ಡಾ.ಸಿ.ಎಂ.ಜೋಶಿ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡಕಾಂಗ್ರೆಸ್ ಸರ್ಕಾರದ ಪ್ರಮುಖ ಯೋಜನೆಯಾದ ಶಕ್ತಿ ಯೋಜನೆ ಆರಂಭಗೊಂಡು ವರ್ಷಗಳೇ ಗತಿಸಿವೆ. ಆದರೆ, ಪ್ರಯಾಣಿಕರ ಪ್ರಯಾಣದ ಪ್ರಯಾಸ ಮಾತ್ರ ಇನ್ನೂ ತಗ್ಗಿಲ್ಲ. ಬೇರೆ ಊರಿಗೆ ಹೋಗಬೇಕೆಂದರೆ ಬಸ್‌ಗಳೇ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಗುಳೇದಗುಡ್ಡಕ್ಕೆ ಹಳೆ ಬಸ್‌ಗಳನ್ನೇ ಓಡಿಸುತ್ತಿದ್ದಾರೆ. ಹೀಗಾಗಿ ಅವು ಪದೇಪದೇ ಕೆಟ್ಟು ನಿಂತು ಪ್ರಯಾಣಿಕರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
ಗುಳೇದಗುಡ್ಡದಿಂದ ಬೇರೆ ಊರುಗಳಿಗೆ ಹೋಗುವ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಸಮರ್ಪಕ ಬಸ್‌ಗಳು ಇಲ್ಲದೇ ಇರುವ ಕಾರಣಕ್ಕೆ ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಹೈರಾಣಾಗುತ್ತಿದ್ದಾರೆ. ಒಂದು ವೇಳೆ ಬಸ್ ಸಿಕ್ಕರೂ ಅದು ಯಾವಾಗ ಕೆಟ್ಟು ನಿಲ್ಲುತ್ತದೆಯೋ ಎಂಬ ಆತಂಕದಲ್ಲಿಯೇ ಪ್ರಯಾಣಿಕರಲ್ಲಿ ಮನೆ ಮಾಡಿದೆ.ಇನ್ನೂ ಅನೇಕ ಬಸ್‌ಗಳಲ್ಲಿ ಒಂದು ಭಾಗ ಇದ್ದರೇ ಮತ್ತೊಂದು ಭಾಗ ಇರುವುದಿಲ್ಲ. ಸ್ಟೇರಿಂಗ್, ಕ್ಲಚ್‌ಗಳು ಯಾವಾಗ ಕಿತ್ತು ಬರುತ್ತವೋ ಎಂಬಂತೆ ಗೋಚರಿಸುತ್ತವೆ. ಇಂತಹ ವಿಚಾರಗಳನ್ನು ಬಸ್ ಚಾಲಕರು ಯಾರ ಮುಂದೆಯೂ ಹೇಳಲಾರದ ಪರಿಸ್ಥಿತಿಯಲ್ಲಿದ್ದಾರೆ. ಒಂದು ವೇಳೆ ಹೇಳಿದರೇ ವರ್ಗಾವಣೆ, ದಂಡ ಅಥವಾ ಮತ್ತಿತರ ಶಿಕ್ಷೆಗೆ ಒಳಗಾಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಇಂತಹ ಬಸ್‌ನಲ್ಲಿಯೇ ಸಿಬ್ಬಂದಿ, ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ದುಸ್ಥಿತಿ ಇದೆ. ಇಂತಹ ಬಸ್‌ಗಳಲ್ಲಿ ಸಂಚರಿಸುವಾಗ ಒಂದು ವೇಳೆ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ. ಆದ್ದರಿಂದ ಇಂತಹ ಬಸ್‌ಗಳನ್ನು ಕೈಬಿಟ್ಟು ಪ್ರಯಾಣಿಕರ ಸುರಕ್ಷತೆ ಕಡೆಗೆ ಸಾರಿಗೆ ಇಲಾಖೆ ಗಮನಹರಿಸಬೇಕು ಎಂಬುವುದು ಪ್ರಯಾಣಿಕರ ಆಗ್ರಹ.ಹೆಚ್ಚು ಓಡಿದರೂ ಗುಜರಿಗಿಲ್ಲ:
8 ಲಕ್ಷ ಕಿಮೀ ಓಡಿದ ಬಸ್‌ಗಳನ್ನು ಗುಜರಿಗೆ ಹಾಕುವ ನಿಯಮವಿದ್ದರೂ ಗುಳೇದಗುಡ್ಡದ ಸುಮಾರು 4 ಬಸ್‌ಗಳು ಅಂದಾಜು 16 ಲಕ್ಷ ಕಿ.ಮೀ ಓಡಿದ್ದರೂ ಅವುಗಳನ್ನು ಇನ್ನೂ ಬಾಗಲಕೋಟೆಗೆ ಓಡಿಸುತ್ತಿದ್ದಾರೆ. ಇವುಗಳಿಂದ ಒಂದಿಲ್ಲ ಒಂದು ದಿನ ಅನಾಹುತ ತಪ್ಪಿದ್ದಲ್ಲ ಎಂದು ಚಾಲಕರೊಬ್ಬರು ಗಂಭೀರವಾಗಿ ಹೇಳಿಕೊಂಡಿದ್ದಾರೆ. ಮೇಲಿಂದ ಮಾರ್ಗ ಮಧ್ಯದಲ್ಲಿ ಬಂದ್ ಆಗಿ ನಿಲ್ಲುವ ಗುಳೇದಗುಡ್ಡ ಡಿಪೋ ಬಸ್ ಹತ್ತಲು ಈ ಭಾಗದ ಜನ ಹಿಂದೇಟು ಹಾಕುವ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಗಮನಹರಿಸಬೇಕು. ಹಳೆಯ ಬಸ್‌ಗಳನ್ನು ತೆಗೆದು ಹೊಸ ಬಸ್ ಬಿಡಿಸಲು ಸಾರ್ವಜನಿಕರು ಆಗ್ರಹ.ತಪ್ಪಿದ ಅನಾಹುತ; 70 ಪ್ರಯಾಣಿಕರು ಜನ ಸೇಫ್:ಇದಕ್ಕೆ ನಿದರ್ಶನ ಎಂಬಂತೆ ಸೋಮವಾರ ಬಸ್ ಅನಾಹುತವೊಂದು ತಪ್ಪಿದ್ದರಿಂದ 70ಕ್ಕೂ ಹೆಚ್ಚು ಜನ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ. ಗುಳೇದಗುಡ್ಡದಿಂದ ಶಿರೂರು ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನ ಗಾಲಿಯ ನಟ್ ಬೋಲ್ಟ್‌ಗಳು ಬಿಚ್ಚಿ ಬಿದ್ದು ದೊಡ್ಡ ಅನಾಹುತ ತಪ್ಪಿದೆ. ಸೋಮವಾರ ಬೆಳಗ್ಗೆ 9 ಗಂಟೆಗೆ ಗುಳೇದಗುಡ್ಡದಿಂದ ಬಾಗಲಕೋಟೆಗೆ ಹೊರಟ ಬಸ್ ಬೂದಿನಗಡ ಗುಡ್ಡದ ಇಳಿಜಾರಿನಲ್ಲಿ ಈ ಘಟನೆ ನಡೆದಿದೆ. ಬಸ್ಸಿನಲ್ಲಿ ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರು ಕುಳಿತಿದ್ದರು. ಬಸ್ ಗಾಲಿಯ ಎಲ್ಲ ನಟ್‌ಗಳು ಬಿಚ್ಚಿದ್ದವು. ಕೇವಲ ಮೂರು ನಟ್‌ಗಳು ಮಾತ್ರ ಇದ್ದವು. ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಇದೇ ಬಸ್ ಭಾನುವಾರ ಬ್ರೇಕ್ ಫೇಲ್ ಆಗಿ ಮಾರ್ಗ ಮಧ್ಯದಲ್ಲಿ ನಿಂತ ಘಟನೆ ಕೂಡ ಸಂಭವಿಸಿತ್ತು. ಸೋಮವಾರ ಅದೇ ಬಸ್‌ನ ಗಾಲಿಯ ನಟ್ಟುಗಳು ಸಂಪೂರ್ಣ ಕಳಚಿ ಬಿದ್ದ ಘಟನೆ ನಡೆದಿದೆ.
ಎಲ್ಲ ಡಿಪೋಗಳಲ್ಲಿಯೂ ಹಳೇ ಬಸ್‌ಗಳಿವೆ. ನಮ್ಮಲ್ಲಿಯೂ ಇವೆ. ನಾಲ್ಕು ಹೊಸ ಬಸ್‌ಗಳು ಬಂದಿವೆ. ಇನ್ನೂ ಹೊಸ ಬಸ್‌ಗಳು ಬರಬೇಕಿವೆ. ಅಲ್ಲಿಯವರೆಗೂ ಈ ಬಸ್‌ಗಳನ್ನು ಓಡಿಸಲಾಗುವುದು.-ವಿದ್ಯಾ ನಾಯಕ, ಡಿಪೋ ಮ್ಯಾನೇಜರ್ ಗುಳೇದಗುಡ್ಡ.
ಈ ಬಗ್ಗೆ ಡಿಪೋ ಮ್ಯಾನೇಜರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಸಾಕಷ್ಟು ಹಳೆಯದಾದ, ಗುಜರಿ ಬಸ್‌ಗಳನ್ನು ಬಿಟ್ಟು ಹೊಸ ಬಸ್‌ಗಳನ್ನು ಓಡಿಸಬೇಕು. ಪದೇ ಪದೇ ಬಸ್‌ಗಳು ಕೆಟ್ಟು ನಿಲ್ಲುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.-ರಾಮಕುಮಾರ ಹುಲಗುಂದ,
ಪ್ರಯಾಣಿಕ ಗುಳೇದಗುಡ್ಡ.