ಪರಶಿವಮೂರ್ತಿ ದೋಟಿಹಾಳ
ಕನ್ನಡಪ್ರಭ ವಾರ್ತೆ ಕುಷ್ಟಗಿಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾದ ಬಸ್ ತಂಗುದಾಣಗಳು ಈಗ ಇದ್ದೂ ಇಲ್ಲದಂತಹ ಪರಿಸ್ಥಿತಿಗೆ ತಲುಪಿವೆ. ನಿರ್ವಹಣೆ ಹಾಗೂ ಕಾಯಕಲ್ಪ ಸಿಗದ ಹಿನ್ನೆಲೆ ತಂಗುದಾಣಗಳು ಜನತೆಯ ಬಳಕೆಯಿಂದ ದೂರವಾಗುತ್ತಿವೆ.
ತಾಲೂಕಿನ ವಣಗೇರಾ, ಎಂ. ಬಸಾಪೂರು, ಶಾಡಲಗೇರಿ ಸೇರಿದಂತೆ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಬಸ್ ತಂಗುದಾಣಗಳನ್ನು ಕಾಣಬಹುದಾಗಿದೆ. ಅದರಲ್ಲೂ ಸ್ಥಳೀಯ ಸಂಪರ್ಕ ರಸ್ತೆಗಳ ಸಮೀಪ ಇರುವ ಬಸ್ ತಂಗುದಾಣಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಿಂದ ದೂರವಿರುವುದು ಕಂಡು ಬರುತ್ತಿದೆ.ಹಳೆಯ ಬಸ್ ತಂಗುದಾಣಗಳು:ದಶಕಗಳ ಹಿಂದೆ ನಿರ್ಮಾಣ ಮಾಡಲಾದ ಬಸ್ ತಂಗುದಾಣಗಳು ಇಂದು ಸ್ಥಳೀಯ ಆಡಳಿತದ ನಿರ್ಲಕ್ಷ್ಯ, ಸಂಬಂಧಪಟ್ಟ ಅಧಿಕಾರಿಗಳು ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆ ಅವು ಈಗ ಬಳಕೆ ಸ್ಥಿತಿಯಲ್ಲಿಯೂ ಇಲ್ಲದಂತಾಗಿದೆ. ಕೆಲವೆಡೆ ತಂಗುದಾಣಗಳು ಹಂದಿ, ನಾಯಿಗಳ ವಾಸ ಸ್ಥಳವಾಗಿ ಪರಿವರ್ತನೆಯಾಗಿವೆ. ಇದರಿಂದ ಸಾರ್ವಜನಿಕರು ಬಳಸಲು ಹಿಂದೇಟು ಹಾಕುತ್ತಿದ್ದಾರೆ.
ಅನಾಗರಿಕತೆ ವರ್ತನೆ:ಕೆಲವು ಬಸ್ ತಂಗುದಾಣಗಳು ಉತ್ತಮ ರೀತಿಯಲ್ಲಿ ಇದ್ದು, ಜನರು ಬಳಸುತ್ತಿದ್ದರೂ ಸಹಿತ ಕೆಲವು ಅನಾಗರಿಕತೆ ವರ್ತನೆಯ ತೋರುವ ಜನರಿಂದ ತಂಗುದಾಣದಲ್ಲಿ ಕಸದ ರಾಶಿ ಕಾಣಬಹುದಾಗಿದೆ. ಅಲ್ಲದೇ ಮದ್ಯದ ಬಾಟಲಿ, ತಿಂಡಿ-ತಿನಿಸುಗಳ ಪ್ಯಾಕೆಟ್ ಮತ್ತಿತರ ವಸ್ತುಗಳು ಬಸ್ ತಂಗುದಾಣದಲ್ಲಿ ಅಲ್ಲಲ್ಲಿ ಬಿದ್ದಿದ್ದು, ಪ್ರಯಾಣಿಕರು ತಂಗುದಾಣದ ಪ್ರಯೋಜನ ಪಡೆಯಲು ಮುಜುಗರಪಡಬೇಕಾಗಿದೆ.ನಿರ್ವಹಣೆಯೇ ಸವಾಲು:ಸ್ಥಳೀಯ ಆಡಳಿತ ಜನತೆಯ ಬೇಡಿಕೆಯಂತೆ ಅನುದಾನ ಹೊಂದಿಸಿ ಬಸ್ ತಂಗುದಾಣ ನಿರ್ಮಿಸಿದರೂ ಅದರ ನಿರ್ವಹಣೆ ಮಾತ್ರ ಸವಾಲಿನ ಕೆಲಸವಾಗಿದೆ. ಎಷ್ಟೋ ಕಡೆಗಳಲ್ಲಿ ಬಸ್ ತಂಗುದಾಣದ ಮೇಲ್ಚಾವಣಿಗಳು ಬೀಳುವ ಸ್ಥಿತಿಯಲ್ಲಿದ್ದು, ಅಪಾಯಕಾರಿಯಾಗಿದೆ. ಹಲವೆಡೆ ತಂಗುದಾಣ ಬಳಕೆಯಿಲ್ಲದೆ ಪಾಳುಬಿದ್ದು, ಅಕ್ರಮ ಚಟುವಟಿಕೆಗಳ ತಾಣವಾಗಿದೆ.ಬಸ್ ತಂಗುದಾಣ ಜಾಲಿಗಿಡಗಳ ತಾಣ:ತಾಲೂಕಿನ ವಣಗೇರಾ ಗ್ರಾಮದಲ್ಲಿ ಇರುವ ಬಸ್ ತಂಗುದಾಣದ ಎದುರುಗಡೆ ಜಾಲಿಗಿಡದ ಮುಳ್ಳಕಂಟಿಗಳು ಬೆಳೆದು ನಿಂತಿರುವ ಪರಿಣಾಮವಾಗಿ ಸಾರ್ವಜನಿಕರು ಅದನ್ನು ಉಪಯೋಗ ಮಾಡುತ್ತಿಲ್ಲ. ಹೆಚ್ಚಿನ ಕಡೆಗಳಲ್ಲಿ ಬಸ್ ತಂಗುದಾಣದ ಬಳಿ ಗಿಡಗಂಟಿಗಳು ಬೆಳೆದು ಜನರು ಬಳಕೆಗೆ ಹಿಂದೇಟು ಹಾಕುತ್ತಾರೆ. ಬಿಸಿಲು, ಮಳೆಯಲ್ಲಿ ನಿಂತು ಬಸ್‌ಗಾಗಿ ಕಾದು ಪ್ರಯಾಣ ಬೆಳೆಸುವಂತಾಗಿದೆ. ಇದರಿಂದ ಪ್ರಯಾಣಿಕರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡಿರುವ ಬಸ್ ತಂಗುದಾಣಗಳು ವಿವಿಧ ಕಾರಣಗಳಿಂದ ಜನರ ಬಳಕೆಯಿಂದ ದೂರವಿದ್ದು, ಸ್ಥಳೀಯಾಡಳಿತ ಜನ ಬಳಕೆಗೆ ಪೂರಕವಾಗುವಂತೆ ನಿರ್ವಹಣೆ, ಕಾಯಕಲ್ಪ ಮಾಡಬೇಕಾಗಿದೆ. ಶಿಥಿಲಗೊಂಡಿರುವ ತಂಗುದಾಣಗಳ ದುರಸ್ತಿ, ಬೇಡಿಕೆ ಇರುವಲ್ಲಿ ತಂಗುದಾಣ ನಿರ್ಮಿಸುವ ಕೆಲಸವೂ ಆಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಕೋಟ್ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ಬಸ್ ತಂಗುದಾಣಗಳು ಕುಡುಕರ ತಾಣಗಳಾಗಿವೆ. ಅಲ್ಲಿ ಸ್ವಚ್ಛತೆಯ ಕೊರತೆಯ ಜೊತೆಗೆ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು.
ಶ್ರೀನಿವಾಸ ಕಂಟ್ಲಿ, ಸಾಮಾಜಿಕ ಹೋರಾಟಗಾರಕೋಟ್ಕುಷ್ಟಗಿ ತಾಲೂಕಿನಲ್ಲಿರುವ ಅನೇಕ ಗ್ರಾಮಗಳಲ್ಲಿ ಬಸ್ ತಂಗುದಾಣಗಳ ಅಭಿವೃದ್ಧಿಗೆ ದಿಕ್ಕಿಲ್ಲದಂತಾಗಿದೆ. ಸ್ಥಳೀಯ ಆಡಳಿತ ಹಾಗೂ ತಾಲೂಕಾಡಳಿತ ಎಚ್ಚೆತ್ತುಕೊಂಡು ಅವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು.
ಮಲ್ಲಪ್ಪ ಕುಷ್ಟಗಿ, ಅಮರೇಶ ತಾರಿವಾಳ, ನಿವಾಸಿಗಳು19ಕೆಎಸಟಿ1: ಕುಷ್ಟಗಿ ತಾಲೂಕಿನ ವಣಗೇರಾ ಗ್ರಾಮದ ಬಸ್ ತಂಗುದಾಣದ ಮುಂದೆ ಜಾಲಿಗಿಡಗಳು ಬೆಳೆದು ನಿಂತಿರುವುದು.ಎಂ. ಬಸಾಪೂರ ಗ್ರಾಮದ ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲದೆ ನೆಲದಲ್ಲಿ ಕುಳಿತಿರುವ ಪ್ರಯಾಣಿಕ.