ಶ್ರೀಕಾಂತ್ ಹೆಮ್ಮಾಡಿ
ಕುಂದಾಪುರ : ಉಡುಪಿ ಜಿಲ್ಲೆಯಲ್ಲಿ ಸುಸಜ್ಜಿತ ಖಾಸಗಿ ಆಂಗ್ಲ ಮಾಧ್ಯಮಗಳ ಜೊತೆ ಸ್ಪರ್ಧಿಸಲಾಗದೇ ಸೋಲುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹೋಟೆಲ್ ಉದ್ಯಮಿಯೊಬ್ಬರು ವಿನೂತನವಾದ, ಅಪರೂಪದ ಪರಿಕಲ್ಪನೆ ರೂಪಿಸಿದ್ದಾರೆ. ಸಿಬ್ಬಂದಿ ಕೊರತೆ, ಅನುದಾನದ ಅಲಭ್ಯತೆ ಇತ್ಯಾದಿ ಕಾರಣಗಳಿಂದ ಬಳಲುತ್ತಿರುವ ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ನಿರಂತರ ಸ್ವಚ್ಛ ಮಾಡಿಕೊಡುವ ಸೇವೆ ಕುಂದಾಪುರದಲ್ಲಿ ಗುರುವಾರ (ಡಿ.11) ಆರಂಭಗೊಳ್ಳಲಿದೆ.
ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಗೋಪಾಡಿ ಶ್ರೀನಿವಾಸ ಅವರು ತಮ್ಮ ಗೋಪಾಡಿ ಶ್ರೀನಿವಾಸ ರುಕ್ಮಿಣಿ ಪ್ರತಿಷ್ಠಾನದ ಮೂಲಕ ಪ್ರಾಯೋಗಿಕವಾಗಿ ತಮ್ಮ ಹುಟ್ಟೂರು ಕುಂದಾಪುರ ತಾಲೂಕು ಕೋಟೇಶ್ವರ ಶೈಕ್ಷಣಿಕ ವಲಯ ವ್ಯಾಪ್ತಿಯ 6 ಗ್ರಾಮಗಳ 24 ಸರ್ಕಾರಿ ಶಾಲೆಗಳ ಶೌಚಾಲಯಗಳನ್ನು ನಿರಂತರವಾಗಿ ಸ್ವಚ್ಛವಾಗಿಡುವ ಶಾಶ್ವತ ಯೋಜನೆ ರೂಪಿಸಿದ್ದಾರೆ. ಅವರ ಕನಸಿನ ಈ ಯೋಜನೆ ಗುರುವಾರ ಕಾರ್ಯರೂಪಕ್ಕೆ ಬರುತ್ತಿದೆ.
ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಗಂಭೀರ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಶೌಚಾಲಯಗಳ ನಿರ್ಮಾಣ - ನಿರ್ವಹಣೆಗೆ ಸರ್ಕಾರದ ಅನುದಾನ ಸಿಗುತ್ತಿಲ್ಲ. ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳೇ ಸ್ಥಳೀಯ ಸಂಪನ್ಮೂಲ ಬಳಸಿ ಶೌಚಾಲಯ ಸ್ವಚ್ಛತೆ ಕೈಗೊಳ್ಳಬೇಕು. ಎನ್‌ಜಿಒಗಳು, ಸ್ಥಳೀಯ ಉದ್ಯಮಗಳ ಸಿಎಸ್‌ಆರ್ ನಿಧಿಗಳಿಂದ ಈ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯವೇನೋ ನಿರ್ಮಾಣವಾಗುತ್ತದೆ. ಆದರೆ, ಈ ಶೌಚಾಲಯಗಳ ದೈನಂದಿನ/ನಿರಂತರ ನಿರ್ವಹಣೆಗೆ ಸರ್ಕಾರದ ಅನುದಾನ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ.
ಈ ಸಮಸ್ಯೆಗಳನ್ನು ಮನಗಂಡ ಗೋಪಾಡಿ ಶ್ರೀನಿವಾಸ ಅವರು ರಾಜ್ಯಕ್ಕೆ ಮಾದರಿಯಾಗುವಂತಹ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದಾರೆ. ಆರಂಭದಲ್ಲಿ 24 ಶಾಲೆಗಳು, ಮುಂದೆ ಇನ್ನಷ್ಟು ಶಾಲೆಗಳಿಗೆ ಈ ಯೋಜನೆ ರೂಪಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸುವ ಆಶಯ ಅವರದ್ದು.
ವಾರದಲ್ಲಿ ಎರಡು ದಿನ ಈ 24 ಸರ್ಕಾರಿ ಶಾಲೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ತಂಡ ಸಿದ್ಧಪಡಿಸಿ, ಮಾರ್ಗದರ್ಶನ ನೀಡಲಾಗಿದೆ. ಒಂದೆರಡು ಬಾರಿಯಲ್ಲ, ಒಂದೆರಡು ವರ್ಷಕ್ಕೆ ಈ ಯೋಜನೆ ನಿಲ್ಲುವುದಿಲ್ಲ. ಅದು ನಿರಂತರವಾಗಿ ಮುಂದುವರಿಯಲು ಬೇಕಾದ ಆರ್ಥಿಕ ವ್ಯವಸ್ಥೆ, ಸಂಪನ್ಮೂಲವನ್ನು ಪ್ರತಿಷ್ಠಾನ ಕ್ರೋಢೀಕರಿಸಿದೆ.
ಅಗತ್ಯ ಸಿಬ್ಬಂದಿ ನೇಮಿಸುವುದರ ಜೊತೆಗೆ ನೂತನ ವಾಹನವನ್ನು ಪ್ರತಿಷ್ಠಾನ ಕೊಡುಗೆಯಾಗಿ ನೀಡಿದೆ. ಈಗಾಗಲೇ ಈ ಎಲ್ಲಾ ಶಾಲೆಗಳಲ್ಲಿ ಅಧ್ಯಯನದ ರೂಪದಲ್ಲಿ ಸ್ಪಚ್ಚತೆ ನಡೆಸಿ, ಲೋಪದೋಷಗಳನ್ನು ಗುರುತಿಸಿ, ಅವುಗಳಿಗೆ ಪರಿಹಾರವನ್ನೂ ರೂಪಿಸಲಾಗಿದೆ. ಅದರಂತೆ ನಿಯೋಜಿಸಲಾಗಿರುವ ವಾಹನವು ಸಿಬ್ಬಂದಿ ಸಾಗಾಟದ ಜೊತೆಗೆ, ಜನರೇಟರ್, ಪಂಪು, ಪೈಪ್, ನೀರು, ರಾಸಾಯನಿಕ ಇತ್ಯಾದಿಗಳಿಂದ ಸುಸಜ್ಜಿತವಾಗಿದೆ.
ಇಂದು ಕಾರ್ಯರೂಪಕ್ಕೆ:
ಗುರುವಾರ ಸಂಜೆ 4 ಗಂಟೆಗೆ ಇಲ್ಲಿನ ಕೋಟೇಶ್ವರದ ಕೆಪಿಎಸ್ ಪ್ರಾಥಮಿಕ ಶಾಲಾ ವಿಭಾಗದ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಂಗಮಂದಿರದಲ್ಲಿ, ಭೀಮನಕಟ್ಟೆ ಭೀಮಸೇತು ಮುನಿವೃಂದ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದಂಗಳವರ ಉಪಸ್ಥಿತಿಯಲ್ಲಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎ.ಕಿರಣ ಕುಮಾರ್ ಕೊಡ್ಗಿ, ಅಧಿಕಾರಿಗಳು, ಪ್ರತಿಷ್ಠಾನದ ಸಂಸ್ಥಾಪಕ ಗೋಪಾಡಿ ಶ್ರೀನಿವಾಸ ರಾವ್ ಮತ್ತವರ ಪತ್ನಿ ರುಕ್ಮಿಣಿ ಭಾಗವಹಿಸಲಿದ್ದಾರೆ.
ಶಿಕ್ಷಣ ಕ್ಷೇತ್ರಕ್ಕೆ ನಿರಂತರ ಕೊಡುಗೆ:
ಗೋಪಾಡಿ ಶ್ರೀನಿವಾಸ ರುಕ್ಮಿಣಿ ಫೌಂಡೇಶನ್ ಈ ಹಿಂದೆಯೂ ಕೋಟೇಶ್ವರ ಸುತ್ತಮುತ್ತಲಿನಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿದಾಯಕವಾಗಿ ತೊಡಗಿಸಿಕೊಂಡಿದೆ. ಗೋಪಾಡಿ ಬಾಲಗೋಪಾಲ ಶಿಶುಮಂದಿರ, ಕೊರೋಡಿ ಶಾಲೆ ಹಾಗೂ ಬೀಜಾಡಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳಿಗೆ ಧನಸಹಾಯ, ಕುಂಭಾಶಿ ಸರಕಾರಿ ಶಾಲೆಗೆ ಹೊಸ ತರಗತಿ ಕೊಠಡಿ ನಿರ್ಮಾಣ, 15 ಲಕ್ಷ ರು. ವೆಚ್ಟದಲ್ಲಿ ಡಿಜಿಟಲ್ ಶಿಕ್ಷಣ ನೀಡಲು ಸ್ಮಾರ್ಟ್ ಕ್ಲಾಸ್ ರೂಂ ನಿರ್ಮಾಣ, 32 ಲಕ್ಷ ರು. ವೆಚ್ಚದಲ್ಲಿ ಕೋಟೇಶ್ವರ ಶಾಲೆಗೆ ಬಯಲು ರಂಗಮಂದಿರ ನಿರ್ಮಿಸಿ ಕೊಟ್ಟಿದೆ.
ಸ್ವಚ್ಛತೆ ಪಾಠಕ್ಕೆ ಉದ್ಯಮಿ ಮುಂದು
ಹೋಟೆಲ್ ಉದ್ಯಮಿಯಾಗಿರುವ ಗೋಪಾಡಿ ಶ್ರೀನಿವಾಸ ರಾಯರು ಬೆಂಗಳೂರಿನಲ್ಲಿ ಈಶಾನ್ಯ ಸಮೂಹ ಹೋಟೆಲ್‌ಗಳನ್ನು ಸ್ಥಾಪಿಸಿ ಕಳೆದ 50 ವರ್ಷಗಳಿಂದ ಶುಚಿ, ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಇದನ್ನೇ ಮಾನದಂಡವಾಗಿಟ್ಟುಕೊಂಡು ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆಗೆ ಮುಂದಾಗಿದ್ದಾರೆ.ಅನೇಕ ಸರ್ಕಾರಿ ಶಾಲೆಗಳ ಶೌಚಾಲಯ ಶುಚಿಯಾಗಿಲ್ಲ. ಸ್ವಚ್ಛತೆಗೆ ಸರ್ಕಾರ ವ್ಯವಸ್ಥೆ ಮಾಡಿಲ್ಲ, ಸಿಬ್ಬಂದಿ ಇಲ್ಲ, ಮಕ್ಕಳು ಶುಚಿಗೊಳಿಸುವಂತಿಲ್ಲ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಬಡ ಕುಟುಂಬದ ಮಕ್ಕಳಿಗೆ ಅನಾರೋಗ್ಯ ಉಂಟಾದರೆ ಚಿಕಿತ್ಸೆಗೂ ಕಷ್ಟ, ಶಾಲೆಯನ್ನೇ ಬಿಡುವ ಅಪಾಯವೂ ಇದೆ. ಆದ್ದರಿಂದ ಸರ್ಕಾರಿ ಶಾಲೆಗಳ ಶೌಚಾಲಯ ಶುಚಿಗೊಳಿಸುವ ಮೂಲಕ ಶಾಲೆಗಳಲ್ಲಿ ಸ್ವಚ್ಛತೆಯ ಪಾಠಕ್ಕೆ ಮುಂದಾಗಿದ್ದೇವೆ ಎನ್ನುತ್ತಾರೆ ಶ್ರೀನಿವಾಸ ರುಕ್ಮಿಣಿ ಫೌಂಡೇಶನ್ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್.