ಶಾಲಾ-ಕಾಲೇಜು ಹುಡುಗಿಯರಿಗೂ ಋತುಚಕ್ರ ರಜೆ?

KannadaprabhaNewsNetwork |  
Published : Dec 11, 2025, 02:00 AM IST
Leave

ಸಾರಾಂಶ

 ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳಾ, ಲಿಂಗತ್ವ ಅಲ್ಪಸಂಖ್ಯಾತ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದರಂತೆ ವರ್ಷಕ್ಕೆ 12 ವೇತನ ಸಹಿತ ಋುತುಚಕ್ರ ರಜೆ ನೀಡಲು ಅನುವಾಗುವಂತೆ ಕರ್ನಾಟಕ ಮಹಿಳಾ ಯೋಗಕ್ಷೇಮ ಕಾಯ್ದೆ-2025 ಜಾರಿಗೆ ರಾಜ್ಯ ಸರ್ಕಾರ ಸಜ್ಜಾಗಿದ್ದು ಸಂಪುಟ ಸಭೆಯಲ್ಲಿ ಅನುಮೋದನೆ ಸಾಧ್ಯತೆ 

 ಸುವರ್ಣ ವಿಧಾನಸೌಧ :  ರಾಜ್ಯದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳಾ, ಲಿಂಗತ್ವ ಅಲ್ಪಸಂಖ್ಯಾತ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದರಂತೆ ವರ್ಷಕ್ಕೆ 12 ವೇತನ ಸಹಿತ ಋುತುಚಕ್ರ ರಜೆ ನೀಡಲು ಅನುವಾಗುವಂತೆ ಕರ್ನಾಟಕ ಮಹಿಳಾ ಯೋಗಕ್ಷೇಮ ಕಾಯ್ದೆ-2025 ಜಾರಿಗೆ ರಾಜ್ಯ ಸರ್ಕಾರ ಸಜ್ಜಾಗಿದ್ದು, ಗುರುವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯುವ ಸಾಧ್ಯತೆಯಿದೆ.

ಕಾಯ್ದೆಯಡಿ ರಾಜ್ಯದಲ್ಲಿ ಕರ್ನಾಟಕ ಯೋಗಕ್ಷೇಮ ಪ್ರಾಧಿಕಾರ ರಚಿಸಲಾಗುವುದು. ಜತೆಗೆ, ಮುಟ್ಟು ಅವಧಿಯಲ್ಲಿ ಮಹಿಳೆಗೆ ರಜೆ ನೀಡದಿರುವುದು, ಭೇದಭಾವ ಮಾಡುವುದು, ಅಸ್ಪೃಶ್ಯರಂತೆ ಕಂಡರೆ 5,000 ರು. ದಂಡ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ.

ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ:

ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಋತುಚಕ್ರ ರಜೆ ನೀಡಲು ಸರ್ಕಾರ ನಿರ್ಧಾರ ಮಾಡಿತ್ತು. ಇದರ ವಿರುದ್ಧ ಹೋಟೆಲ್‌ ಮಾಲೀಕರ ಸಂಘ ಸೇರಿ ವಿತರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರವು ಪ್ರಸಕ್ತ ಬೆಳಗಾವಿ ಅಧಿವೇಶನದಲ್ಲೇ ಪ್ರತ್ಯೇಕ ಕಾಯ್ದೆ ಜಾರಿಗೆ ನಿರ್ಧರಿಸಿದ್ದು, ಕಾಯ್ದೆಯ ಸದುದ್ದೇಶದ ವಿರುದ್ಧ ಯಾರೂ ನ್ಯಾಯಾಲಯದ ಮೆಟ್ಟಿಲೇರುವಂತಿಲ್ಲ ಎಂಬುದನ್ನು ಕಾಯ್ದೆಯಲ್ಲೇ ಸ್ಪಷ್ಟಪಡಿಸಲಾಗಿದೆ.

ಯಾರ್‍ಯಾರಿಗೆ ಅನ್ವಯ?:

ಋುತುಚಕ್ರ ರಜೆ ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ಕಾರ್ಖಾನೆಗಳು ಹಾಗೂ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳಲ್ಲಿನ ಮಹಿಳಾ ಉದ್ಯೋಗಿಗಳಿಗೆ ರಜೆ ಅನ್ವಯವಾಗಲಿದೆ. ಇದು ಮಹಿಳೆಯರು, ಯುವತಿಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಅನ್ವಯವಾಗಲಿದೆ. ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಲ್ಲಿ ಟ್ರಾನ್ಸ್‌ ಮೆನ್‌ ಹಾಗೂ ಟ್ರಾನ್ಸ್‌ ವುಮೆನ್‌ ಇಬ್ಬರಿಗೂ ಈ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ.

ಇನ್ನು ಮುಟ್ಟು ಅವಧಿ ಮುಗಿದ ಅಥವಾ 52 ವರ್ಷ ದಾಟಿದ ಮಹಿಳಾ ಉದ್ಯೋಗಿಗೆ ಮುಟ್ಟಿನ ರಜೆ ಅನ್ವಯವಾಗುವುದಿಲ್ಲ. ಜತೆಗೆ ಮುಟ್ಟಿನ ಅವಧಿಯು ಸರ್ಕಾರಿ ರಜೆ ದಿನ ಅಥವಾ ಭಾನುವಾರ ಉಂಟಾದರೆ ವಾರದ ಒಂದು ದಿನ ರಜೆ ಪಡೆಯಬಹುದು. ಒಂದು ತಿಂಗಳ ರಜೆಯನ್ನು ಮತ್ತೊಂದು ತಿಂಗಳಲ್ಲಿ ಸೇರಿಸಿ ಪಡೆಯಲು ಅವಕಾಶವಿಲ್ಲ.

ಹಾಜರಾತಿಯಲ್ಲಿ ಶೇ.2 ರಷ್ಟು ವಿನಾಯ್ತಿ:

ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡಲಾಗುವುದು. ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ಒಂದು ದಿನ ರಜೆ ನೀಡಲಾಗುವುದು. ಇದರಿಂದ ಶೈಕ್ಷಣಿಕ ಹಾಜರಾತಿಗೆ ಸಮಸ್ಯೆಯಾಗದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಶೇ.2 ರಷ್ಟು ಹಾಜರಾತಿ ವಿನಾಯಿತಿ ನೀಡಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.

ಜತೆಗೆ ಖಾಸಗಿ ಸಂಸ್ಥೆಗಳಲ್ಲಿಬಯೋ ಡೀಗ್ರೇಡೇಬಲ್‌ ಸ್ಯಾನಿಟರಿ ಪ್ಯಾಡ್‌, ಮುಟ್ಟಿನ ಕಪ್‌, ಟ್ಯಾಂಪನ್ಸ್‌, ಸ್ಯಾನಿಟರಿ ನ್ಯಾಪ್‌ ಕಿನ್ಸ್‌, ಪ್ರತ್ಯೇಕ ವಿಶ್ರಾಂತಿ ಕೊಠಡಿ ವ್ಯವಸ್ಥೆ ಮಾಡಬೇಕು.

ಚಾ.ನಗರ ಆಕ್ಸಿಜನ್‌ ದುರಂತ ಕುನ್ಹಾ ವರದಿ ಮಂಡನೆ ಸಾಧ್ಯತೆ

ಕೊರೋನಾ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತ ಹಾಗೂ 30ಕ್ಕೂ ಹೆಚ್ಚು ಮಂದಿ ಸಾವಿಗೆ ಕಾರಣಗಳ ಕುರಿತ ಅಂತಿಮ ತನಿಖಾ ವರದಿಯನ್ನು ನಿವೃತ್ತ ನ್ಯಾ.ಮೈಕಲ್ ಡಿ.ಕುನ್ಹಾ ನೇತೃತ್ವದ ಸಮಿತಿ ಡಿ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.ಐದು ವರ್ಷಗಳ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಕ್ಸಿಜನ್ ಕೊರತೆಯಿಂದ 36 ಮಂದಿ ಮೃತಪಟ್ಟಿದ್ದರು. ಇದರಲ್ಲಿ 32 ಮಂದಿ ಅಧಿಕೃತವಾಗಿ ಆಕ್ಸಿಜನ್‌ ಕೊರತೆಯಿಂದಲೇ ಸಾವಿಗೀಡಾಗಿದ್ದು ಸಾಬೀತಾಗಿತ್ತು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚುನಾವಣಾ ವಿಷಯವಾಗಿ ಪರಿಣಮಿಸಿತ್ತು. ತಪ್ಪಿತಸ್ಥರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಕಾಂಗ್ರೆಸ್‌ ಭರವಸೆ ನೀಡಿತ್ತು. ಇದೀಗ ವರದಿಯು ಸಂಪುಟದಲ್ಲಿ ಮಂಡನೆಯಾಗಲಿದ್ದು, ಬಳಿಕ ಉಭಯ ಸದನಗಳಲ್ಲಿ ಮಂಡನೆ ಮಾಡುವ ಸಾಧ್ಯತೆಯಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ