ಲೇಡಿಗೋಷನ್‌ನಲ್ಲಿ ಹಿಂದಿನಂತೆಯೇ ಬಸ್‌ ನಿಲುಗಡೆ: ಡಿಸಿಪಿ

KannadaprabhaNewsNetwork | Updated : Sep 23 2024, 01:18 AM IST

ಸಾರಾಂಶ

ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಾರ್ವಜನಿಕರ ಆಗ್ರಹದ ಮೇರೆಗೆ ಲೇಡಿಗೋಷನ್‌ನಲ್ಲಿ ಬಸ್ ನಿಲುಗಡೆಯನ್ನು ಹಿಂದಿನಂತೆಯೇ ಮುಂದುವರಿಸಲಾಗಿದೆ ಎಂದು ಮಂಗಳೂರು ಪೊಲೀಸ್‌ ಕಮಿಷನರೇಟ್‌ನ ಸಂಚಾರ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌ ಹೇಳಿದ್ದಾರೆ. ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಭಾನುವಾರ ನಡೆದ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯ ಬಳಿಕ ಅವರು ಸುದ್ದಿಗಾರರಲ್ಲಿ ಮಾತನಾಡಿದರು.

ಸ್ಮಾರ್ಟ್‌ಸಿಟಿ ಶಿಫಾರಸು ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಪ್ರಾಯೋಗಿಕವಾಗಿ ಬದಲಾವಣೆ ತರಲಾಗಿತ್ತು. ಸಮೀಪದಲ್ಲೇ ಬಸ್‌ ನಿಲ್ದಾಣ ಇರುವುದರಿಂದ ಅಲ್ಲಿಂದಲೇ ಪ್ರಯಾಣಿಕರು ಬಸ್‌ ಹತ್ತಿಕೊಳ್ಳಬೇಕು. ನಿಲ್ದಾಣದ ಎದುರು ಮತ್ತೆ ಹತ್ತಿಸಿಕೊಳ್ಳುವುದು ಸರಿಯಲ್ಲ. ಹಾಗಾಗಿ ಲೇಡಿಗೋಷನ್‌ ಬಸ್‌ ಸ್ಟಾಪ್‌ನ್ನು ರದ್ದುಗೊಳಿಸುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಪತ್ರ ಬರೆದು ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಸಂಚಾರ ಮಾರ್ಪಾಟುಗೊಳಿಸಲಾಗಿತ್ತು. ಆದರೆ ಇದರಿಂದ ತೊಂದರೆಯಾಗುತ್ತಿದೆ ಎಂಬ ಜನತೆಯ ದೂರಿನ ಮೇರೆಗೆ ಮತ್ತೆ ಹಿಂದಿನಂತೆಯೇ ಲೇಡಿಗೋಷನ್‌ನಿಂದ ಪ್ರಯಾಣಿಕರಿಗೆ ಬಸ್‌ ಹತ್ತಲು ಅವಕಾಶ ಕಲ್ಪಿಸಲಾಗಿದೆ ಎಂದರು.

ದ್ವಿಮುಖ ಸಂಚಾರಕ್ಕೆ ಕ್ರಮ:

ನಗರದ ಕ್ಲಾಕ್‌ ಟವರ್‌ನಿಂದ ಹ್ಯಾಮಿಲ್ಟನ್‌ ವೃತ್ತ ವರೆಗೆ ಈಗ ಇರುವ ಏಕಮುಖ ಸಂಚಾರವನ್ನು ತೆಗೆದು ದ್ವಿಮುಖ ಸಂಚಾರ ಏರ್ಪಡಿಸುವಂತೆ ಹಲವು ಮನವಿಗಳು ಬಂದಿದೆ. ಸುಗಮ ಸಂಚಾರ ದೃಷ್ಟಿಯಿಂದ ಈ ಬದಲಾವಣೆ ಮಾಡಲಾಗಿತ್ತು. ಆದರೆ ಮತ್ತೆ ಹಿಂದಿನಂತೆಯೇ ದ್ವಿಮುಖ ಸಂಚಾರಕ್ಕೆ ಬೇಡಿಕೆ ವ್ಯಕ್ತಗೊಳ್ಳುತ್ತಿರುವುದಿಂದ ಕ್ಲಾಕ್‌ಟವರ್‌ ವೃತ್ತದಲ್ಲಿ ಬಂದ್‌ ಮಾಡಿರುವುದನ್ನು ತೆರವುಗೊಳಿಸಿಕೊಡುವಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳನ್ನು ಕೋರಲಾಗಿದೆ ಎಂದರು.

ವಿಡಿಯೋ ಮಾಡಿ ಕೇಸ್‌ ದಾಖಲಿಗೆ ಸೂಚನೆ:

ನಗರ ಶಾಲೆಗಳ ಹೊರ ಆವರಣದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಉಂಟಾಗುವಂತೆ ಪೋಷಕರು ಹಾಗೂ ಶಾಲಾ ವಾಹನಗಳು ಮಕ್ಕಳನ್ನು ಇಳಿಸುತ್ತಿವೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಶಾಲಾ ಆವರಣದ ಒಳಗೆ ಹೋಗದೆ, ಆವರಣದಲ್ಲೇ ಮಕ್ಕಳನ್ನು ಇಳಿಸುವ ವಾಹನಗಳ ವಿಡಿಯೋ ಚಿತ್ರೀಕರಣ ನಡೆಸಿ ಕೇಸು ದಾಖಲಿಸುವಂತೆ ಸಂಚಾರಿ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಡಿಸಿಪಿ ದಿನೇಶ್‌ ಕುಮಾರ್‌ ಹೇಳಿದರು.

ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್‌ ಅಧ್ಯಕ್ಷತೆಯಲ್ಲಿ ನಡೆದ ಎಸ್‌ಸಿ ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಪ್ರಸ್ತಾಪಿಸಿ, ಶಾಲಾರಂಭ ವೇಳೆ ಮಕ್ಕಳನ್ನು ಶಾಲಾ ಆವರಣದ ಹೊರಗೆ ರಸ್ತೆಯಲ್ಲೇ ಇಳಿಸುವ ಮೂಲಕ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

ರಾತ್ರಿ ಪ್ಯಾಟ್ರೋಲಿಂಗ್‌ಗೆ ಸೂಚನೆ:

ರಾತ್ರಿ ರಸ್ತೆಯಲ್ಲಿ ನಿಂತುಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸುವ ಮಂಗಳಮುಖಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಘಟನೆಯೊಂದನ್ನು ಉಲ್ಲೇಖಿಸಿ ದಲಿತ ಮುಖಂಡರೊಬ್ಬರು ಆಗ್ರಹಿಸಿದರು.

ಮುಂಗಳಮುಖಿಯರ ಸಹಿತ ಯಾರಾದರೂ ವಾಹನ ಸಂಚಾರಕ್ಕೆ ರಾತ್ರಿ ಅಡ್ಡಿಪಡಿಸಿದರೆ ಅಂತಹವರ ವಿರುದ್ಧ ಪ್ರ್ಯಾಟ್ರೋಲಿಂಗ್‌ ನಡೆಸಬೇಕು. ಸುಲಿಗೆಯಂತಹ ಪ್ರಕರಣ ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಸಿಪಿ ದಿನೇಶ್‌ ಕುಮಾರ್‌ ಸೂಚಿಸಿದರು.

ಎಸಿಪಿ ಧನ್ಯಾ ನಾಯಕ್‌ ನಿರೂಪಿಸಿದರು.

Share this article