ರವಿ ಕಾಂಬಳೆ
ಅಳಿವಿನಂಚಿಲ್ಲಿರುವ ಕೀಟ ಸಂಕುಲ ಸಂರಕ್ಷಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಚಿಟ್ಟೆ (ಪಾತರಗಿತ್ತಿ) ಪಾರ್ಕ್ ಸಿದ್ಧಗೊಂಡು ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಅರಣ್ಯ ಇಲಾಖೆಯ ಚಿಟ್ಟೆ ಪಾರ್ಕ್ ನಿರ್ಮಾಣದಿಂದ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಗೆ ಬಲ ಬರಲಿದೆ. ಜೊತೆಗೆ ಉದ್ಯೋಗ ಸೃಷ್ಟಿಯಾಗುವ ಆಶಾಭಾವ ಮೂಡಿಸಿದೆ.
ಸಸ್ಯ ಮತ್ತು ಜೀವ ಸಂಕುಲ ಉಳಿಸಿಕೊಳ್ಳುವ ಯತ್ನ ನಡೆಯುವುದು ಸಹಜ. ಆದರೆ, ನಶಿಸಿ ಹೋಗುತ್ತಿರುವ ಕೀಟ ಪ್ರಬೇಧಗಳನ್ನು ಕಾಪಾಡಿಕೊಳ್ಳುವ ಪ್ರಯತ್ನ ಬಲು ಅಪರೂಪ. ಇಂಥ ಮಹತ್ತರ ಕೆಲಸವನ್ನು ಹುಕ್ಕೇರಿ ಪ್ರಾದೇಶಿಕ ಅರಣ್ಯ ಇಲಾಖೆ ಕೈಗೊಂಡಿದ್ದು ತಾಲೂಕಿನ ಹಿಡಕಲ್ ಡ್ಯಾಮ್‌ನ ರಾಜಾ ಲಖಮಗೌಡ ಸರದೇಸಾಯಿ ಜಲಾಶಯದ ಅಂಗಳದಲ್ಲಿ ಬಹುನಿರೀಕ್ಷಿತ ಚಿಟ್ಟೆ ಪಾರ್ಕ್ ಅರಳಿ ನಿಂತಿದೆ.ನಿರ್ಮಾಣ ಹಂತದ ಉದ್ಯಾನಕಾಶಿಯ ಭಾಗವಾಗಿ ಈ ಚಿಟ್ಟೆ ಪಾರ್ಕ್ ತಲೆ ಎತ್ತಿದೆ. 10 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಮಾನವ ಪ್ರಾಣಿ ಸಂಘರ್ಷ ಲೆಕ್ಕ ಶೀರ್ಷಿಕೆಯ 2 ಕೋಟಿ ವೆಚ್ಚದಲ್ಲಿ ಈ ಚಿಟ್ಟೆ ಪಾರ್ಕ್ ಸ್ಥಾಪಿಸಲಾಗಿದೆ. ಆಕರ್ಷಣೀಯವಾಗಿ ರೂಪಗೊಂಡಿರುವ ಚಿಟ್ಟೆ ಪಾರ್ಕ್‌ನಿಂದ ಜಲಾಶಯದ ಸಿರಿ ಮತ್ತಷ್ಟು ಹೆಚ್ಚಾಗಿದ್ದು ವೈಭವದ ಸೊಬಗು ಸೂಸುತ್ತಿದೆ.
ಪಾರ್ಕ್‌ನಲ್ಲಿ ಏನೇನಿದೆ? :
ವಾಟರ್ ಪಾರ್ಕ್, ರೋಜ್ ಗಾರ್ಡ್‌ನ್, ವಾಕಿಂಗ್ ಪಾಥ್, ಚಿಮ್ಮುವ ಕಾರಂಜಿ, ಗಜೊಬೋ, ಗೊಡಚಿನಮಲ್ಕಿ ಜಲಾಶಯದ ದೃಶ್ಯ ಸೃಷ್ಟಿಸಲಾಗಿದೆ. ಬಿದಿರು ಜೊತೆಗೆ ನಾನಾ ಜಾತಿಯ ಸಸ್ಯ ಸಂಪತ್ತು ನಳನಳಿಸುತ್ತಿದೆ. ತುಂತುರು ಹನಿ ನೀರಾವರಿ, ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ. ಸುತ್ತಲೂ ತಂತಿಬೇಲಿ ಹಾಕಲಾಗಿದೆ.
ಕ್ಷೇತ್ರದ ಶಾಸಕರೂ ಆಗಿದ್ದ ಸಚಿವ ದಿ.ಉಮೇಶ ಕತ್ತಿ ಅವರ ಕನಸಿನ ಪ್ರಮುಖ ಯೋಜನೆಗಳಲ್ಲಿ ಈ ಚಿಟ್ಟೆ ಪಾರ್ಕ್ ಕೂಡ ಒಂದಾಗಿದೆ. ಹಾಗಾಗಿ ಈ ಚಿಟ್ಟೆ ಪಾರ್ಕ್‌ಗೆ ಉಮೇಶ ಕತ್ತಿ ಪಾರ್ಕ್ ಎಂದು ಹೆಸರಿಸಲಾಗಿದ್ದು ಪಾರ್ಕ್ ಪ್ರವೇಶ ದ್ವಾರ ಬಳಿ ಅವರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ. ಅಲ್ಲದೇ ಈ ಹಿಂದಿನ ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಪ್ರಸನ್ ಬೆಲ್ಲದ, ಉದ್ಯಾನವನ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಹಿಂದಿನ ಅಧಿಕಾರಿಗಳಾದ ಉಮೇಶ ಸಿದ್ನಾಳ, ಎ.ಬಿ.ಪಟ್ಟಣಶೆಟ್ಟಿ ಮತ್ತಿತರ ಅಧಿಕಾರಿಗಳು ಅಗತ್ಯ ನೀಲನಕ್ಷೆ ರೂಪಿಸಿ ಪಾರ್ಕ್ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ನಾಳೆ ಉದ್ಘಾಟನೆ
- ನಿಖಿಲ್ ಕತ್ತಿ, ಶಾಸಕರುನಶಿಸಿಹೋಗುತ್ತಿರುವ ಚಿಟ್ಟೆಗಳಿಗೆ ಜೀವ ತುಂಬುವ ಮಹತ್ವದ ಕೆಲಸ ರಾಜ್ಯ ಸರ್ಕಾರದಿಂದ ಅರಣ್ಯ ಇಲಾಖೆ ಮೂಲಕ ಇಲ್ಲಿ ನಡೆದಿದೆ. ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ವಿಶೇಷ ಆಸಕ್ತಿಯಿಂದ ಈ ಯೋಜನೆ ಅನುಷ್ಠಾನಗೊಂಡಿದೆ.