ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ

KannadaprabhaNewsNetwork |  
Published : Nov 05, 2025, 04:15 AM ISTUpdated : Nov 05, 2025, 07:54 AM IST
Crime news

ಸಾರಾಂಶ

ಮನೆಗೆ ನುಗ್ಗಿ ಹಾಡಹಗಲೇ ದುಷ್ಕರ್ಮಿಯೊಬ್ಬ ಚಹಾ ವ್ಯಾಪಾರಿಯೊಬ್ಬನ ಕತ್ತು ಕೊಯ್ದು ಭೀಕರವಾಗಿ ಕೊಂದು ಪರಾರಿಯಾಗಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

 ಬೆಂಗಳೂರು :  ಮನೆಗೆ ನುಗ್ಗಿ ಹಾಡಹಗಲೇ ದುಷ್ಕರ್ಮಿಯೊಬ್ಬ ಚಹಾ ವ್ಯಾಪಾರಿಯೊಬ್ಬನ ಕತ್ತು ಕೊಯ್ದು ಭೀಕರವಾಗಿ ಕೊಂದು ಪರಾರಿಯಾಗಿರುವ ಘಟನೆ ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.

ಕಾಚನಾಯಕನಹಳ್ಳಿ ನಿವಾಸಿ ಮಾದೇಶ್ (40) ಕೊಲೆಯಾದ ದುರ್ದೈವಿ. ಈ ಹತ್ಯೆ ಬಳಿಕ ಪರಾರಿಯಾಗುತ್ತಿದ್ದ ಆರೋಪಿಯನ್ನು ಸ್ಥಳೀಯರು ಬೆನ್ನತ್ತಿದ್ದರು. ಆದರೆ ಆತ ತಪ್ಪಿಸಿಕೊಂಡಿದ್ದು, ಆತನ ಕೈಯಲ್ಲಿದ್ದ ಬ್ಯಾಗ್ ಕೆಳಗೆ ಬಿದ್ದಿದೆ. ಇದರಲ್ಲಿ ಕತ್ತರಿ ಹಾಗೂ ಆಟಿಕೆ ಗನ್ ಪತ್ತೆಯಾಗಿದೆ. ಮನೆಯಲ್ಲಿ ಮಧ್ಯಾಹ್ನ 12.30 ರ ಸುಮಾರಿಗೆ ಮಾದೇಶ್ ಒಬ್ಬರೇ ಇದ್ದಾಗ ಈ ಕೃತ್ಯ ನಡೆದಿದೆ.

ಟೀ ಅಂಗಡಿ ನಡೆಸಿಕೊಂಡು ಜೀವನ

ಮೃತ ಮಾದೇಶ್ ಮೂಲತಃ ತಮಿಳುನಾಡಿನ ಡೆಂಕಣಿಕೋಟೆ ತಾಲೂಕಿನವರಾಗಿದ್ದು, ಹಲವು ವರ್ಷಗಳಿಂದ ಕಾಚನಾಯಕನಹಳ್ಳಿಯಲ್ಲಿ ಕುಟುಂಬದ ಜತೆ ನೆಲೆಸಿದ್ದರು. ಜಿಗಣಿ ಸಮೀಪ ಟೀ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಮಧುಮೇಹ ಕಾಯಿಲೆ ಹಿನ್ನೆಲೆಯಲ್ಲಿ ಆಯಾಸಗೊಳ್ಳುತ್ತಿದ್ದ ಅವರು, ಪ್ರತಿದಿನ ಮಧ್ಯಾಹ್ನ ಅಂಗಡಿಯಿಂದ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಆ ವೇಳೆ ಅಂಗಡಿಯಲ್ಲಿ ಅ‍ವರ ಪತ್ನಿ ವಹಿವಾಟು ನಡೆಸುತ್ತಿದ್ದರು. ಅಂತೆಯೇ ಮಂಗಳವಾರ ಮನೆಗೆ ಮಾದೇಶ್ ಬಂದಿದ್ದಾರೆ. ತಕ್ಷಣವೇ ಅವರ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿ ಆರೋಪಿ ಹತ್ಯೆಗೈದಿದ್ದಾನೆ. ಈ ವೇಳೆ ಚೀರಾಟ ಕೇಳಿ ನೆರೆಮನೆಯ ಮಲ್ಲಿಕಾರ್ಜುನ್‌ ದೌಡಾಯಿಸಿದ್ದಾರೆ. ಆಗ ಭೀತಿಯಿಂದ ಮಲ್ಲಿಕಾರ್ಜುನ್ ಅವರನ್ನು ದೂಡಿ ಬೈಕ್ ಹತ್ತಿ ಹಂತಕ ಪರಾರಿಯಾಗಿದ್ದಾನೆ. ಕೂಡಲೇ ಆತನನ್ನು ಸ್ಥಳೀಯರು ಬೆನ್ನಹತ್ತಿದ್ದಾರೆ. ಆದರೆ ಆತ ಕೈಗೆ ಸಿಗದೆ ಪರಾರಿಯಾಗಿದ್ದಾನೆ. ಈ ಹಂತದಲ್ಲಿ ಆತನ ಕೈಯಿಂದ ಚೀಲ ಕೆಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಮೀನು ಮಾರಿದ ಹಣ ದೋಚುವ ಸಂಚು?

ಈ ಹತ್ಯೆ ಕೃತ್ಯದಲ್ಲಿ ಪರಿಚಿತರ ಕೈವಾಡವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ಇತ್ತೀಚೆಗೆ ಮಾದೇಶ್ ಅವರು ಜಮೀನು ಮಾರಾಟ ಮಾಡಿದ್ದರು. ಈ ಹಣ ದೋಚುವ ಉದ್ದೇಶದಿಂದ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ದುಡ್ಡಿನ ಮಳೆ ಸುರಿಸುವುದಾಗಿ ನಂಬಿಸಿ ಮಹಾ ಧೋಖಾ!