ರೈತರಿಂದಲೇ ನೇರವಾಗಿ ಮುಸುಕಿನ ಜೋಳ ಖರೀದಿಸಿ: ಎಚ್‌.ಡಿ.ರೇವಣ್ಣ

KannadaprabhaNewsNetwork | Published : Oct 13, 2023 12:15 AM

ಸಾರಾಂಶ

ರಾಜ್ಯ ಕೆಎಂಎಫ್‌ಗೆ ಅಗತ್ಯವಾಗಿರುವ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ
ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೂ ಮುನ್ನ ಹೇಳಿಕೆ ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ರಾಜ್ಯ ಕೆಎಂಎಫ್‌ಗೆ ಅಗತ್ಯವಾಗಿರುವ ಮೆಕ್ಕೆಜೋಳವನ್ನು ರೈತರಿಂದ ನೇರವಾಗಿ ಖರೀದಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಶಾಸಕ ಹಾಗೂ ಹಾಸನ ಜಿಲ್ಲೆ ಕೆಎಂಎಫ್ ಅಧ್ಯಕ್ಷ ಎಚ್.ಡಿ.ರೇವಣ್ಣ ಒತ್ತಾಯಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ಆಯೋಜನೆ ಮಾಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಮುನ್ನ ಮಾಧ್ಯಮದ ಜತೆ ಮಾತನಾಡಿದರು. ರಾಜ್ಯದಲ್ಲಿ ಪಶು ಆಹಾರಕ್ಕೆ ಪ್ರತಿವರ್ಷ 174 ಸಾವಿರ ಕ್ವಿಂಟಾಲ್ ಮೆಕ್ಕೇಜೋಳ ಬಳಕೆ ಮಾಡಲಾಗುತ್ತದೆ. ಈ ಮೆಕ್ಕೆಜೋಳವನ್ನು 3 ವ್ಯಕ್ತಿಗಳಿಂದ ಪ್ರತಿ ಕ್ವಿಂ.ಗೆ 2,500 ರು. ದರದಲ್ಲಿ ಕೆಎಂಎಫ್ ಖರೀದಿ ಮಾಡುತ್ತದೆ. ಇವರುಗಳು ರೈತರಿಂದ 1900 ಅಥವಾ 2000 ರು.ಗೆ ಖರೀದಿ ಮಾಡಿ, ಕೆಎಂಎಫ್‌ಗೆ ನೀಡಿ ಕೋಟಿ ಕೋಟಿ ರು. ಸಂಪಾದಿಸುತ್ತಿದ್ದಾರೆ. ಇವರನ್ನು ಉದ್ದಾರ ಮಾಡುವುದು ಬಿಟ್ಟು 2400 ರು. ರೈತರಿಗೆ ನೀಡಿ, ಈ ವಿಷಯ ಕುರಿತಂತೆ ವಿಧಾನಸಭೆಯಲ್ಲಿ ಚರ್ಚೆ ನಡೆಸಿ, ನಡೆದಿರಬಹುದಾದ ಗೋಲ್‌ಮಾಲ್ ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ ಎಂದರು. ಜಿಲ್ಲೆಯ ಹೇಮಾವತಿ ನಾಲೆಗಳಿಗೆ ೧೫ ದಿನ ನೀರು ಬಿಟ್ಟು, ರೈತರ ಅರೆಕಾಲಿಕ ಬೆಳೆಗಳು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಬೇಕು ಎಂದರು. ಹಾಸನ ಡೈರಿಯಿಂದ ೩೫೦ ಕೋಟಿ ರೂ.ಗಳನ್ನು ಹಾಲು ನೀಡುವ ರೈತರಿಗೆ ನೀಡಿದ್ದೇವೆ. ಅವರಿಗೆ ಬೆಳೆ ಕಟಾವು ಯಂತ್ರ ಖರೀದಿಸಲು ಹಾಗೂ ಕೊಟ್ಟಿಗೆ ಮ್ಯಾಟ್ ಸಬ್ಸಿಡಿ ದರದಲ್ಲಿ ಖರೀಧಿಸಲು ಸಹಕಾರ ನೀಡಿದ್ದೇವೆ ಎಂದರು. ಜಿಲ್ಲೆಯಲ್ಲಿ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಬೇಕಾದ ಲಸಿಕೆಯನ್ನು ಕೊಡಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಗತ್ಯಕ್ಕೆ ತಕ್ಕಷ್ಟು ಔಷಧಿ ಹಾಗೂ ವಾಹನಗಳನ್ನು ಒದಗಿಸಲಾಗಿದೆ ಎಂದರು. ವಾಲ್ಮೀಕಿ ಮಹರ್ಷಿ ಅವರ ಜಯಂತಿ ಆಚರಣೆ ಕುರಿತಂತೆ ಶಾಸಕರು ಮಾತನಾಡಿ, ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜ್ಯ ಜಯಂತಿ ಆಚರಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಜತೆಗೆ ನಾಯಕ ಜನಾಂಗದ ಸಮಾಜ ಸೇವಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಎಂದು ಸಲಹೆ ನೀಡಿದರು. ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ಕೃಷಿ ಇಲಾಖೆ ಉಪ ನಿರ್ದೇಶಕಿ ಸಪ್ನ, ಮೀನುಗಾರಿಕೆ ಇಲಾಖೆಯ ಅಧಿಕಾರಿ ಸುಮಾ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೌಸರ್ ಆಹಮದ್, ಹೊಳೆನರಸೀಪುರ, ಆನ್ನೆಕನ್ನಂಬಾಡಿ, ಜಕ್ಕವಳ್ಳಿ ಹಾಗೂ ಇತರೆ ಗ್ರಾಮಗಳ ನಾಯಕ ಜನಾಂಗದ ಮುಖಂಡರು ಇದ್ದರು. ಅ.30 ರಂದು ಜಯಂತಿ ಆಚರಣೆಗೆ ದಿನಾಂಕವನ್ನು ನಿಗದಿ ಮಾಡಲಾಯಿತು.

Share this article