ಕನ್ನಡಪ್ರಭವಾರ್ತೆ ಮಧುಗಿರಿ
ಪ್ರತಿನಿತ್ಯ ಬಿಸಿಲು, ಮಳೆ , ಚಳಿ, ಗಾಳಿ ಎನ್ನದೇ ಬಸ್‌ಗಳಿಗಾಗಿ ಕಾದು ನಿಲ್ಲುವ ಶಾಲಾ -ಕಾಲೇಜು ಮಕ್ಕಳು ಹಾಗೂ ಪ್ರಯಾಣಿಕರಿಗೆ ಅನುಕೂಲಕರ ತಂಗುದಾಣ, ಸಾರ್ವಜನಿಕ ಶೌಚಾಲಯಗಳ ವ್ಯವಸ್ಥೆಯಿಲ್ಲದೆ ಪರದಾಡುವಂತಾಗಿದೆ.
ಈ ನಿಲ್ದಾಣ ಪ್ರಸ್ತುತ ಗೌರಿಬಿದನೂರು, ಹಿಂದೂಪುರ,ಪಾವಗಡ ಮತ್ತು ಅಕ್ಕಪಕ್ಕದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಬಸ್ ನಿಲ್ದಾಣವಾಗಿದ್ದು, ವಿವಿಧ ಹೋಬಳಿ ಕೇಂದ್ರಗಳಿಗೆ ಬಸ್‌ಗಳು ಸಂಚರಿಸುತ್ತವೆ. ನಗರ ಅತಿ ವೇಗವಾಗಿ ಬೆಳೆಯುತ್ತಿದ್ದು, ಶಾಲಾ-ಕಾಲೇಜು ಮಕ್ಕಳು ,ವ್ಯಾಪಾರಸ್ಥರು,ಉದ್ಯಮಿಗಳು ಇದೇ ನಿಲ್ದಾಣದಿಂದ ಪ್ರಯಾಣಿಸುವರು. ಅಲ್ಲದೆ ಮುಖ್ಯ ಬಸ್ ನಿಲ್ದಾಣಗಳಿಂದ ಹೊರಟ ಬಸ್‌ಗಳು ರಾಯರ ಗುಡಿ ಸರ್ಕಲ್, ಹೈಸ್ಕೂಲ್ ಸರ್ಕಲ್ ,ಪಾವಗಡ ವೃತ್ತ,ಮತ್ತು ಶಿರಾ ಗೇಟ್ ನಿಲ್ದಾಣಗಣಗಳ ಮೂಲಕ ಬಸ್‌ಗಳು ಹಾದು ಹೋಗುತ್ತವೆ. ಈ ನಿಲ್ದಾಣಗಳಲ್ಲಿಯೂ ಸಹ ಪ್ರಯಾಣಿಕರಿಗೆ ಸೂಕ್ತ ಮೂಲ ಸೌಕರ್ಯಗಳಿಲ್ಲದೆ ಪ್ರಯಾಣಿಕರ ಪಾಡು ಹೇಳತೀರದಾಗಿದೆ.ಈ ಹಿಂದೆ ಶ್ರೀರಾಘವೇಂದ್ರ ಸರ್ಕಲ್‌ನಲ್ಲಿ ಪ್ರಯಾಣಿಕರಿಗೆ ಸೂಕ್ತ ತಂಗುದಾಣವಿತ್ತು. ಆದರೆ ಈ ತಂಗುದಾಣ ಸುಮಾರು ವರ್ಷಗಳ ಹಿಂದೆ ಭಾರಿ ಪ್ರಮಾಣದ ಮಳೆ ಸುರಿದ ಪರಿಣಾಮ ತಂಗುದಾಣ ಬಿದ್ದು ಹೋಗಿತ್ತು. ಅಂದಿನಿಂದ ಇಂದಿನವರೆಗೆ ಈ ತಂಗುದಾಣವನ್ನು ಸಮರ್ಥವಾಗಿ ನಿರ್ಮಿಸಿದೇ ಪುರಸಭೆ ಅಧಿಕಾರಿಗಳು ಕೈ ಚಲ್ಲಿದ್ದಾರೆ. ಇಲ್ಲಿ ಆಟೋಗಳು ಸಹ ನಿಲುತ್ತವೆ. ಶಾಲಾ -ಕಾಲೇಜುಗಳನ್ನು ಬಿಡುವ ವೇಳೆಯಲ್ಲಿ ಹೆಚ್ಚು ಮಕ್ಕಳ ಮತ್ತು ಪ್ರಯಾಣಿಕರ ಜನಸಂದಣಿ ಬಸ್ ಹತ್ತಲು ತಾ ಮುಂದು ನಾ ಮುಂದು ಎಂಬಂತೆ ಪೈಪೋಟಿ ನೆಡೆದು ಕಂಗಲಾಗುವರು. ಆದ್ದರಿಂದ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಇಚ್ಚಾ ಶಕ್ತಿ ಪ್ರದರ್ಶಿಸಿ ಬಸ್‌ಗಳು ಪಟ್ಟಣದಲ್ಲಿ ನಿಲ್ಲುವ ಎಲ್ಲ ಸ್ಟಾಪ್‌ಗಳಲ್ಲಿ ಸೂಕ್ತ ತಂಗುದಾಣ ನಿರ್ಮಿಸಿ ಪ್ರಯಾಣಿರಿಗೆ ಮೂಲಸೌಲಭ್ಯ ಒದಗಿಸಿ ಅನುಕೂಲ ಮಾಡಿ ಕೊಡಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.