9,650 ಜನರಿಗೆ ಸ್ಥಳದಲ್ಲಿಯೇ ಉದ್ಯೋಗ: ಶರಣಪ್ರಕಾಶ ಪಾಟೀಲ

KannadaprabhaNewsNetwork | Published : Mar 3, 2024 1:34 AM

ಸಾರಾಂಶ

ಬೆಂಗಳೂರಿನಲ್ಲಿ ಕಳೆದ ಫೆ.26 ಮತ್ತ 27ರಂದು ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡವರ ಪೈಕಿ 43 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದು, ಇದರಲ್ಲಿ 9,650 ಜನರಿಗೆ ಸ್ಥಳದಲಿಯೇ ಉದ್ಯೋಗ ದೊರೆತಿದೆ.

ಕಲಬುರಗಿ: ಬೆಂಗಳೂರಿನಲ್ಲಿ ಕಳೆದ ಫೆ.26 ಮತ್ತ 27ರಂದು ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಆನ್‍ಲೈನ್ ಮೂಲಕ ನೋಂದಣಿ ಮಾಡಿಕೊಂಡವರ ಪೈಕಿ 43 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದು, ಇದರಲ್ಲಿ 9,650 ಜನರಿಗೆ ಸ್ಥಳದಲಿಯೇ ಉದ್ಯೋಗ ದೊರೆತಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದ್ದಾರೆ.

ಶನಿವಾರ ಕಲಬುರಗಿ ನಗರದಲ್ಲಿ ನಿರ್ಮಾಣದ ಹಂತದಲ್ಲಿರುವ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಉದ್ಯೋಗ ಮೇಳದಲ್ಲಿ ಸುಮಾರು 590 ಕಂಪನಿಗಳು ಭಾಗಿಯಾಗಿದ್ದವು. 15 ಸಾವಿರ ಅಭ್ಯರ್ಥಿಗಳು ಮುಂದಿನ ಹಂತಕ್ಕೆ ಶಾರ್ಟ್ ಲಿಸ್ಟ್ ಆಗಿದ್ದಾರೆ. ಉಳಿದಂತೆ 15 ಸಾವಿರ ಅಭ್ಯರ್ಥಿಗಳು ಕಂಪನಿಯ ವಿವಿಧ ನೇಮಕಾತಿ ಹಂತದಲ್ಲಿದ್ದಾರೆಂದರು.

ಯುವ ಸಮೃದ್ಧಿ ಸಮ್ಮೇಳನ ಯಶಸ್ಸಿನ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಮುಗಿದ ನಂತರ ಕಲಬುರಗಿ, ಮೈಸೂರು, ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ವಿಭಾಗವಾರು ಉದ್ಯೋಗ ಮೇಳ ನಡೆಸಲು ಉದ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದರು.

ದೇಶದಲ್ಲಿ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ನೀಡುವ ಭರವಸೆ ನೀಡಿತ್ತು. ಆದರೆ ಅದು ಸಾಧ್ಯವಾಗಿಲ್ಲ. ರೂಪಾಯಿ ಅಮಾನ್ಯೀಕರಣ, ಜಿ.ಎಸ್.ಟಿ. ಜಾರಿದಂತಹ ಕೇಂದ್ರದ ಕೆಟ್ಟ ನೀತಿಯಿಂದ ಈ ಸಮಸ್ಯೆ ಹೆಚ್ಚು ಉಲ್ಭಣವಾಗಿದೆ. ದೇಶದಲ್ಲಿ ಶೇ.8ರಷ್ಟು ನಿರುದ್ಯೋಗ ಸಮಸ್ಯೆ ಇದ್ದರೆ ಕರ್ನಾಟಕದಲ್ಲಿ ಇದರ ಪಾಲು ಶೇ.2.5 ಇದೆ ಎಂದರು.

ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಯುವ ನಿಧಿ, ಉದ್ಯೋಗಾಧಾರಿತ ಕೌಶಲ್ಯ ನೀಡುತ್ತಿರುವುದು ಇದಕ್ಕೆ ಕಾರಣವಾಗಿದೆ. 371ಜೆ ಮೀಸಲಾತಿ ಸೌಲಭ್ಯ ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿಯೇ 15 ಸಾವಿರ ವಿವಿಧ ಹುದ್ದೆಗಳು ನೇಮಕಾತಿಯ ವಿವಿಧ ಹಂತದಲ್ಲಿವೆ. ಮುಂದಿನ 3 ವರ್ಷದಲ್ಲಿ ಉಳಿದ ಹುದ್ದೆಗಳನ್ನು ತುಂಬಲು ನಮ್ಮ ಸರ್ಕಾರ ಬದ್ಧವಾಗಿದೆ. ಯುವ ನಿಧಿ+ ಯೋಜನೆಯಡಿ 25 ಸಾವಿರ ಅಭ್ಯರ್ಥಿಗಳಿಗೆ ಲರ್ನಿಂಗ್ ಸ್ಕಿಲ್ ಮತ್ತು ಉದ್ಯೋಗ ಪಡೆಯುವ ಅರ್ಹತಾ ತರಬೇತಿ ನೀಡಲಾಗುತ್ತದೆ. ಒಟ್ಟಾರೆ ಯುವಕರ ಸಮಗ್ರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದ ಸಚಿವರು, ಯುವ ನಿಧಿ ಯೋಜನೆಯಡಿ 1.40 ಕೋಟಿ ಜನ ನೋಂದಾಯಿಸಿಕೊಂಡಿದ್ದು, ಇದರಲ್ಲಿ 50 ಸಾವಿರ ಜನರಿಗೆ ಮಾಸಿಕ 1500 ಮತ್ತು 3,000 ರು. ನೀಡಲಾಗುತ್ತಿದೆ ಎಂದರು.

ಜಿ.ಟಿ.ಟಿ.ಸಿ. ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆ:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕಲಬುರಗಿ, ಕೊಪ್ಪಳದ ತಳಕಲ್ ಮತ್ತು ಮೈಸೂರಿನ ವರುಣಾದಲ್ಲಿ ಒಟ್ಟು 350 ಕೋಟಿ ರು. ವೆಚ್ಚದಲ್ಲಿ ಮುಂದಿನ 3 ವರ್ಷದಲ್ಲಿ ಜಿ.ಟಿ.ಟಿ.ಸಿ. ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು. ಕಲಬುರಗಿಯ ಕೆ.ಜಿ.ಟಿ.ಟಿ.ಐ.ನಲ್ಲಿ ಸಿ.ಎನ್.ಸಿ. ಯಂತ್ರವನ್ನು ಕೇಂದ್ರೀಕರಿಸುವ ಮೊದಲ ಶ್ರೇಷ್ಠತಾ ಕೇಂದ್ರವನ್ನು 16 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

Share this article