ಧಾರವಾಡ: ಸಂಬಳ ಹೆಚ್ಚಳ, ಬಾಕಿ ವೇತನ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮ ನೌಕರರು ಮಂಗಳವಾರ ನೀಡಿದ್ದ ಬಂದ್ ಕರೆಗೆ ಧಾರವಾಡ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆದರೆ, ಧಾರವಾಡ ಹಾಗೂ ಜಿಲ್ಲೆಯ ಇತರೆ ಊರುಗಳಲ್ಲಿ ಪರಿಸ್ಥಿತಿ ಬೇರೆಯೇ ಇತ್ತು. ಬಸ್ ಬಂದ್ ಮಾಡೋಣವೇ? ಬೇಡವೇ? ಎಂಬ ಗೊಂದಲದಲ್ಲಿಯೇ ನಿಲ್ದಾಣಕ್ಕೆ ಚಾಲಕರು ಹಾಗೂ ನಿರ್ವಾಹಕರು ಬಂದರೂ, ಎಂದಿನಂತೆ ಪ್ರಯಾಣಿಕರಿಗೆ ಸೇವೆ ನೀಡಿದರು. ಸಿಬಿಟಿಯಲ್ಲಿ ಬೆಳಗ್ಗೆ 8ರ ವರೆಗೆ ಬಂದ್ ಮಾಡಬೇಕೋ ಬೇಡವೇ ಎಂಬ ಗೊಂದಲ ಇತ್ತಾದರೂ ನಂತರ ಎಂದಿನಂತೆ ತಮ್ಮ ತಮ್ಮ ಮಾರ್ಗಗಳಿಗೆ ಬಸ್ಸುಗಳು ಸಂಚಾರ ನಡೆಸಿದವು.
ಬೆಳಗಿನ ಶಾಲಾ-ಕಾಲೇಜು ಹಾಗೂ ಇತರೆ ಕಾರ್ಯಗಳಿಗೆ ಹೊರ ಬಂದ ಸಾರ್ವಜನಿಕರಿಗೆ ತುಸು ಹೊತ್ತು ಮಾತ್ರ ಬಸ್‌ಗಳ ಅಲಭ್ಯತೆ ಕಾಡಿತು. ಮುಖ್ಯ ಬಸ್ ನಿಲ್ದಾಣ ಸೇರಿದಂತೆ ಜ್ಯುಬಿಲಿ ವೃತ್ತ, ಹಳೇ ಎಸ್ಪಿ ಕಚೇರಿ, ಕೆಸಿಡಿ ಅಂತಹ ಪ್ರಮುಖ ಸ್ಥಳಗಳಲ್ಲಿ ಸಾಲುಗಟ್ಟಿ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯಗಳು ಕಂಡು ಬಂದವು. ನಂತರದಲ್ಲಿ ಕೆಲವೇ ಹೊತ್ತಿನಲ್ಲಿ ಬಹುತೇಕ ಸಿಬಿಟಿ, ಗ್ರಾಮೀಣ ಬಸ್ಸುಗಳು ಕಾರ್ಯಾಚರಣೆ ನಡೆಸಿದವು.ಓಡಲಿಲ್ಲ ಚಿಗರಿ ಬಸ್ಸುಗಳು: ಸಾರಿಗೆ ಸಂಸ್ಥೆಗಳ ಪೈಕಿ ಒಂದಾಗಿರುವ ಬಿಆರ್‌ಟಿಎಸ್ ನೌಕರರು ಸೋಮವಾರ ಬಂದ್‌ಗೆ ಬಹುತೇಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ- ಧಾರವಾಡ ಮಧ್ಯೆ ಓಡಾಡುತ್ತಿದ್ದ ಜಿಗರಿ ಬಸ್ಸುಗಳು ಮಂಗಳವಾರ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಓಡಲಿಲ್ಲ. ಅವಳಿ ನಗರ ಸಂಪರ್ಕ ಕಲ್ಪಿಸಲು ಪ್ರಮುಖ ಸಾರಿಗೆ ಇದಾಗಿದ್ದು, ನಿತ್ಯ ಅವಳಿ ನಗರ ಮಧ್ಯೆ 75 ಚಿಗರಿ ಬಸ್ಸುಗಳು ಕಾರ್ಯಾಚರಣೆ ನಡೆಸುತ್ತವೆ. ಬಂದ್ ಹಿನ್ನೆಲೆಯಲ್ಲಿ ಎಲ್ಲ ಚಿಗರಿಗಳು ಡಿಪೋದಲ್ಲಿ ನಿಂತಿದ್ದವು. ಹೀಗಾಗಿ ನಿತ್ಯ ಚಿಗರಿ ಬಸ್ಸುಗಳಿಗೆ ಹೋಗುವವರು ತೀವ್ರ ಪರದಾಡಬೇಕಾಯಿತು.
ಮುಖ್ಯಮಂತ್ರಿಗಳ ಮನವಿ ಹಾಗೂ ನ್ಯಾಯಾಲಯ ನೀಡಿದ ತಡೆಯಾಜ್ಞೆ ಸಹ ಧಿಕ್ಕರಿಸಿ ಕೆಲವು ನೌಕರರು ಮಂಗಳವಾರ ನೌಕರಿಗೆ ಬಂದಿಲ್ಲ. ನೌಕರರೆಲ್ಲರೂ ಕೆಲಸಕ್ಕೆ ಹಾಜರಾಗಲೂ ಸೂಚನೆ ನೀಡಿತ್ತು. ಈಗಾಗಲೇ ಮುಂಚೆಯೇ ರಜೆ ಕೇಳಿದ್ದ ನೌಕರರ ರಜೆಗಳನ್ನು ಸಹ ರದ್ದುಪಡಿಸಿತ್ತು. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸಕ್ಕೆ ಹಾಜರು ಆಗದಿದ್ದರೆ ಕ್ರಮ ಕೈಗೊಳ್ಳುತ್ತೇವೆ ಎಂಬ ಸೂಚನೆ ಸಹ ನೀಡಿತ್ತು. ಅಷ್ಟಾಗಿಯೂ ಸಾಕಷ್ಟು ನೌಕರರು ನೌಕರಿಗೆ ಹಾಜರಾಗಿಲ್ಲ. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೆಶಕಿ ಡಾ. ಪ್ರಿಯಾಂಕಾ ಎಂ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
----
ಹುಬ್ಬಳ್ಳಿ ಗ್ರಾಮೀಣ 258 190 68
ಧಾರವಾಡ 54 54 00