ಬಳ್ಳಾರಿ: ದೇಶಾದ್ಯಂತ ಸಾರ್ವತ್ರಿಕ ಚುನಾವಣೆಗಳು ಹಾಗೂ ಪ್ರಜಾಪ್ರಭುತ್ವದ ಪ್ರಕ್ರಿಯೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ, ನಿಮ್ಮ ನಿಮ್ಮ ಭಾಗದ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದು, ಸಾರ್ವಜನಿಕರು ತಪ್ಪು ಮಾಹಿತಿಗೆ ಆಸ್ಪದ ನೀಡದೆ ನಿಖರವಾದ ವಿವರಗಳನ್ನು ಒದಗಿಸಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಹೇಳಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನೀಡುವ ನಮೂನೆ ಭರ್ತಿ ಮಾಡುವ ಕುರಿತು, ಬಳ್ಳಾರಿ ನಗರದ ಶ್ರೀರಾಂಪುರ ಕಾಲನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಸಾರ್ವಜನಿಕರಿಗೆ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬರ ಹೆಸರನ್ನು ಮರುಪರಿಶೀಲಿಸಲು ಬಿಎಲ್‌ಒಗಳು ನಿಮ್ಮ ಮನೆಗೆ ಭೇಟಿ ನೀಡಲಿದ್ದಾರೆ. ಭೇಟಿಯ ಸಮಯದಲ್ಲಿ ಅವರು ಒಂದು ನಿರ್ದಿಷ್ಟ ನಮೂನೆ (ಫಾರ್ಮ್) ಅನ್ನು ನೀಡುತ್ತಾರೆ. ಈ ಫಾರ್ಮ್‌ನಲ್ಲಿ ಮತದಾರರ ಪಟ್ಟಿಯಲ್ಲಿ ಈಗಾಗಲೇ ಇರುವ ನಿಮ್ಮ ಹೆಸರಿನ ವಿವರಗಳಿರುತ್ತವೆ. ಅಧಿಕಾರಿಗಳ ಬಳಿ ಈಗಾಗಲೇ ಇರುವ ಮಾಹಿತಿಯ ಜತೆಗೆ ನಿಮ್ಮಲ್ಲಿಲ್ಲದ ಅಥವಾ ಪಟ್ಟಿಗೆ ಅಗತ್ಯವಿರುವ ಹೆಚ್ಚುವರಿ ವಿವರಗಳನ್ನು ನೀವು ಭರ್ತಿ ಮಾಡಿಕೊಡಬೇಕಾಗುತ್ತದೆ ಎಂದು ಅವರು ತಿಳಿಸಿದರು.ಮಾಹಿತಿ ಭರ್ತಿ ಮಾಡಿದ ಆನಂತರ ಫಾರ್ಮ್ ಮೇಲೆ ನಿಮ್ಮ ಸಹಿ ಪಡೆಯಲಾಗುತ್ತದೆ. ಸಹಿ ಮಾಡಲು ಬಾರದಿದ್ದಲ್ಲಿ ಹೆಬ್ಬೆರಳಿನ ಗುರುತನ್ನು ನೀಡಲು ಅವಕಾಶವಿದೆ. ಒಂದು ವೇಳೆ ಬಿಎಲ್‌ಒಗಳು ಬಂದಾಗ ಮನೆಯಲ್ಲಿ ಯಾರೂ ಇಲ್ಲದಿದ್ದರೆ, ಗಾಬರಿಪಡುವ ಅಗತ್ಯವಿಲ್ಲ. ಅವರು ಕನಿಷ್ಠ ಎರಡು ಬಾರಿ ನಿಮ್ಮ ಮನೆಗೆ ಮರುಭೇಟಿ ನೀಡಲಿದ್ದಾರೆ. ಆದಾಗ್ಯೂ ನೀವು ಸಿಗದಿದ್ದರೆ, ನಿಮ್ಮ ಮನೆಯ ಬಾಗಿಲಿಗೆ ತಮ್ಮ ಫೋನ್ ನಂಬರ್ ಇರುವ ನೋಟಿಸ್ ಅಥವಾ ಫಾರ್ಮ್ ಅನ್ನು ಅಂಟಿಸಿ ಹೋಗುತ್ತಾರೆ. ನೀವು ಆ ನಂಬರ್‌ಗೆ ಕರೆ ಮಾಡಿ, ಅವರೊಂದಿಗೆ ಚರ್ಚಿಸಿ ಫಾರ್ಮ್ ಭರ್ತಿ ಮಾಡಬಹುದು. ಈ ಪ್ರಕ್ರಿಯೆಯು ಚಾಲ್ತಿ ತಿಂಗಳ 29ನೇ ತಾರೀಕಿನ ವರೆಗೆ ಮುಂದುವರಿಯಲಿದೆ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಸಾರ್ವಜನಿಕರ ಆಹವಾಲು ಆಲಿಸಿದರು. ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್, ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ, ಜಿಪಂ ಸಹಾಯಕ ನಿರ್ದೇಶಕ ಬಸವರಾಜ ಹಿರೇಮಠ, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ನಿರಂಜನ್ ಇದ್ದರು.ಶ್ರೀರಾಂಪುರ ಕಾಲನಿ ಸರ್ಕಾರಿ ಶಾಲೆಗೆ ಡಿಸಿ ಭೇಟಿ:
ನಗರದ ಶ್ರೀರಾಂಪುರ ಕಾಲನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಭೇಟಿ ನೀಡಿ ಕಟ್ಟಡ, ತಡೆಗೋಡೆ, ಮೈದಾನ ಸೇರಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಸೌಲಭ್ಯಗಳು ಹಾಗೂ ಶಾಲಾ ಮೂಲಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜತೆಗೆ ಸುರಕ್ಷಿತ ಮತ್ತು ಸ್ವಚ್ಛ ವಾತಾವರಣ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ. ಶಾಲಾ ಆವರಣದಲ್ಲಿ ಎಲ್ಲೂ ಕಸ ಕಡ್ಡಿಗಳು ಇರದಂತೆ ನಿರಂತರ ಸ್ವಚ್ಛತೆ ಕಾಪಾಡಬೇಕು. ಮೈದಾನದ ಸುತ್ತಲೂ ಗಿಡಗಳನ್ನು ನೆಟ್ಟು ಪೋಷಿಸಬೇಕು. ಬೇಕಾದ ಅಗತ್ಯ ಮೂಲ ಸೌಲಭ್ಯಗಳನ್ನು ಬಳಸಿಕೊಂಡು ಅಭಿವೃದ್ಧಿಪಡಿಸುವ ಮೂಲಕ ಮಾದರಿ ಶಾಲೆಯನ್ನಾಗಿಸಬೇಕು ಎಂದು ಶಾಲಾ ಅಧಿಕಾರಿಗಳಿಗೆ ತಿಳಿಸಿದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿದರು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.