2047ರ ವೇಳೆಗೆ ಭಾರತ ಇಸ್ಲಾಮೀಕರಣದ ಹುನ್ನಾರ: ಜಗದೀಶ ಕಾರಂತ

KannadaprabhaNewsNetwork | Published : Feb 9, 2024 1:48 AM

ಸಾರಾಂಶ

ಸಮಸ್ಯೆ ಗಂಭೀರತೆ ಅರಿತು ಜಾಗೃತಗೊಳ್ಳಬೇಕಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಮಧ್ಯ ಕ್ಷೇತೀಯ ಸಂಘಟನಾ ಕಾರ್ಯದರ್ಶಿ ಹೇಳಿದರು. ರಾಯಚೂರಿನಲ್ಲಿ ದೇವಾಲಯ ಭಕ್ತ ಮಂಡಳಿ ಚಿಂತನಾ ಸಭೆ ನಡೆಯಿತು. ಸಭೆಯಲ್ಲಿ 14 ದಿನಗಳ ಕಾಲ ಅರ್ಚಕರ ತರಬೇತಿ ಪಡೆದ ಶಿಬಿರಾರ್ಥಿಗಳು ಮಂತ್ರ-ಘೋಷಣೆಯನ್ನು ಮೊಳಗಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

2047ರ ವೇಳೆಗೆ ಭಾರತವನ್ನು ಇಸ್ಲಾಮೀಕರಣಗೊಳಿಸುವ ದೊಡ್ಡದಾದ ಹುನ್ನಾರದ ಹುಳುವನ್ನು ಬಿಟ್ಟಿದ್ದು, ದೇಶದ ಎದುರಿನಲ್ಲಿರುವ ಸಮಸ್ಯೆಯ ಗಂಭೀರತೆಯನ್ನು ಅರಿತು ಜಾಗೃತಗೊಳ್ಳಬೇಕು ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಮಧ್ಯ ಕ್ಷೇತೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ದೇವಾಲಯ ಸಂವರ್ಧನಾ ಸಮಿತಿ ಜಿಲ್ಲಾ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ದೇವಾಲಯ ಭಕ್ತ ಮಂಡಳಿ ಚಿಂತನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದರಿಂದ ಇಸ್ಲಾಮೀಕರಣ ವಿಚಾರದ ಸುಳಿವು ಸಿಕ್ಕಿದೆ. ಅಂಬೇಡ್ಕರ್‌ ಬರೆದ ಸಂವಿಧಾನ ಹಾಗೂ ಟಿಪ್ಪುವಿನ ಖಡ್ಗ ಹಿಡಿದು, ಸಮಾಜವನ್ನು ಜಾತಿ, ಅಸ್ಪೃಶ್ಯತೆ ಆಧಾರದಡಿ ಚೂರು ಚೂರನ್ನಾಗಿಸಲಾಗುತ್ತಿದೆ. ಆಂಧ್ರಪ್ರದೇಶದಲ್ಲಿ ಮತಾಂತರದ ಪಿಡುಗೆ ಹೆಚ್ಚಾಗಿದ್ದು, ಅಲ್ಲಿ ಹರಿಯುತ್ತಿರುವ ಕೃಷ್ಣಾ ನದಿಯ ದಡಗಳು ಮತಾಂತರ ಕೇಂದ್ರಗಳಾಗಿ ಪರಿಣಮಿಸಿವೆ ಎಂದರು.

ಮುಸ್ಲಿಂ ಪ್ರಾಬಲ್ಯ ಕ್ಷೇತ್ರದ ಜೊತೆಗೆ ತಮಗೆ ಅನುಕೂಲವಾಗುವ ಕ್ಷೇತ್ರಗಳನ್ನು ಹಿಡಿತದಲ್ಲಿಟ್ಟುಕೊಂಡು ಮುಂದಿನ 2047 ರ ವೇಳೆಗೆ ಚುನಾವಣೆಯಲ್ಲಿ 272 ಸ್ಥಾನಗಳಲ್ಲಿ ಗೆದ್ದು ದೇಶವನ್ನು ಇಸ್ಲಾಮೀಕರಣ ಮಾಡುವ ಷಡ್ಯಂತ್ರವು ಬಹಿರಂಗಗೊಂಡಿದೆ. ಭಾರತ ಉಳಿದರೇ ಧರ್ಮ ಉಳಿಯುತ್ತದೆ, ಧರ್ಮ ಉಳಿದರೆ ಜಾತಿ ಉಳಿಯುತ್ತದೆ ಜಾತಿ ಉಳಿದರೆ ಸಮಾಜ ಉಳಿಯುತ್ತದೆ ಸಮಾಜ ಉಳಿದರೆ ನಮ್ಮ ಮನೆಗಳು ಉಳಿಯುತ್ತವೆ ಅದಕ್ಕಾಗಿ ಎಲ್ಲರೂ ಜಾಗೃತರಾಗಿ ರಾಷ್ಟ್ರದ ಏಕತೆಗಾಗಿ ದುಡಿಯಬೇಕು ಎಂದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣ ಕೇವಲ ಮಂದಿರ ನಿರ್ಮಾಣವಲ್ಲ, ಸಾವಿರಾರು ವರ್ಷಗಳಿಂದ ಕಗ್ಗತ್ತಲಿನಲ್ಲಿದ್ದ ಸನಾತನ ಧರ್ಮದ ಪುನರುತ್ಥಾನವಾಗಿದೆ. ಭಾರತ ಸಾಯುವ, ನಶಿಸುವ ದೇಶವಲ್ಲ ಹಿಂದೂತ್ವದ ನೆಲೆಗಟ್ಟಿನ ಮೇಲೆ ಪುನರುತ್ಥಾನವಾಗುತ್ತಿದೆ. ಇದೇ ಮಾದರಿಯಲ್ಲಿ ದೇವಸ್ಥಾನದ ನೆಲೆಗಟ್ಟಿನ ಮೇಲೆ ಸಮಾಜದ ಸಂಘಟನೆಯೂ ನಡೆಯುತ್ತಿದೆ ಎಂದರು.

ಮನಸ್ಸಿಗೆ ಸಂಸ್ಕಾರ ಕಲಿಸಿಕೊಡುವ, ಶ್ರದ್ಧಾ ಭಕ್ತಿಯನ್ನು ಜಾಗೃತಿಗೊಳಿಸುವ ಹಾಗೂ ವ್ಯಕ್ತಿಗಳ ಮಾನಸಿಕ ಪರಿವರ್ತನೆಯನ್ನು ಮಾಡುವ ಶಕ್ತಿ ಕೇಂದ್ರಗಳೇ ದೇವಸ್ಥಾನಗಳಾಗಿವೆ. ಅಂತಹ ದೇವಸ್ಥಾನಗಳಿಂದ ವ್ಯಕ್ತಿಗಳ ಪರಿವರ್ತನೆಯಾಗಲಿದ್ದು ಇದರಿಂದ ಸಮಾಜದ ಪರಿವರ್ತನೆಗೊಂಡು ಇಡೀ ರಾಷ್ಟ್ರ ಪರಿವರ್ತನೆಗೊಳ್ಳಲಿದೆ ಎಂದು ಹೇಳಿದರು.

ದೇವಾಲಯ ಸಂವರ್ಧನಾ ಸಮಿತಿಯ ರಾಜ್ಯ ಸಂಯೋಜಕ ಮನೋಹರ ಮಠದ್‌ ಮಾತನಾಡಿ, ಇಡೀ ವಿಶ್ವದಲ್ಲಿಯೇ ಅತ್ಯಂತ ಹಳೆಯದಾದ ದೇವಸ್ಥಾನಗಳನ್ನು ನಮ್ಮ ರಾಜ್ಯ ಹೊಂದಿದೆ. ಈ ಹಿಂದೆ ನಮ್ಮ ದೇವಸ್ಥಾನಗಳು ವಿದ್ಯಾ, ಅನ್ನ, ಧ್ಯಾನ ಹಾಗೂ ನ್ಯಾಯದ ಕೇಂದ್ರಗಳಾಗಿ ಕೆಲಸ ಮಾಡುತ್ತಿದ್ದವು. ಮನಸ್ಸಿಗೆ ಶಾಂತಿ ಕೊಡುವ ಜಾಗಗಳಾಗಿದ್ದವು. ಉದ್ಯೋಗದ ಕೇಂದ್ರಗಳಾಗಿದ್ದವು. ಅಂತಹ ಸ್ಥಳಗಳನ್ನು ಮತ್ತೆ ಸುಸಂಸ್ಕೃತ ಕೇಂದ್ರಗಳನ್ನಾಗಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳು, ಆರ್‌ಎಸ್‌ಎಸ್ನ ಸಂಘ ಸಂಚಾಲಕ ಸದಾನಂದ ಪ್ರಭು ಸೇರಿದಂತೆ ಸಮಿತಿ ಪದಾಧಿಕಾರಿಗಳು,ಸದಸ್ಯರು, ಬಿಜೆಪಿ ಮುಖಂಡರು ಹಾಗೂ ಇತರರು ಇದ್ದರು.

Share this article