ಕೊಪ್ಪಳ:
ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕಟ್ಟೆಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ತಹಸೀಲ್ದಾರ್ ವಿಠ್ಠಲ್ ಚೌಗಲೆ ಸೂಚಿಸಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರು ಮತ್ತು ಮೇವು ಸಮಸ್ಯೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೇಸಿಗೆ ಪ್ರಾರಂಭವಾಗಿರುವುದರಿಂದ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಮತ್ತು ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಎಲ್ಲ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರುವ ಸಂಭವವಿದ್ದು, ಅದಕ್ಕಾಗಿ ಆಯಾ ಗ್ರಾಮಗಳಲ್ಲಿ ರೈತರ ಲಭ್ಯವಿರುವ ಖಾಸಗಿ ಬೋರ್‌ವೆಲ್ ಗುರುತಿಸಿ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆಯುವಂತೆ ಸಭೆಯಲ್ಲಿ ಸೂಚಿಸಿದರು.ಪ್ರಸ್ತುತ ೪ ಗ್ರಾಮಗಳಾದ ಕಾತರಕಿ-ಗುಡ್ಲಾನೂರು, ಹಳೆಕುಮಟಾ, ಆರ್.ಎಸ್. ನಗರ, ಚಿಕ್ಕಬೊಮ್ಮನಾಳ ಗ್ರಾಮಗಳಲ್ಲಿ ರೈತರಿಂದ ಖಾಸಗಿ ಬಾಡಿಗೆ ಆಧಾರದ ಮೇಲೆ ಬೋರ್‌ವೆಲ್ ಮೂಲಕ ಕುಡಿಯವ ನೀರು ಸರಬುರಾಜು ಮಾಡಲಾಗುತ್ತಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ ಲಭ್ಯವಿರುವ ಖಾಸಗಿ ಬೋರ್‌ವೆಲ್ ಗುರುತಿಸಿ, ಸಂಬಂಧಿಸಿದ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆದು ಕುಡಿಯುವ ನೀರು ಸರಬರಾಜು ಮಾಡಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ದುಂಡಪ್ಪ ತುರಾದಿ ಮಾತನಾಡಿ, ತಾಲೂಕಿನಲ್ಲಿ ೧೫೫ ಗ್ರಾಮಗಳಿದ್ದು, ಅದರಲ್ಲಿ ೧೪ ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಮತ್ತು ೧೪೧ ಗ್ರಾಮಗಳಿಗೆ ಕುಡಿಯುವ ನೀರಿನ ಬೋರ್‌ವೆಲ್‌ಗಳ ಮೂಲಕ ಸರಬರಾಜು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಗ್ರಾಪಂ ಮಟ್ಟದಲ್ಲಿ ನಿರಂತರವಾಗಿ ಕುಡಿಯುವ ನೀರಿನ ಸಭೆ ಜರುಗಿಸಿ ಸಭೆಯ ನಡಾವಳಿ ಪ್ರತಿಯನ್ನು ತಾಪಂಗೆ ಸಲ್ಲಿಸಲು ಸೂಚಿಸಿದರು.
ಗ್ರಾಮದಲ್ಲಿರುವ ಎಲ್ಲ ಒಎಚ್‌ಟಿಗಳನ್ನು ಸ್ವಚ್ಛಗೊಳಿಸಬೇಕು. ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆ ಆಗಿ ಕಲುಷಿತ ನೀರು ಸರಬರಾಜು ಆಗದಂತೆ ಕ್ರಮವಹಿಸಬೇಕು. ಆರೋಗ್ಯ ಇಲಾಖೆಯಿಂದ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಯೋಗಾಲಯದಿಂದ ಹಾಗೂ ಎಫ್‌ಟಿಕೆ ಕಿಟ್ ಮೂಲಕ ನೀರಿನ ಮಾದರಿಗಳನ್ನು ನಿರಂತರವಾಗಿ ಪರೀಕ್ಷೆಗೊಳಪಡಿಸಿ ಕುಡಿಯಲು ಯೋಗ್ಯವಿಲ್ಲ ಎಂಬುದು ಕಂಡುಬಂದಲ್ಲಿ ಅಂತಹ ನೀರಿನ ಮೂಲಗಳ ಮಾಹಿತಿಯನ್ನು ತಾಪಂಗೆ ಹಾಗೂ ಸಂಬಂಧಪಟ್ಟ ಗ್ರಾಪಂಗೆ ನೀಡಬೇಕು. ಜಾನುವಾರು ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಸದಾಕಾಲ ನೀರು ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದರು. ಗ್ರಾಪಂಗಳಲ್ಲಿ ಕುಡಿಯುವ ನೀರಿನ ಸಹಾಯವಾಣಿ ಸ್ಥಾಪಿಸಲು ಕ್ರಮವಹಿಸುವಂತೆ ಸೂಚಿಸಿದರು.ತಾಲೂಕಿನಲ್ಲಿ ಸಾಕಷ್ಟು ಮೇವಿನ ಲಭ್ಯತೆ ಇದೆ ಎಂದು ಪಶು ವೈದ್ಯಕೀಯ ಮತ್ತು ಪಾಲನಾ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು. ಪ್ರತಿ ೩ ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ನಗರಸಭೆಯ ಅಧಿಕಾರಿಗಳು, ಭಾಗ್ಯನಗರ ಪಪಂ ಅಧಿಕಾರಿಗಳು ಮಾಹಿತಿ ನೀಡಿದರು.
ನಗರಸಭೆ, ಭಾಗ್ಯನಗರ ಪಪಂ, ತಾಲೂಕ ಮಟ್ಟದ ಅಧಿಕಾರಿಗಳು ಹಾಜರಿದ್ದರು.