ಹೆಚ್ಚಿನ ಮಕ್ಕಳು ಬರುವ ಸರ್ಕಾರಿ ಶಾಲೆಗೆ ಬಸ್‌ ವ್ಯವಸ್ಥೆ: ಎಚ್‌ಡಿಕೆ

KannadaprabhaNewsNetwork |  
Published : Jun 10, 2026, 01:30 AM IST
9ಕೆಎಂಎನ್‌ಡಿ-7ಮಂಡ್ಯ ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಮೇಘಾ ಟ್ರಾವೆಲ್ಸ್‌ನ ತಿಮ್ಮೇಗೌಡರು ಕೊಡುಗೆಯಾಗಿ ನೀಡಿರುವ ಬಸ್ ವಿತರಣೆಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. ಜೆಡಿಎಸ್ ಮುಖಂಡರಾದ ಕೆ.ಎಸ್.ವಿಜಯಾನಂದ, ಬಿ ಆರ್ ರಾಮಚಂದ್ರ ಇತರರಿದ್ದರು. | Kannada Prabha

ಸಾರಾಂಶ

ಜನ್ಮ ಕೊಟ್ಟ ತಂದೆ-ತಾಯಿಯರು, ಕುಟುಂಬದಲ್ಲಿರುವ ಅಕ್ಕತಂಗಿಯರು, ಅಣ್ಣ-ತಮ್ಮಂದಿರಲ್ಲಿ ಸಹೋದರ ಸಹೋದರಿ ಮನೋಭಾವ ಕ್ಷುಲ್ಲಕ ಕಾರಣಕ್ಕೆ ನಶಿಸಿ ಹೋಗುತ್ತಿವೆ. ಹಿಂದೆ ಕುಟುಂಬದಲ್ಲಿ 20 ಜನ ಒಟ್ಟೊಟ್ಟಿಗೆ ಕುಳಿತು ಊಟ ಮಾಡುತ್ತಿದ್ದ ದಿನಗಳು ಈಗ ಕಾಣಲಾಗುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸಕ್ಕೆ ಬರುವ ಸರ್ಕಾರಿ ಶಾಲೆಗಳಿಗೆ ಬಸ್ಸಿನ ವ್ಯವಸ್ಥೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ತಾಲೂಕಿನ ಕೀಲಾರ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಮೇಘಾ ಟ್ರಾವೆಲ್ಸ್‌ನ ತಿಮ್ಮೇಗೌಡರು ಕೊಡುಗೆಯಾಗಿ ನೀಡಿರುವ ಬಸ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ದಿವಂಗತ ಕೆ.ವಿ.ಶಂಕರಗೌಡರು ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅದರಲ್ಲೂ ಜನರ ಪ್ರೀತಿ ವಿಶ್ವಾಸದಿಂದ ಶಿಕ್ಷಣ ಕ್ಷೇತ್ರಕ್ಕೆ ಪ್ರೋತ್ಸಾಹ ಕೊಡಲು ಮಂಡ್ಯ ಜಿಲ್ಲೆಗೆ ಅವರ ಕೊಡುಗೆ ಅಪಾರವಾಗಿದೆ. ಜೊತೆಗೆ ಈ ದೇಶದ ಬೆನ್ನೆಲುಬು ರೈತನ ಬದುಕಿನ ಬಗ್ಗೆಯೂ ಚಿಂತನೆ ಮಾಡಿದ್ದರು ಎಂದರು.

ಕೆ.ವಿ.ಶಂಕರಗೌಡರು ಬುನಾದಿ ಹಾಕಿರುವ ಕೀಲಾರ ಸರ್ಕಾರಿ ಶಾಲೆಯನ್ನು ಹಲವಾರು ದಾನಿಗಳ ಸಹಕಾರದಿಂದ ಶಾಲೆಯ ಅಭಿವೃದ್ಧಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ಜನ್ಮ ಕೊಟ್ಟ ತಂದೆ-ತಾಯಿಯರು, ಕುಟುಂಬದಲ್ಲಿರುವ ಅಕ್ಕತಂಗಿಯರು, ಅಣ್ಣ-ತಮ್ಮಂದಿರಲ್ಲಿ ಸಹೋದರ ಸಹೋದರಿ ಮನೋಭಾವ ಕ್ಷುಲ್ಲಕ ಕಾರಣಕ್ಕೆ ನಶಿಸಿ ಹೋಗುತ್ತಿವೆ. ಹಿಂದೆ ಕುಟುಂಬದಲ್ಲಿ 20 ಜನ ಒಟ್ಟೊಟ್ಟಿಗೆ ಕುಳಿತು ಊಟ ಮಾಡುತ್ತಿದ್ದ ದಿನಗಳು ಈಗ ಕಾಣಲಾಗುವುದಿಲ್ಲ. ರಸ್ತೆ, ವಿದ್ಯುತ್‌ನಂತಹ ಸೌಲಭ್ಯಗಳು ಹಳ್ಳಿಗಳಲ್ಲಿ ಇಲ್ಲದಿದ್ದರೂ ಕುಟುಂಬದಲ್ಲಿ ಅನ್ಯೋನ್ಯತೆ, ನೆಮ್ಮದಿ ಇತ್ತು. ಈಗ ಅವೆಲ್ಲವೂ ಮರೆಯಾಗಿವೆ ಎಂದು ವಿಷಾದಿಸಿದರು.

ವಿದ್ಯಾರ್ಥಿಗಳು ಕಡಿಮೆ ಮಾರ್ಕ್ಸ್ ಬಂದರೆ ದೃತಿಗೆಡಬೇಡಿ. ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನಮ್ಮಲ್ಲಿ ಹಲವಾರು ಪ್ರತಿಭಾ ಶಕ್ತಿಗಳಿವೆ. ಅವುಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಮಾರ್ಕ್ಸ್ ಕಡಿಮೆ ಬಂದಿರುವವರೇ ದೇಶಕ್ಕೆ ದೊಡ್ಡ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ತಂದೆ-ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿ ಅವರಿಗೆ ಗೌರವ ಬರುವ ರೀತಿ ನಡೆದುಕೊಳ್ಳಿ ಎಂದರು.

ಭಾರತ ವಿಶ್ವದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂದುಕೊಂಡಿದ್ದೇವೆ. ಆದರೆ ನಿಜವಾದ ಭಾರತವನ್ನು ಹಳ್ಳಿಗಳಲ್ಲಿ ಬಂದು ನೋಡಿದಾಗ ತಿಳಿಯುತ್ತದೆ ಎಂದರು.

ಚುನಾವಣೆಗೆ ಇನ್ನು ಎರಡೇ ವರ್ಷ ಬಾಕಿ ಇದೆ. ಜನಗಳ ಮೇಲೆ ನನಗೆ ನಂಬಿಕೆ ಇದೆ. ರಾಜ್ಯದಲ್ಲಿ ಆರೋಗ್ಯ, ಶಿಕ್ಷಣ, ರೈತರ ಬದುಕು ಎಷ್ಟು ಕಷ್ಟದಲ್ಲಿದೆ ಎನ್ನುವುದು ನನಗೆ ಗೊತ್ತು. ನಾನು ಬದುಕಿರುವವರೆಗೂ ರಾಜಕಾರಣದಲ್ಲಿ ನಿಮ್ಮ ಕಷ್ಟ ಸುಖದಲ್ಲಿರುತ್ತೇನೆ. ನೀವುಗಳು ರಾಜಕಾರಣವನ್ನು ಚುನಾವಣೆ ಸಮಯದಲ್ಲಿ ಮಾಡಿ. ಬೇರೆ ಸಮಯದಲ್ಲಿ ಅಣ್ಣ-ತಮ್ಮಂದಿರ ತರ ಒಟ್ಟಾಗಿ ಇರಿ. ಪಕ್ಷಬೇಧ ಮರೆತು ಅಭಿವೃದ್ಧಿಗೆ ಕೈಜೋಡಿಸಿ ಎಂದರು.

ಈ ವೇಳೆ ಜೆಡಿಎಸ್ ಮುಖಂಡರಾದ ಕೆ.ಎಸ್.ವಿಜಯಾನಂದ, ಬಿ ಆರ್ ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ ರಮೇಶ್, ಶಾಸಕ ಎಚ್.ಟಿ.ಮಂಜು, ಮೇಘಾ ಟ್ರಾವೆಲ್ಸ್ ತಿಮ್ಮೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ತಿಮ್ಮೇಗೌಡ, ಅಮರಾವತಿ ಚಂದ್ರಶೇಖರ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲೀಗೆರೆ ಬಾಲು, ಕೀಲಾರ ಗ್ರಾಮದ ಕೆ.ಆರ್.ರಮೇಶ್ ಸೇರಿದಂತೆ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿ ಮಗುವಿಗೂ ಪಲ್ಸ್ ಪೋಲಿಯೋ ಹಾಕಲು ಕ್ರಮ ವಹಿಸಿ
ತಮಿಳುನಾಡಿನ ಯುನೈಟೆಡ್ ಸ್ಟ್ರೈಕರ್ಸ್ ತಂಡ ಪ್ರಥಮ