ಕಡುವಿನಹೊಸಳ್ಳಿಯಿಂದ ಕುಶಾಲನಗರಕ್ಕೆ ಬಸ್‌ ಆರಂಭ

KannadaprabhaNewsNetwork | Published : Mar 3, 2024 1:34 AM

ಸಾರಾಂಶ

ರಾಮನಾಥಪುರ ಹಾಗೂ ಕೊಡಗಿನ ಕುಶಾಲನಗರ ನಡುವೆ ನಿತ್ಯವೂ ಈ ಬಸ್ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರ ಸಂಚರಿಸಲಿದೆ. ಇದಕ್ಕಾಗಿ ಸಾರಿಗೆ ಇಲಾಖೆಯ ಹಾಸನ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ದೀಪಕ್ ಕುಮಾರ್ ಎಂ.ರವರು ಗ್ರಾಪಂ ಆಡಳಿತ ಮಂಡಳಿಯ ಮನವಿ ಮೇರೆಗೆ ಎರಡು ವಿಶೇಷ ಬಸ್ ಗಳನ್ನು ಮಂಜೂರು ಮಾಡಿದ್ದಾರೆ,

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ಗಡಿಗ್ರಾಮ ಕಡುವಿನಹೊಸಹಳ್ಳಿ ಮೂಲಕ ರಾಮನಾಥಪುರ ಮತ್ತು ಕುಶಾಲನಗರ ನಡುವೆ ಸಿಟಿ ಬಸ್ ಮಾದರಿಯ ಬಸ್ ಸಂಚಾರಕ್ಕೆ ಶನಿವಾರ ಶಾಸಕ ಎ. ಮಂಜು ಚಾಲನೆ ನೀಡಿದರು.

ಕಡುವಿನಹೊಸಹಳ್ಳಿಯ ಗ್ರಾಮ ಪಂಚಾಯ್ತಿ ಕಚೇರಿಯೆದುರು ನಡೆದ ಕಾರ್ಯಕ್ರಮದಲ್ಲಿ ಬಸ್ ಗೆ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿ ಮಾತನಾಡಿದ ಶಾಸಕರು, ಕಡುವಿನಹೊಸಹಳ್ಳಿಯ ಕಾವೇರಿ ನದಿಗೆ ಸೇತುವೆ ನಿರ್ಮಾಣವಾಗಿ 25 ವರ್ಷವಾಗಿತ್ತು. ಆದರೆ ಕಡುವಿನಹೊಸಹಳ್ಳಿ ಹಾಗೂ ಬಸವನಹಳ್ಳಿ ಮತ್ತು ಕಣಗಾಲು ಮಾರ್ಗದಲ್ಲಿ ಬಸ್ ಸಂಚಾರ ಆರಂಭಿಸಬೇಕು ಎಂಬ ಬೇಡಿಕೆ ಈಡೇರಿರಲಿಲ್ಲ. ಈ ಭಾಗದ ಜನರ ಎರಡುವರೆ ದಶಕದ ಕನಸು ಈಗ ನನಸಾಗಿದೆ. ಗ್ರಾಮೀಣ ಭಾಗಕ್ಕೆ ಉತ್ತಮ ರೀತಿಯ ಸಾರಿಗೆ ಸೌಕರ್ಯ ಸಿಗುತ್ತಿರುವುದು ಸಂತಷದ ವಿಚಾರ. ಶಾಲಾ‌-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ನಿತ್ಯ ಬೆಳಿಗ್ಗೆ ಕೆಲಸಕ್ಕೆ ತೆರಳುವ ಜನರಿಗೆ ಇದರ ಸದುಪಯೋಗವಾಗಲಿದೆ ಎಂದು ಹೇಳಿದರು.

ರಾಮನಾಥಪುರ ಹಾಗೂ ಕೊಡಗಿನ ಕುಶಾಲನಗರ ನಡುವೆ ನಿತ್ಯವೂ ಈ ಬಸ್ ಬೆಳಿಗ್ಗೆಯಿಂದ ಸಂಜೆಯವರೆಗೆ ನಿರಂತರ ಸಂಚರಿಸಲಿದೆ. ಇದಕ್ಕಾಗಿ ಸಾರಿಗೆ ಇಲಾಖೆಯ ಹಾಸನ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ದೀಪಕ್ ಕುಮಾರ್ ಎಂ.ರವರು ಗ್ರಾಪಂ ಆಡಳಿತ ಮಂಡಳಿಯ ಮನವಿ ಮೇರೆಗೆ ಎರಡು ವಿಶೇಷ ಬಸ್ ಗಳನ್ನು ಮಂಜೂರು ಮಾಡಿದ್ದಾರೆ, ಈ ಬಸ್ ಗಳು ಸಂಚಾರ ಆರಂಭಿಸಿವೆ. ಅರಕಲಗೂಡು ತಾಲೂಕಿನ ಕಡುವಿನಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಹಲವು ಹಳ್ಳಿಗಳಿಗೆ ಅನುಕೂಲವಾಗಲು ರಾಮನಾಥಪುರದಿಂದ ಕುಶಾಲನಗರದ ನಡುವೆ ನಿತ್ಯವೂ ಬೆಳಿಗ್ಗೆಯಿಂದ ಸಂಜೆಯವರೆಗೆ ಸಂಚರಿಸಲು ಸಿಟಿ ಬಸ್ ಮಾದರಿಯಲ್ಲಿ ಎರಡು ಪ್ರತ್ಯೇಕ ಬಸ್ ಗಳು ಸಂಚರಿಸಲಿದ್ದು, ಈ ಮಾರ್ಗದ ಎಲ್ಲಾ ಗ್ರಾಮಗಳಲ್ಲಿ ಈ ಬಸ್ ಗಳ ನಿಲುಗಡೆಗೆ ಅವಕಾಶ ಮಾಡಲಾಗಿದೆ. ಈ ಎರಡು ಬಸ್ ಗಳು ಬೆಳಿಗ್ಗೆ ಸಂಚಾರ ಆರಂಭಿಸುವಾಗ ರಾಮನಾಥಪುರದಿಂದ ಹೊರಟು ಕೊಣನೂರು, ಸಿದ್ದಾಪುರ, ಕಡುವಿನಹೊಸಳ್ಳಿ ಮಾರ್ಗವಾಗಿ ಕಾವೇರಿ ನದಿದಾಟಿ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೆ.ಬಸವನಹಳ್ಳಿ ಹಾಗೂ ಕಣಗಾಲು ಗ್ರಾಮದ ಮೂಲಕ ಸಂಚರಿಸಿ ಚಾಮರಾಯನಕೋಟೆ, ಹೊನ್ನಾಪುರ ಮಾರ್ಗದಲ್ಲಿ ಸೂಳೆಕೋಟೆ ಮೂಲಕ ಹೆಬ್ಬಾಲೆ ಹಾಗೂ ನಂತರ ಕುಶಾಲನಗರ ತಲುಪಲಿದೆ‌. ಈ ಮೂಲಕ ಗ್ರಾಮೀಣ ಭಾಗದ ಜನರಿಗೂ ಅನುಕೂಲ ಆಗಲಿದೆ ಎಂದರು.‌

ಗ್ರಾಮ‌ ಪಂಚಾಯ್ತಿ ಅದ್ಯಕ್ಷ ಶೇಖರ್ ಮಾತನಾಡಿ, ಕಡುವಿನಹೊಸಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಐದಾರು ಹಳ್ಳಿಗಳಿವೆ, ನಿತ್ಯ ಸಾಕಷ್ಟು ಸಂಖ್ಯೆ ಯ ವಿದ್ಯಾರ್ಥಿಗಳು ಈ ಭಾಗದಿಂದ ಶಾಲಾ - ಕಾಲೇಜಿಗೆ ಹೋಗಿ ಬರುತ್ತಾರೆ. ಹಾಗಾಗಿ ಈ ಮಾರ್ಗದಲ್ಲಿ ಮತ್ತಷ್ಟು ಬಸ್ ಸಂಚಾರ ಆರಂಭವಾದರೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Share this article