ಕಂಪ್ಲಿ: ಕಂಪ್ಲಿ ಪಟ್ಟಣಕ್ಕೆ ಆಗಮಿಸಬೇಕಾದ ಬಸ್ಸುಗಳು ಸಂಜೆ ನಂತರ ಅನಧಿಕೃತವಾಗಿ ಕಡೇಬಾಗಿಲು ಸೇತುವೆ ಮೂಲಕ ಸಂಚರಿಸುತ್ತಿದ್ದು, ಇದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ನಿಯಮ ಉಲ್ಲಂಘಿಸಿ ಪ್ರಯಾಣಿಕರಿಗೆ ವಂಚಿಸುತ್ತಿರುವ ಬಸ್ ಚಾಲಕರು ಮತ್ತು ನಿರ್ವಾಹಕರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಸಮಿತಿ ಪದಾಧಿಕಾರಿಗಳು ಬುಧವಾರ ತಹಸೀಲ್ದಾರ್ ಜೂಗಲ ಮಂಜುನಾಯಕಗೆ ಮನವಿ ಸಲ್ಲಿಸಿದರು.
ಕಂಪ್ಲಿ ಮಾರ್ಗವಾಗಿ ಸಂಚರಿಸಬೇಕಾದ ಬಸ್ಸುಗಳು ಉದ್ದೇಶಪೂರ್ವಕವಾಗಿ ಮಾರ್ಗ ಬದಲಿಸಿಕೊಂಡು ಕಡೇಬಾಗಿಲು ಮೂಲಕ ತೆರಳುತ್ತಿರುವುದು ಪ್ರಯಾಣಿಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ವಿಶೇಷವಾಗಿ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಊರಿಗೆ ಮರಳಬೇಕಾದ ಪ್ರಯಾಣಿಕರು ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ. ಮಹಿಳೆಯರು, ವೃದ್ಧರು, ಮಕ್ಕಳು ಸೇರಿದಂತೆ ದೂರದ ಊರುಗಳಿಂದ ಬರುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ಅನಿವಾರ್ಯವಾಗಿ ಖಾಸಗಿ ವಾಹನ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರ್ತವ್ಯ ನಿರ್ಲಕ್ಷ್ಯ ವಹಿಸಿ ಅನಧಿಕೃತವಾಗಿ ಮಾರ್ಗ ಬದಲಿಸಿ ಸಂಚರಿಸುವ ಚಾಲಕರು ಮತ್ತು ನಿರ್ವಾಹಕರ ವಿರುದ್ಧ ಸಾರಿಗೆ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಈ ಅಕ್ರಮ ಸಂಚಾರ ತಡೆಯುವಲ್ಲಿ ವಿಫಲವಾಗಿರುವ ಗಂಗಾವತಿ ಮತ್ತು ಹೊಸಪೇಟೆ ವಿಭಾಗಗಳ ಸಂಚಾರಿ ನಿಯಂತ್ರಕರ ವಿರುದ್ಧವೂ ಕ್ರಮ ಜರುಗಿಸಬೇಕು. ಪ್ರಯಾಣಿಕರ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಪರಿಶೀಲನೆ ನಡೆಸಿ ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸುವ ಮೂಲಕ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಾರ್ವಜನಿಕರ ಸಮಸ್ಯೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಡೇಬಾಗಿಲು ಸೇತುವೆ ಮೇಲೆ ವಾಹನ ಸಂಚಾರ ತಡೆದು ಉಗ್ರ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಿಂದ ಉಂಟಾಗುವ ಯಾವುದೇ ಅನಾಹುತಗಳಿಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.