ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಭಾರೀ ದನಗಳ ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ರಾಸುಗಳು ಆಗಮಿಸಿದ್ದು ಎತ್ತುಗಳ ಪ್ರದರ್ಶನ ಒಂದಡೆಯಾದರೆ, ಮತ್ತೊಂದೆಡೆ ಎತ್ತುಗಳ ಮಾರಾಟ ಜೋರಾಗಿ ನಡೆಯುತ್ತಿದೆ.

ಪ್ರತಿ ವರ್ಷ ನಡೆಯುವ ಭಾರೀ ದನಗಳ ಜಾತ್ರಾ ಮಹೋತ್ಸವದಲ್ಲಿ ಎತ್ತುಗಳೇ ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಹಳ್ಳಿಕಾರ್ ತಳಿಗಳ ಎತ್ತುಗಳದ್ದೇ ದರ್ಬಾರ್ ಜೋರಾಗಿ ನಡೆಯುತ್ತಿದೆ.

15 ಲಕ್ಷ ರು. ಬೆಲೆಯ ಹಳ್ಳಿಕಾರ್‌ ಎತ್ತುಗಳು:

ಜಾತ್ರೆಯಲ್ಲಿ 50 ಸಾವಿರ ರು.1, 2, 3 ಲಕ್ಷ ರು. ನಿಂದ ಆರಂಭವಾಗಿ 15 ಲಕ್ಷಕ್ಕೂ ಅಧಿಕ ಬೆಲೆ ಬಾಳು ಹಳ್ಳಿಕಾರ್ ಎತ್ತುಗಳು, ಬೀಜದ ಹೋರಿಗಳನ್ನು ನೋಡಬಹುದು. 9 ದಿನಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ನೂರಾರು ಸಂಖ್ಯೆಯಲ್ಲಿ ಜೋಡೆತ್ತುಗಳು, ಹೋರಿಗಳು, ಕಡಸುಗಳು ಆಗಮಿಸಿವೆ. ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಎತ್ತುಗಳನ್ನು ಸಾಕಾಣಿಕೆ ಮಾಡಿರುವ ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಟೆಂಡ್, ಶಾಮಿಯಾನಗಳನ್ನು ಹಾಕಿಸಿ ಎತ್ತುಗಳನ್ನು ಜಾತ್ರೆಯಲ್ಲಿ ಮಾರಾಟ, ಪ್ರದರ್ಶನಕ್ಕಿಟ್ಟಿದ್ದಾರೆ.


ವಿಧಾನಸೌಧ ಮಾದರಿಯ ಟೆಂಟ್‌ ಆಕರ್ಷಣೆ:

ಜಾತ್ರೆ ಮೈದಾನದಲ್ಲಿ ಮೈಸೂರಿನ ಒಂಟಿಕೊಪ್ಪಲು ನಿವಾಸಿ ಪೈಲ್ವಾನ್ ಪ್ರಕಾಶ್ ಅವರು ವಿಧಾನಸೌದ ಮಾದರಿಯಲ್ಲಿ ಟೆಂಟ್‌ ನಿರ್ಮಾಣ ಮಾಡಿ ಅಲ್ಲಿ ಪ್ರದರ್ಶನಕ್ಕಿಟ್ಟಿರುವ ಲಕ್ಷಾಂತರ ಬೆಲೆ ಬಾಳುವ ಹಳ್ಳೀಕಾರ್ ತಳಿಯ ಜೋಡೆತ್ತುಗಳು ಎಲ್ಲರನ್ನು ಆಕರ್ಷಿಸುತ್ತಿವೆ.

ರೈತ ಪೈಲ್ವಾನ್ ಪ್ರಕಾಶ್ ಅವರು 4 ಜತೆ ಜೋಡೆತ್ತುಗಳನ್ನು ಪ್ರದರ್ಶನಕ್ಕಿಟ್ಟಿದ್ದು, 14 ಲಕ್ಷ ರು. ಬೆಲೆ ಬಾಳುವ 4 ಹಲ್ಲಿನ ಜೋಡೆತ್ತು, 10 ಲಕ್ಷ ರು. ಮೌಲ್ಯದ ಬಾಯಿಗೂಡಿದ ಜೋಡೆತ್ತು, 10 ಲಕ್ಷ ರು.ನ 2 ಹಲ್ಲಿನ ಜೋಡೆತ್ತು, 7.50 ಲಕ್ಷ ರು. ಮೌಲ್ಯದ ಹಾಲುಹಲ್ಲಿನ ಜೋಡೆತ್ತಿಗಳನ್ನು ಪ್ರದರ್ಶಿಸಿದ್ದಾರೆ. ಇವರು ಕಳೆದ ಮೂರು ದಶಕಗಳಿಂದಲೂ ಜಾತ್ರೆಯಲ್ಲಿ ಎತ್ತುಗಳನ್ನು ಪ್ರದರ್ಶಕ್ಕಿಡುವ ಮೂಲಕ ಬಹುಮಾನವನ್ನು ಗೆದ್ದಿದ್ದಾರೆ.

ಪಾಂಡವಪುರ ತಾಲೂಕಿನ ಡಾಮಡಹಳ್ಳಿ ಗ್ರಾಮದ ನಿವಾಸಿ ರಮೇಶ್, ವಿನೋದ್ ಎಂಬುವರು 15 ಲಕ್ಷ ರು. ಬೆಲೆ ಬಾಳುವ ಹೊಸಬಾಯಿ ಜೋಡೆತ್ತು, 8.50 ಲಕ್ಷ ಮೌಲ್ಯದ ಎರಡುಹಲ್ಲುಗಳ ಜೋಡೆತ್ತು, ಕನಕಪುರ ಮುನಿರಾಜು ಅವರು 6 ಲಕ್ಷ ರು. ಮೌಲ್ಯದ ಬೀಜದ ಹೋರಿ ಕಟ್ಟಿದ್ದಾರೆ.

ಪಾಂಡವಪುರ ತಾಲೂಕಿನ ಶ್ಯಾದನಹಳ್ಳಿ ಗ್ರಾಮದ ಸಾವಯವ ಕೃಷಿಕ ಚಲುವರಾಜು ಅವರು ಸಹ 6 ಹಲ್ಲಿನ 5 ಲಕ್ಷ ಮೌಲ್ಯದ ಹಳ್ಳಿಕಾರ್ ಎತ್ತುಗಳನ್ನು ಕಟ್ಟುವ ಮೂಲಕ ಗಮನಸೆಳೆದಿದ್ದಾರೆ.

321 ರಾಸುಗಳು ಬಹುಮಾನಕ್ಕೆ ನೋಂದಣಿ:

ಜಾತ್ರೆಯಲ್ಲಿ ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡುವ ಹಿನ್ನೆಲೆಯಲ್ಲಿ ಬಹುಮಾನಕ್ಕಾಗಿ 321 ರಾಸುಗಳು ನೋಂದಣಿ ಮಾಡಿಸಿದ್ದಾರೆ. ಜೋಡಿ ಎತ್ತುಗಳ ವಿಭಾಗದಲ್ಲಿ 192 ರಾಸುಗಳು ನೋಂದಣಿ ಮಾಡಿಸಿದ್ದಾರೆ ಹಾಲು ಹಲ್ಲು ವಿಭಾಗದಲ್ಲಿ 58 ಜತೆ, 2ಹಲ್ಲು ವಿಭಾಗದಲ್ಲಿ 52 ಜತೆ, 4ಹಲ್ಲು-23, 6 ಹಲ್ಲು-15, ಬಾಯಿಗೂಡಿದ ವಿಭಾಗದಲ್ಲಿ-44, ಕಡಸು ವಿಭಾಗದಲ್ಲಿ 75 ನೋಂದಣಿ ಮಾಡಿಸಿದ್ದು, ಹಾಲು ಹಲ್ಲು-23, 2 ಹಲ್ಲು-17, 4 ಹಲ್ಲು-11, 6 ಹಲ್ಲು-9, 8ಹಲ್ಲು-15 ಮತ್ತು ಬೀಜದ ಹೋರಿ ವಿಭಾಗದಲ್ಲಿ 54 ನೋಂದಣಿಯಾಗಿದ್ದು ಹಾಲುಹಲ್ಲು-15, 2ಹಲ್ಲು-10, 4 ಹಲ್ಲು-11, 6 ಹಲ್ಲು-8, ಬಾಯಿಗೂಡಿ ಹಲ್ಲು-10 ನೋಂದಣಿ ಮಾಡಿಸಿದ್ದಾರೆ.

ಜಾತ್ರೆಯಲ್ಲಿ ಭಾಗವಹಿಸಿ ಬಹುಮಾನಕ್ಕೆ ನೋಂದಣಿ ಮಾಡಿಸುವ ರೈತರ ಬಳಿ ಇಷ್ಟು ಯಾವುದೇ ನೋಂದಣಿ ಶುಲ್ಕಪಡೆಯದೆ ಉಚಿತವಾಗಿ ನೋಂದಣಿ ಮಾಡಿಸಲಾಗುತ್ತಿತ್ತು, ಆದರೆ, ಇದೇ ಮೊದಲ ಬಾರಿಗೆ ಬಹುಮಾನಕ್ಕೆ ನೋಂದಣಿ ಮಾಡಿಸುವ ರೈತರಿಂದ 1000 ಮತ್ತು 500 ನೋಂದಣಿ ಶುಲ್ಕಪಡೆಯಲಾಗಿದೆ. ಇದು ಕೆಲವು ರೈತರಲ್ಲಿ ಅಸಮಧಾನ ಮೂಡಿಸಿದೆ.