- ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಸಿಬ್ಬಂದಿಗೆ ದಿಗ್ಬಂಧನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರದ ಸ್ವಾಭಿಮಾನ ಸಮಾವೇಶಕ್ಕೆಂದು ಕೆಎಸ್‌ಆರ್‌ಟಿಸಿ ಬಸ್ ಕಳುಹಿಸಿದ ಹಿನ್ನೆಲೆಯಲ್ಲಿ ಬಸ್‌ಗಳು ಇಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗಿದ್ದರಿಂದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಗೆ ಗುರುವಾರ ಸಂಜೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಬೀಗ ಹಾಕಿದ ಹಿನ್ನೆಲೆಯಲ್ಲಿ ಕಚೇರಿ ಒಳಗಿದ್ದ ಸಿಬ್ಬಂದಿ ಹೊರಬರಲು ಸಾಧ್ಯ ವಾಗದೆ ಪರದಾಡುವಂತಾಗಿತ್ತು.ರಾತ್ರಿಯಾದರೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬೀಗ ತೆಗೆಯದೆ ಪಟ್ಟು ಹಿಡಿದು ಕುಳಿತಿದ್ದರು.ಎಲ್ಲಾ ಬಸ್ಸುಗಳನ್ನು ಸಮಾವೇಶಕ್ಕೆಂದು ಕಳುಹಿಸಿದರೆ ಸಾರ್ವಜನಿಕರು ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಮಾಡುವುದು ಹೇಗೆ. ತುರ್ತು ಸಂದರ್ಭವಿದ್ದರೂ ಬಸ್ಸುಗಳು ಸಿಗದ ಸ್ಥಿತಿ ನಿರ್ಮಾಣ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಬಸ್ ನಿಲ್ದಾಣ ಕ್ರೀಡಾಂಗಣವಾಗಿ ನಿರ್ಮಾಣವಾಗಿದೆ. ಒಂದೇ ಒಂದು ಬಸ್ಸು ಸಂಚಾರ ನಡೆಸಿಲ್ಲ. ಸರ್ಕಾರಿ ಕಾರ್ಯಕ್ರಮಕ್ಕೆ ಬಸ್‌ಗಳು ಹೋಗಿವೆ ಎಂದು ಅಧಿಕಾರಿಗಳು ಹೇಳುವ ಮೂಲಕ ಕಾಂಗ್ರೆಸ್ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರಿ ಅಧಿಕಾರಿಗಳ ಕಾರುಗಳಲ್ಲಿ ಪ್ರಯಾಣಿಕರನ್ನು ಅವರ ಊರಿಗೆ ಕಳುಹಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಆಲ್ದೂರು ಶಶಿ, ದಿಲೀಪ್ ಶೆಟ್ಟಿ, ಸಚಿನ್‌ಗೌಡ, ಅಂಕಿತಾ ಹಾಗೂ ಎಬಿವಿಪಿ ಕಾರ್ಯಕರ್ತರು ಇದ್ದರು.5 ಕೆಸಿಕೆಎಂ 5ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿನ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಬೀಗಹಾಕಿ ಬಸ್ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದರು. ಸಂತೋಷ್ ಕೋಟ್ಯಾನ್, ಆಲ್ದೂರು ಶಶಿ, ದಿಲೀಪ್ ಶೆಟ್ಟಿ, ಸಚಿನ್‌ಗೌಡ, ಅಂಕಿತಾ ಇದ್ದರು.