ವಿದ್ಯಾರ್ಥಿ ವಿನಾಯಕ ಹೇಳಿದರು.