ಉದ್ಯಮಿ ಕಿಡ್ನಾಪ್‌; ಕಿಂಗ್‌ಪಿನ್‌ ಮಹಿಳೆ ಬಂಧನ

KannadaprabhaNewsNetwork | Published : Mar 4, 2025 12:35 AM

ಸಾರಾಂಶ

ಮೂಡಲಗಿ ತಾಲೂಕಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟಪ್ರಭಾ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೂಡಲಗಿ ತಾಲೂಕಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಕಿಡ್ನಾಪ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟಪ್ರಭಾ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪರಾಧಿತ ಸಂಚಿನ ಹಿನ್ನೆಲೆಯಲ್ಲಿ ಮಂಜುಳಾ ರಾಮನಗಟ್ಟಿ ಎಂಬುವರನ್ನು ಬಂಧಿಸಲಾಗಿದ್ದು, ಈವರೆಗೆ 7 ಜನರನ್ನು ಬಂಧಿಸಲಾಗಿದೆ ಎಂದರು. ಫೆ.18ರಂದು ಉದ್ಯಮಿ ಬಸವರಾಜ ಅಂಬಿ ಎಂಬ ವ್ಯಕ್ತಿಯನ್ನು ಕಿಡ್ನಾಪ್‌ ಮಾಡಿ ಅವರ ಬಿಡುಗಡೆಗೆ ಅಪಹರಣಕಾರರು ₹5 ಕೋಟಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಕಿಡ್ನಾಪ್‌ ನಡೆದು 24 ಗಂಟೆಯೊಳಗೆ ಈ ಪ್ರಕರಣವನ್ನು ಘಟಪ್ರಭಾ ಮತ್ತು ನಿಪ್ಪಾಣಿ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಭೇದಿಸಿ, ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಇನ್ನು ಇಬ್ಬರ ಮೇಲೆ ಸಂಶಯವಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದರು.

ಕಿಡ್ನಾಪ್‌ ಪ್ರಕರಣದಲ್ಲಿ ಮಂಜುಳಾ ಪ್ರಮುಖ ಪಾತ್ರ ವಹಿಸಿರುವುದು ಸಾಬೀತಾಗಿದೆ. ರಾಜಕೀಯ ಪಕ್ಷ ಹಾಗೂ ಸಂಘಟನೆಯ ಹೆಸರಿನಲ್ಲಿ ಹಲವರಿಗೆ ಮೋಸ ಮಾಡಿರುವ ಮಾಹಿತಿಯಿದೆ. ಇದೇ ವಿಚಾರವಾಗಿ ಕುಲಗೋಡು ಠಾಣೆಯಲ್ಲಿ ಸಹ ಒಂದು ವಂಚನೆ ಪ್ರಕರಣ ದಾಕಲಾಗಿದೆ. ತಹಸೀಲ್ದಾರ್‌ ಕಚೇರಿಯಲ್ಲಿ ಕೆಲಸ ಕೊಡಿಸುವುದಾಗಿ ಇಬ್ಬರಿಗೆ ₹5 ಲಕ್ಷ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ತನಿಖೆ ಮಾಡಲಾಗುತ್ತಿದೆ. ಯಾರೋ ಸಾಮಾಜಿಕ ಸೇವೆ ಹೆಸರಿನಲ್ಲಿ ಯಾವುದೇ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದರೇ ಅದು ಶುದ್ಧ ಸುಳ್ಳು. ಸರ್ಕಾರಿ ಕೆಲಸಕ್ಕೆ ತನ್ನದೇ ಆದ ನೀತಿ, ನಿಯಮ ಇದೆ ಎಂದು ಹೇಳಿದರು.

ಪರೀಕ್ಷೆ ಆಧಾರದ ಮೇಲೆ ಮಾತ್ರ ಸರ್ಕಾರಿ ನೌಕರಿ ಸಿಗಲು ಸಾಧ್ಯ. ಕಿಡ್ನಾಪ್ ಪ್ರಕರಣದಲ್ಲಿ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಬಂಧಿತರಿಂದ ನಾಲ್ಕು ಕಾರು, 40 ಗ್ರಾಂ ಚಿನ್ನ ಹಾಗೂ 6 ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಮಂಜುಳಾ ಕಾಂಗ್ರೆಸ್‌ ಕಾರ್ಯಕರ್ತೆ?:

ಉದ್ಯಮಿ ಬಸವರಾಜ ಅಂಬಿ ಕಿಡ್ನಾಪ್‌ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿರುವ ಮಂಜುಳಾ ರಾಮನಗಟ್ಟಿ ಕಾಂಗ್ರೆಸ್‌ ಕಾರ್ಯಕರ್ತೆ ಎನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತರು ಎಂದು ಹೇಳಿಕೊಂಡಿದ್ದಾಳೆ. ಸಚಿವರ ಜೊತೆ ತಾನು ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅವಳು ನಮ್ಮ ಮಹಿಳಾ ಕಾಂಗ್ರೆಸ್‌ನ ಯಾವುದೇ ಹುದ್ದೆ ಹೊಂದಿಲ್ಲ. ನಮ್ಮಪಕ್ಷದ ಕಾರ್ಯಕರ್ತೆ ಸಹ ಅಲ್ಲ. ಈಗಾಗಲೇ ನಮ್ಮ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಸ್ಪಷ್ಟನೆ ಕೊಟ್ಟಿದ್ದಾರೆ. ಸಚಿವರೊಂದಿಗೆ ಸಾರ್ವಜನಿಕ ಜೀವನದಲ್ಲಿ ಸಾವಿರಾರು ಜನ ಕಾರ್ಯಕ್ರಮ ಗಳಲ್ಲಿ ಭೇಟಿಯಾಗುತ್ತಾರೆ. ಹಲವಾರು ಸಂಘಟನೆಯವರು ಫೋಟೋ ತೆಗೆಸಿಕೊಂಡಿರುತ್ತಾರೆ. ಅದನ್ನೇ ಅವರ ಆಪ್ತರು ಎನ್ನಲಾಗದು. ಕಾಂಗ್ರೆಸ್ ಪಕ್ಷದೊಂದಿಗೆ ಹಾಗೂ ಸಚಿವರೊಂದಿಗೆ ಈ ಘಟನೆಯಲ್ಲಿ ಪಾಲ್ಗೊಂಡ ಯಾರೂ ಸಂಬಂಧ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸ್ಪಷ್ಟಪಡಿಸಿದ್ದಾರೆ.

Share this article