ಕನ್ನಡಪ್ರಭವಾರ್ತೆ ಚಳ್ಳಕೆರೆ
ಪ್ರತಿವರ್ಷ ಮಾರಮ್ಮಜಾತ್ರೆಯಲ್ಲಿ ಕುರಿ ಮೇಕೆಗಳ ದರ ₹8ರಿಂದ10 ಸಾವಿರ ಇದ್ದರೆ, ಈ ಬಾರಿ ಕನಿಷ್ಠ ದರ ₹20 ಆದರೆ ಗರಿಷ್ಠ ದರ ₹60 -70 ಸಾವಿರದವರೆಗೂ ಏರಿದೆ. ಖರೀದಿಸಲು ಬಂದವರು ದರವನ್ನು ಕೇಳಿ ಗಾಬರಿಯಾದರೂ, ಹಂಗೋ ಹಿಂಗೋ ಚೌಕಾಸಿಮಾಡಿ ₹30-40 ಸಾವಿರ ಹಣ ನೀಡಿ ಕುರಿ, ಮೇಕೆಗಳನ್ನು ಖರೀದಿಸುತ್ತಿದ್ದರು. ಕುರಿ, ಮೇಕೆಗಳ ಖರೀದಿ ವ್ಯಾಪಾರ ಹೆಚ್ಚಾದಂತೆ ಕೆಲವು ವಸ್ತುಗಳ ಬೆಲೆಯೂ ಸಹ ಗಗನಕ್ಕೇರಿದೆ.
ವಿಶೇಷವೆಂದರೆ ಈ ಬಾರಿಯ ಮಾರಮ್ಮನ ಜಾತ್ರೆಗೆ ವರುಣನು ಸಹ ಸಾಥ್ ನೀಡಿದ್ದು, ಕಳೆದ ಎಂಟ್ಹತ್ತು ದಿನಗಳಿಂದ ಮಳೆ ಇಲ್ಲದೆ ಜಮೀನಿನಲ್ಲಿದ್ದ ಶೇಂಗಾ, ಇನ್ನಿತರೆ ಬೆಳೆಗಳು ಒಣಗುತ್ತಿದ್ದವು. ಸೋಮವಾರ ಬಿದ್ದ ಉತ್ತಮ ಮಳೆಗೆ ಬೆಳೆಗಳು ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸಿವೆ. ಕುರಿ, ಮೇಕೆಗಳ ಖರೀದಿ ಭರಾಟೆಯಲ್ಲಿ ದಲ್ಲಾಳಿಗಳ ಜೇಬು ಸಹ ತುಂಬುತ್ತಿದೆ. ಕುರಿ, ಮೇಕೆಗಳನ್ನು ಹಬ್ಬಕ್ಕಾಗಿಯೇ ಸಾಕಿದ ಮಾಲೀಕರಿಗೆ ಮಾರಮ್ಮ ಹಬ್ಬದಲ್ಲಿ ಒಳ್ಳೆ ವ್ಯಾಪಾರ ಸಿಕ್ಕಿದೆ. ಮಾರಮ್ಮ ಹಬ್ಬದ ಹೆಸರಿನಲ್ಲಿ ಸಾವಿರಾರು ಹಣ ಖರ್ಚಾಗುತ್ತಿದ್ದರೂ ಇಲ್ಲಿನ ಜನಕ್ಕೆ ಎಲ್ಲಂದಕ್ಕಿಂತ ಸಂತೋಷವೇ ಪ್ರಧಾನವಾಗಿದೆ ಎನ್ನಬಹುದು.