ಶಿರಸಿ: ಸೌರ ದೀಪದ ನಿರಂತರ ಬಳಕೆಯಿಂದ ವ್ಯಕ್ತಿಯ ಉತ್ಪಾದಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಬುಧವಾರ ಸೋಂದಾ ಕಮಟಗೇರಿಯಲ್ಲಿ ಸ್ಕೊಡ್‌ವೆಸ್ ಸಂಸ್ಥೆ ಹಮ್ಮಿಕೊಂಡಿದ್ದ ಸೋಲಾರ್ ಗ್ರಾಮ ಯೋಜನೆಯ ಅಂಗವಾಗಿ ಉಚಿತ ಸೌರ ದೀಪ ವಿತರಿಸಿ ಮಾತನಾಡಿದರು.

ಸರ್ಕಾರದಿಂದ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದರೂ, ದಟ್ಟ ಕಾಡು ಕಣಿವೆಗಳಿಂದ ಆವೃತ್ತವಾದ ಉತ್ತರ ಕನ್ನಡ ಜಿಲ್ಲೆಯ ಹಲವಾರು ಕುಗ್ರಾಮಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ತಾಂತ್ರಿಕ ಅಡೆತಡೆಗಳು ಎದುರಾಗುತ್ತಿರುವುದರಿಂದ ಮಹಿಳೆಯರು, ವಿದ್ಯಾರ್ಥಿಗಳು, ಕೃಷಿಕರು, ಕಾರ್ಮಿಕರು ದೂರ ದಿನನಿತ್ಯದ ಚಟುವಟಿಕೆಗಳನ್ನು ಪೂರ್ತಿಗೊಳಿಸುವಲ್ಲಿ ಸಾಧ್ಯವಾಗದೇ ಇರುವುದರಿಂದ ಕೌಟುಂಬಿಕ ಪ್ರಗತಿಯ ಮೇಲೂ ಪರಿಣಾಮ ಬೀರುವಂತಾಗಿದೆ. ಇಂತಹ ಎಲ್ಲಾ ಸಮಸ್ಯೆಗಳಿಗೆ ಸೌರ ಶಕ್ತಿ ಬಳಕೆಯೇ ಸೂಕ್ತ ಪರಿಹಾರ ಎಂದರು.

ಸೌರಶಕ್ತಿಯ ಬಳಕೆ ವಿದ್ಯುತ್ ಜಾಲದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ಮತ್ತು ಶುದ್ಧ ಇಂಧನದ ಬಳಕೆಯನ್ನು ಉತ್ತೇಜಿಸುವುದರಿಂದ, ಪ್ರತಿಯೊಬ್ಬರೂ ಸೌರ ಶಕ್ತಿ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದ ಶಾಸಕರು, ಸಂಸ್ಥೆಯ ಸೋಲಾರ್ ಗ್ರಾಮ ಪರಿಕಲ್ಪನೆ ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಮಲೆನಾಡಿನ ತೀರಾ ಹಿಂದುಳಿದ ಎಲ್ಲಾ ಗ್ರಾಮಗಳಿಗೂ ಸೋಲಾರ್ ದೀಪ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಕೊಡ್‌ವೆಸ್ ಸಂಸ್ಥೆಗೆ ಮನವಿ ಮಾಡಿದರು.


ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿ, ಈಗಾಗಲೇ ಕೃಷಿ ಕೂಲಿಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳು ಹೆಚ್ಚಾಗಿರುವ ಆಯ್ದ 13 ಗ್ರಾಮಗಳ ಎಲ್ಲಾ ಮನೆಗಳಿಗೆ ಸೋಲಾರ್ ದೀಪ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಪಂವಾರು ಹಳ್ಳಿಗಳನ್ನು ಗುರುತಿಸಿ ಸೌರ ದೀಪ ವಿತರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸೋಂದಾ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷೆ ಭಾರತಿ ಗಣಪತಿ ಚೆನ್ನಯ್ಯ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಗದೀಶ ಗೌಡ, ಹುಲೇಕಲ್ ಗ್ರಾಪಂ ಮಾಜಿ ಅಧ್ಯಕ್ಷ ಖಾಸಿಮ್ ಸಾಬ್, ಸೋಂದಾ ಗ್ರಾಪಂ ಮಾಜಿ ಸದಸ್ಯೆ ಅಕ್ಷತಾ ಅಶೋಕ ಚೆನ್ನಯ್ಯ, ಎಸ್.ಕೆ. ಭಾಗ್ವತ್, ಅಶೋಕ ಮರಾಠೆ, ಬಾಲಚಂದ್ರ ಹೆಗಡೆ ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡರ ಮನವಿಯ ಮೇರೆಗೆ ಗುರುತಿಸಲಾದ ಸೋಂದಾ ಕಮಟಗೇರಿಯ 35 ಮನೆಗಳಿಗೆ ಸ್ಕೊಡ್‌ವೆಸ್ ಸಂಸ್ಥೆಯಿಂದ ಉಚಿತವಾಗಿ ಸೋಲಾರ್ ದೀಪ ವಿತರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಸೋಂದಾ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪರಶುರಾಮ ಸ್ವಾಗತಿಸಿದರು. ಸ್ಕೊಡ್‌ವೆಸ್ ಸಂಸ್ಥೆಯ ಯೋಜನಾ ಸಂಯೋಜಕ ಉಮೇಶ ಮರಾಠಿ ವಂದಿಸಿದರು.