ಗ್ರಾಹಕರ ಹಕ್ಕು ಮತ್ತು ಕಾಯ್ದೆ ಕುರಿತು ಮಾಹಿತಿ ಕಾರ್ಯಾಗಾರ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ಅಂಗಡಿಗಳಲ್ಲಿ ಯಾವುದೇ ವಸ್ತು ಖರೀದಿಸುವಾಗಲೂ ಬಿಳಿ ಚೀಟಿ ಪಡೆದು ಹಣ ನೀಡಬೇಡಿ. ವಸ್ತುವಿನ ಗುಣಮಟ್ಟ, ದರದಲ್ಲಿನ ವ್ಯತ್ಯಾಸ ಸೇರಿದಂತೆ ಯಾವುದೇ ಲೋಪದೋಷ ಕಂಡು ಬಂದಲ್ಲಿ, ತಮಗಾದ ಅನ್ಯಾಯ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮಾರಾಟಗಾರರಿಂದ ಅಧಿಕೃತ ರಸೀದಿ ಪಡೆದ ಬಳಿಕವಷ್ಟೇ ವಸ್ತುಗಳನ್ನು ಖರೀದಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಬಿ.ಎಸ್. ಈಶ್ವರಪ್ಪ ಕರೆ ನೀಡಿದರು.ಪಟ್ಟಣದ ಸ್ನೇಹಸದನ ಟ್ರಸ್ಟ್ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ, ಚೈತನ್ಯ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಹಾಗೂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ‘ಗ್ರಾಹಕರ ಹಕ್ಕು ಮತ್ತು ಕಾಯ್ದೆ’ ಕುರಿತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್.ಎಚ್. ಮಜೀದ್ ಮಾತನಾಡಿ, ಯಾವುದೇ ವ್ಯಕ್ತಿ ಖರೀದಿಸುವ ಮೊದಲು ಅದರ ಸುರಕ್ಷತೆಯ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸಿದಲ್ಲಿ ಗ್ರಾಹಕರ ಹಕ್ಕುಗಳು ಸಂರಕ್ಷಣಾ ಕಾಯಿದೆಯಡಿ ಅವಕಾಶವಿದೆ. ಗ್ರಾಹಕರು ಸರಕುಗಳ ಗುಣಮಟ್ಟ ಮತ್ತು ಅವುಗಳ ಖಾತರಿ ಸೇರಿದಂತೆ ಅಗ್‌ಮಾರ್ಕ ಐಎಸ್‌ಐನಂತಹ ಪ್ರಮಾಣೀಕೃತ ಉತ್ಪನ್ನ ಪರೀಕ್ಷಿಸಿಕೊಂಡ ಬಳಿಕ ಖರೀದಿಸಲು ಮತ್ತು ಸ್ಪರ್ಧಾತ್ಮಕ ಬೆಲೆಯಲ್ಲಿ ಆಯ್ಕೆ ಮಾಡುವ ಹಕ್ಕನ್ನು ಒದಗಿಸಲಿದೆ ಎಂದರು.
ಈ ಸಂದರ್ಭದಲ್ಲಿ ನಿರ್ದೇಶಕಿ ಗ್ಲೋರಿಯಾ ತೆರೆಸಿಟಾ, ಆರೋಗ್ಯ ವಿಭಾಗದ ಸಂಯೋಜಕಿ ಅಚಲಾ, ಸಿಬ್ಬಂದಿ ಗಂಗಾ, ಸರಸ್ವತಿ, ರಹಿಮಾ, ಫಾತಿಮಾ, ಮಧುಮತಿ ಉಪಸ್ಥಿತರಿದ್ದರು. ಸಂಸ್ಥೆಯ ವ್ಯವಸ್ಥಾಪಕಿ ರೂಪಾ ಸ್ವಾಗತಿಸಿದರು, ಸುವರ್ಣಾ ನಿರೂಪಿಸಿ, ವಂದಿಸಿದರು.