ಬಸ್‌-ಲಾರಿ ಡಿಕ್ಕಿ<bha>;</bha> 18 ದಲಿತ ಮುಖಂಡರಿಗೆ ಗಾಯ

KannadaprabhaNewsNetwork | Published : Dec 12, 2023 12:45 AM

ಸಾರಾಂಶ

ಪ್ರತಿಭಟನೆಗಾಗಿ ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ದಲಿತ ಸಂಘಟನೆಗಳು । ದಾವಣಗೆರೆಯಲ್ಲಿ ಅಪಘಾತ, ಇಬ್ಬರು ಗಂಭೀರ

ಪ್ರತಿಭಟನೆಗಾಗಿ ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ದಲಿತ ಸಂಘಟನೆಗಳು । ದಾವಣಗೆರೆಯಲ್ಲಿ ಅಪಘಾತ, ಇಬ್ಬರು ಗಂಭೀರ

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ರಾಜ್ಯ ಮಾದಿಗ ದಂಡೋರ ಸಮಿತಿ ಬೆಳಗಾವಿಯಲ್ಲಿ ಡಿ.11ರಂದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಬಸ್‌ಗೆ ನಗರದ ಹೊರ ವಲಯದ ಜಿಪಂ ಕಚೇರಿ ಬಳಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ 18 ಮಂದಿ ಗಾಯಗೊಂಡಿದ್ದು, ಈ ಪೈಕಿ 2-3 ಜನರ ಸ್ಥಿತಿ ಗಂಭೀರವಾಗಿದೆ.

ನಗರದ ಹೊರ ವಲಯದ ಜಿಪಂ ಕಚೇರಿ ಬಳಿ ಶಿರಮಗೊಂಡನಹಳ್ಳಿ ಕ್ರಾಸ್‌ ಸೇತುವೆ ಬಳಿ ಬಸ್‌ ಸಾಗುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರಿಗೆ ಗಂಭೀರವಾಗಿದ್ದು, 16ಕ್ಕೂ ಹೆಚ್ಚು ಮಂದಿಗೆ ತಲೆ, ಎದೆ, ಕೈ-ಕಾಲು, ಪಕ್ಕೆಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆ, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿಂತಾಮಣಿ ಭಾಗದಿಂದ ಭಾನುವಾರ ರಾತ್ರಿ 10 ಗಂಟೆ ವೇಳೆ ಬಸ್‌ನಲ್ಲಿ ಬೆಳಗಾವಿಗೆ ಮಾದಿಗ ದಂಡೋರ ಸಮಿತಿ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಪ್ರಯಾಣ ಬೆಳೆಸಿದ್ದರು. ಬಸ್‌ ನಲ್ಲಿದ್ದ ಮಾದಿಗ ದಂಡೋರ ಸಮಿತಿ ಮುಖಂಡರಾದ ಎಂ.ಸಿ.ಶ್ರೀನಿವಾಸ, ಸುರೇಶ, ಪಿ.ಎಂ.ನರಸಿಂಹಪ್ಪ, ಎಂ.ಎನ್‌.ರಾಮಪ್ಪ, ಎಂ.ಎನ್‌.ನಾರಾಯಣಸ್ವಾಮಿ, ನಾರಾಯಣಮೂರ್ತಿ, ಗಿರಿಯ ಪಾಲ ಶಿವಕುಮಾರ, ಕೆ.ಕುಟ್ಟಿ, ಮುನಿ ನರಸಪ್ಪ, ಡಿ.ಶ್ರೀನಿವಾಸ, ಪ್ರಸಾದ್, ಅಪ್ಪಣ್ಣ, ಪೆದ್ದಪ್ಪ, ಕುಮಾರ ಇತರರು ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಈ ಪೈಕಿ ಚಾಲಕನನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಘಟನೆ ಮುಖಂಡರಿಂದ ಗಾಯಾಳುಗಳಿಗೆ ಧೈರ್ಯ:

ವಿಷಯ ತಿಳಿದ ದಲಿತ ಸಂಘಟನೆಗಳ ಮುಖಂಡರಾದ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಎಚ್.ಸಿ.ಗುಡ್ಡಪ್ಪ ಇತರರು ಘಟನಾ ಸ್ಥಳಕ್ಕೆ ಬೆಳಗಿನ ಜಾವವೇ ತೆರಳಿದರು. ದಲಿತ ಸಂಘಟನೆಗಳ ಮಹಾ ಒಕ್ಕೂಟದ ಎಚ್‌.ಮಲ್ಲೇಶ ಹರಿಹರ, ಎಚ್.ಸಿ.ಮಲ್ಲಪ್ಪ, ಜಗಳೂರು ಲೋಕೇಶ, ಆನಂದ, ತಣಿಗೆರೆ ಅಣ್ಣಪ್ಪ, ವೆಂಕಟೇಶ, ಬಾಬು, ಗೌರಿಪುರ ಕುಬೇರಪ್ಪ, ಆಲಿಕಲ್ಲು ಬಸವರಾಜಪ್ಪ, ಓಂಕಾರಪ್ಪ ಚಿಕ್ಕಮಗಳೂರು ಇತರರು ಆಸ್ಪತ್ರೆಗೆ ತೆರಳಿ, ಸಂಘಟನೆ ಮುಖಂಡರಿಗೆ ಧೈರ್ಯ ಹೇಳಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಿದರು.ಒಳಮೀಸಲಾತಿಗೆ ಆಸ್ಪತ್ರೆಯಿಂದಲೇ ಸರ್ಕಾರಕ್ಕೆ ಮನವಿ

ಕಳೆದ 25 ವರ್ಷದಿಂದಲೂ ಒಳ ಮೀಸಲಾತಿ ವರ್ಗೀಕರಣಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ. ಸೋಮವಾರ ಹೋರಾಟಕ್ಕೆ ತೆರಳುವ ಮಾರ್ಗ ಮಧ್ಯೆ ಅಪಘಾತವಾದ ಹಿನ್ನೆಲೆಯಲ್ಲಿ ತಾವು ಹೋರಾಟದಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ.

ಹೋರಾಟದಲ್ಲಿ ಭಾಗಿಯಾಗಲು ಬೆಳಗಾವಿಗೆ ಹೋಗಲಾಗದ ದಲಿತ ಮುಖಂಡರು, ಕಾರ್ಯಕರ್ತರು ತಾವಿದ್ದ ಆಸ್ಪತ್ರೆಯಿಂದಲೇ ಜಿಲ್ಲಾಡಳಿತದ ಮೂಲಕ ನ್ಯಾ.ಸದಾಶಿವ ಆಯೋಗದ ವರದಿ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

Share this article