ಶೀಘ್ರವೇ ಲೇಡಿಗೋಷನ್‌ ಮುಂಭಾಗ ಬಸ್‌ ಸ್ಟಾಪ್‌ ರದ್ದು!

KannadaprabhaNewsNetwork |  
Published : Aug 26, 2024, 01:42 AM IST
ಲೇಡಿಗೋಷನ್‌ ಬಳಿಯ ಹಾಲಿ ಪ್ರಯಾಣಿಕ ತಂಗುದಾಣ | Kannada Prabha

ಸಾರಾಂಶ

ಲೇಡಿಗೋಷನ್‌ ಬಸ್‌ ನಿಲ್ದಾಣ ರದ್ದುಗೊಂಡರೆ, ಪ್ರಯಾಣಿಕರು ಸ್ಟೇಟ್‌ಬ್ಯಾಂಕ್‌ ಬಸ್ಟೇಂಡ್‌ನಲ್ಲೇ ನಗರ ಹಾಗೂ ಗ್ರಾಮಾಂತರ ಸಾರಿಗೆ ಬಸ್‌ಗಳನ್ನು ಹತ್ತಬೇಕು.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಸ್ಟೇಟ್‌ಬ್ಯಾಂಕ್‌ ಸಿಟಿ ಹಾಗೂ ಗ್ರಾಮಾಂತರ ಬಸ್‌ ನಿಲ್ದಾಣದಿಂದ ಹೊರ ಹೋಗುವ ಎಲ್ಲ ಬಸ್‌ಗಳಿಗೆ ಲೇಡಿಗೋಷನ್‌ ಮುಂಭಾಗ ನಿಲುಗಡೆ ರದ್ದುಪಡಿಸಲು ಮಂಗಳೂರು ಸಂಚಾರಿ ಪೊಲೀಸ್‌ ವಿಭಾಗ ಶೀಘ್ರವೇ ಕ್ರಮ ಕೈಗೊಳ್ಳಲಿದೆ.

ಬಸ್ಟೇಂಡ್‌ನಿಂದ 50 ಮೀಟರ್‌ ವರೆಗೆ ಬಸ್‌ ಸ್ಟಾಪ್‌ ಬೇಡ ಎಂಬ ಮಂಗಳೂರು ಸ್ಮಾರ್ಟ್‌ಸಿಟಿ ಅಧಿಕಾರಿಗಳ ಸಲಹೆ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಸ್ಟೇಟ್‌ಬ್ಯಾಂಕ್‌ ಬಸ್ಟೇಂಡ್‌ನಿಂದ ಹೊರ ಹೋಗುವ ಬಸ್‌ಗಳಿಗೆ ಅಲ್ಲೇ ಮುಂಭಾಗ ನಿಲುಗಡೆ ನೀಡಬಾರದು. ಇದರಿಂದ ಮತ್ತೆ ಟ್ರಾಫಿಕ್‌ ಅಡಚಣೆಗೆ ಕಾರಣವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಅಲ್ಲಿ ಬಸ್‌ ಸ್ಟಾಪ್‌ ನೀಡದಂತೆ ಸಲಹೆ ಮಾಡಿದ್ದಾರೆ.

ಪ್ರಸಕ್ತ ಸಿಟಿ ಹಾಗೂ ಸರ್ವಿಸ್‌ ಬಸ್‌ಗಳು ಬಸ್ಟೇಂಡ್‌ನಿಂದ ಹೊರಟು ಲೇಡಿಗೋಷನ್‌ ಆಸ್ಪತ್ರೆ ಎದುರು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ಇಲ್ಲಿ ಪ್ರಯಾಣಿಕರ ತಂಗುದಾಣ ಕೂಡ ಇದ್ದು, ಮಾರುಕಟ್ಟೆ ಸೇರಿದಂತೆ ವಿವಿಧ ಕೆಲಸಗಳಿಗೆ ಆಗಮಿಸುವ ಮಂದಿ ಇಲ್ಲಿಂದಲೇ ಬಸ್‌ ಹತ್ತುತ್ತಾರೆ. ಆದರೆ ಬಸ್‌ಗಳು ಬಸ್‌ಸ್ಟಾಪ್‌ನಲ್ಲಿ ನಿಲುಗಡೆ ಮಾಡಿದರೂ ಇತರೆ ಬಸ್‌ಗಳ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗುತ್ತಿದೆ. ಅಲ್ಲಿಯೇ ಬ್ಯಾರಿಕೇಡ್‌ ಹಾಕಿರುವುದೂ ಸಂಚಾರ ದಟ್ಟಣೆಗೆ ಕಾರಣವಾಗಿದೆ. ಹೀಗಾಗಿ ಅಲ್ಲಿರುವ ಬಸ್‌ ಸ್ಟಾಪನ್ನೇ ರದ್ದುಗೊಳಿಸಲು ತೀರ್ಮಾನಿಸಲಾಗಿದೆ.

ಬಸ್ಟೇಂಡ್‌ನಲ್ಲೇ ಪಿಕ್ ಅಪ್‌:

ಲೇಡಿಗೋಷನ್‌ ಬಸ್‌ ನಿಲ್ದಾಣ ರದ್ದುಗೊಂಡರೆ, ಪ್ರಯಾಣಿಕರು ಸ್ಟೇಟ್‌ಬ್ಯಾಂಕ್‌ ಬಸ್ಟೇಂಡ್‌ನಲ್ಲೇ ನಗರ ಹಾಗೂ ಗ್ರಾಮಾಂತರ ಸಾರಿಗೆ ಬಸ್‌ಗಳನ್ನು ಹತ್ತಬೇಕು. ಸ್ಟೇಟ್‌ಬ್ಯಾಂಕ್‌ನಿಂದ ಬಸ್‌ ಹೊರಟರೆ, ಹಂಪನಕಟ್ಟೆ ವಿವಿ ಕಾಲೇಜು ಬಳಿ ಮಾತ್ರ ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಅವಕಾಶ ನೀಡಲು ತೀರ್ಮಾನಿಸಲಾಗಿದೆ.

ಲೇಡಿಗೋಷನ್‌ ಬಸ್‌ ನಿಲ್ದಾಣದುದ್ದಕ್ಕೂ ರಸ್ತೆ ವಿಭಾಜಕ ಕಾಣಿಸಿಕೊಳ್ಳಲಿದೆ. ಅಲ್ಲಿ ಬಸ್ಟೇಂಡ್‌ಗೆ ತೆರಳುವವರಿಗೆ ರಸ್ತೆ ದಾಟಲು ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಸ್ಮಾರ್ಟ್‌ಸಿಟಿ ವತಿಯಿಂದ ಬ್ಯಾರಿಕೇಡ್‌ ಅಳವಡಿಕೆಯಾದ ಕೂಡಲೇ ಇಲ್ಲಿ ಸಂಚಾರ ವ್ಯವಸ್ಥೆ ಮಾರ್ಪಾಟುಗೊಳ್ಳಲಿದೆ ಎಂದು ಸಂಚಾರಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.ನಗರದಲ್ಲಿ ಶಾಶ್ವತ ಡಿವೈಡರ್‌ ರಚನೆ

ಮಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲು ತೆರೆದ ಡಿವೈಡರ್‌ಗಳಲ್ಲಿ ಬ್ಯಾರಿಕೇಡ್‌ ಅಥವಾ ಕೋನ್‌ ಮೂಲಕ ತಾತ್ಕಾಲಿಕವಾಗಿ ಮುಚ್ಚಿದ 18 ಸ್ಥಳಗಳಲ್ಲಿ ಶಾಶ್ವತ ಡಿವೈಡರ್‌ ನಿರ್ಮಿಸುತ್ತಿದ್ದು, ಈಗಾಗಲೇ ಎಂಟು ಕಡೆಗಳಲ್ಲಿ ಶಾಶ್ವತ ಡಿವೈಡರ್‌ ರಚಿಸಲಾಗಿದೆ. ಈ ಸ್ಥಳಗಳಲ್ಲಿ ಸಂಚಾರ ವ್ಯವಸ್ಥೆ ಕೂಡ ಮಾರ್ಪಾಟುಗೊಳಿಸಲಾಗುತ್ತಿದೆ ಎಂದು ಸಂಚಾರಿ ವಿಭಾಗದ ಡಿಸಿಪಿ ದಿನೇಶ್‌ ಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ನಗರದ ಹ್ಯಾಮಿಲ್ಟನ್‌/ ಸ್ಟೇಟ್‌ಬ್ಯಾಂಕ್‌ ವೃತ್ತ, ಕೆಎಸ್‌ರಾವ್‌ ರಸ್ತೆ, ಶರವು ಕ್ರಾಸ್‌ ಎದುರು, ಅಂಬೇಡ್ಕರ್‌ ಸರ್ಕಲ್‌ನಿಂದ ಬಂಟ್ಸ್‌ಹಾಸ್ಟೆಲ್‌ ರಸ್ತೆಯಲ್ಲಿ ಸೋಮಯಾಜಿ ಬಿಲ್ಡಿಂಗ್‌ ಎದುರು, ಮಹಾರಾಜ ಹೊಟೇಲ್‌ ಎದುರು, ಬಲ್ಮಠ ಜಂಕ್ಷನ್‌, ಬಲ್ಮಠ ಜ್ಯೂಸ್‌ ಜಂಕ್ಷನ್‌, ಅವೇರಿ ಜಂಕ್ಷನ್‌, ಕೆಎಸ್‌ಆರ್‌ ರಸ್ತೆಯಲ್ಲಿ ಹೊಟೇಲ್‌ ಪೂಂಜಾ ಆರ್ಕೇಡ್‌ ಎದುರು ಈ ಎಂಟು ಕಡೆಗಳಲ್ಲಿ ಶಾಶ್ವತ ಡಿವೈಡರ್‌ ನಿರ್ಮಿಸಲಾಗಿದೆ. ಉಳಿದಂತೆ ಲೇಡಿಗೋಷನ್‌ ಆಸ್ಪತ್ರೆ ಎದುರು, ಕರಂಗಲ್ಪಾಡಿ ಜಂಕ್ಷನ್‌, ಬಂಟ್ಸ್‌ಹಾಸ್ಟೆಲ್‌ ಜಂಕ್ಷನ್‌, ಭಾರತ್‌ ಬೀಡಿ ಜಂಕ್ಷನ್‌, ಸಂತ ಆಗ್ನೇಸ್‌, ಬೆಂದೂರ್‌ವೆಲ್‌ ಜಂಕ್ಷನ್‌, ಕರಾವಳಿ ಜಂಕ್ಷನ್‌, ಕಂಕನಾಡಿ ಜಂಕ್ಷನ್‌ 1 ಮತ್ತು 2 ಹಾಗೂ ಮಧುವನ್‌ ಕ್ರಾಸ್‌ ಯೆಯ್ಯಾಡಿಯಲ್ಲಿ ಶಾಶ್ವತ ಡಿವೈಡರ್‌ ರಚನೆ ಬಾಕಿ ಇದೆ. ಸುಗಮ ಸಂಚಾರಕ್ಕೆ ಲೇಡಿಗೋಷನ್‌ ಎದುರು ಬಸ್‌ ಸ್ಟಾಪ್‌ ನೀಡದಂತೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ. ಅಲ್ಲಿ ಶಾಶ್ವತ ಡಿವೈಡರ್‌ ಅಳವಡಿಸಿದ ಬಳಿಕ ಸ್ಟೇಟ್‌ಬ್ಯಾಂಕ್‌ ಬಸ್ಟೇಂಡ್‌ನಿಂದ ಹೊರಡುವ ಎಲ್ಲ ಬಸ್‌ಗಳು ನೇರವಾಗಿ ಸಂಚರಿಸಿ ಹಂಪನಕಟ್ಟೆ ವಿವಿ ಕಾಲೇಜು ಎದುರು ಮಾತ್ರ ನಿಲುಗಡೆ ನೀಡಲಿವೆ. ಪ್ರಯಾಣಿಕರು ಸ್ಟೇಟ್‌ಬ್ಯಾಂಕ್‌ ಬಸ್ಟೇಂಡ್‌ಗೆ ಬಂದೇ ಬಸ್‌ ಹತ್ತಬೇಕಾಗುತ್ತದೆ.

-ದಿನೇಶ್‌ ಕುಮಾರ್‌, ಡಿಸಿಪಿ, ಸಂಚಾರಿ ವಿಭಾಗ

----------------

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ