೨೦೪೭ಕ್ಕೆ ದೇಶ ವಿಕಸಿತ ಭಾರತವಾಗಿ ಪರಿವರ್ತನೆ: ಯದುವೀರ್

KannadaprabhaNewsNetwork | Published : Jan 22, 2025 12:31 AM

ಸಾರಾಂಶ

ರಾಷ್ಟ್ರದಲ್ಲಿ 3ನೇ ಬಾರಿಗೆ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದು, ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಮಹಿಳೆಯರು, ರೈತರು, ಕೂಲಿಕಾರರೂ ಸೇರಿದಂತೆ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮೈಸೂರು ರಾಜವಂಶಸ್ಥರು, ಪ್ರಸ್ತುತ ಮೈಸೂರು- ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಿತ್ರದುರ್ಗದಲ್ಲಿ ಹೇಳಿದ್ದಾರೆ.

- ಮೀರಸಾಬಿಹಳ್ಳಿಯ ರಾಣಿಕೆರೆಗೆ ಗಂಗಾಪೂಜೆ ನೆರವೇರಿಸಿದ ಮೈಸೂರು ಸಂಸದ - - - ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಾಷ್ಟ್ರದಲ್ಲಿ 3ನೇ ಬಾರಿಗೆ ಎನ್‌ಡಿಎ ಮೈತ್ರಿಕೂಟದ ಸರ್ಕಾರ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದು, ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಮಹಿಳೆಯರು, ರೈತರು, ಕೂಲಿಕಾರರೂ ಸೇರಿದಂತೆ ಎಲ್ಲ ವರ್ಗಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಮೈಸೂರು ರಾಜವಂಶಸ್ಥರು, ಪ್ರಸ್ತುತ ಮೈಸೂರು- ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಅವರು, ಮಂಗಳವಾರ ತಾಲೂಕಿನ ಮೀರಸಾಬಿಹಳ್ಳಿಯ ರಾಣಿಕೆರೆಗೆ ಭೇಟಿ ನೀಡಿ, ಗಂಗಾಪೂಜೆ ನೆರವೇರಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಮೋದಿ ಅವರ ದಕ್ಷ, ಪ್ರಾಮಾಣಿಕ ಆಡಳಿತದ ಫಲವಾಗಿ ೨೦೪೭ರಷ್ಟಲ್ಲಿ ನಾವೆಲ್ಲರೂ ವಿಕಸಿತ, ಸೂಪರ್‌ ಫಾಸ್ಟ್ ಭಾರತವನ್ನು ಹೊಂದಲಿದ್ದು ಇಡೀ ವಿಶ್ವಕ್ಕೆ ಮಾದರಿಯಾಗುವ ಮೂಲಕ ನೂರಾರು ಕೋಟಿ ಭಾರತೀಯ ನೂರಾರು ವರ್ಷಗಳ ಕನಸು ನನಸಾಗಲಿದೆ ಎಂದರು.

ರಾಜಮನತನವೆಂದರೆ ಜನರ ಕಲ್ಯಾಣಕ್ಕಾಗಿ, ಜನರ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವ ವ್ಯಕ್ತಿಗಳು ಎಂಬ ನಂಬಿಕೆ ಇಂದಿಗೂ ಜನರಲ್ಲಿದೆ. ಮಹಾರಾಜರ ಮೇಲಿದ್ದ ಪ್ರೀತಿ, ವಿಶ್ವಾಸ, ಗೌರವಕ್ಕೆ ಎಂದೂ ಧಕ್ಕೆಯಾಗಿಲ್ಲ. ಇಂದಿಗೂ ಈ ನಾಡಿನ ಜನತೆ ನನ್ನನ್ನು ಸಂಸದ ಎಂದು ಕರೆಯದೇ, ನಮ್ಮ ಮೈಸೂರಿನ ಮಹರಾಜರು ಎಂದು ಆತ್ಮಾಭಿಮಾನದಿಂದ ನುಡಿಯುತ್ತಾರೆ. ಇದಕ್ಕಿಂತ ಸಂತೋಷ ಬೇರಿಲ್ಲ. ಮುಂದಿನ ದಿನಗಳಲ್ಲೂ ನಮ್ಮ ಮನೆತನ ಈ ನಾಡಿನ ಜನರ ಕಲ್ಯಾಣಕ್ಕಾಗಿ ಶ್ರಮಿಸಲಿದೆ. ಜನರು ರಾಜಮನೆತನದ ಮೇಲಿಟ್ಟ ಪ್ರೀತಿ, ವಿಶ್ವಾಸ, ಗೌರವಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದರು.

ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಕೆರೆಗೆ ಒಮ್ಮೆ ಜಯಚಾಮರಾಜೇಂದ್ರ ಒಡೆಯರ್, ರಾಣಿ ಪ್ರಮೋದದೇವಿ ಆಗಮಿಸಿದ್ದರು. ಈಗ ಮತ್ತೊಮ್ಮೆ ಯದುವೀರ ಆಗಮಿಸುವ ಮೂಲಕ ಜನರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದ್ಧಾರೆ. ೧೯೦೭ರಲ್ಲಿ ಈ ಕೆರೆ ನಿರ್ಮಿಸಿ ಈ ಭಾಗದ ಸುಮಾರು ೬೦ಕ್ಕೂ ಹೆಚ್ಚು ಗ್ರಾಮಗಳ ಹತ್ತಾರು ಸಾವಿರ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಿದ್ದಾರೆ. ಯದುವೀರ ಒಡೆಯರ್‌ ಅವರಿಂದ ಕೆರೆಗೆ ಗಂಗಾಪೂಜೆ ಮಾಡಿಸಬೇಕೆಂಬುದು ಈ ಭಾಗದ ಜನರ ಬೇಡಿಕೆಯಾಗಿತ್ತು. ಗ್ರಾಮಸ್ಥರ ಮನವಿಗೆ ಮನ್ನಣೆ ನೀಡಿದ ಯದುವೀರ್ ಒಡೆಯರ್ ಅವರು ಕಾರ್ಯಕ್ರಮ ಆಗಮಿಸಿದ್ದಾರೆ. ತಾಲೂಕಿನ ಜನತೆಯ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಗೀತಮ್ಮ, ಸದಸ್ಯರಾದ ನಾಗರಾಜ, ಪಿಡಿಒ ವಿಜಯಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಬಿಜೆಪಿ ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ, ಎನ್.ರಘುಮೂರ್ತಿ, ಟಿ.ಮಂಜುನಾಥ, ಡಿ.ಭರತೇಶ್‌ ರೆಡ್ಡಿ, ದೊರೆ ನಾಗರಾಜು, ಬಂಡೆರಂಗಪ್ಪ, ಶಶಿಧರ ರೈತ ಮುಖಂಡ ಎಂ.ಎನ್. ಚನ್ನಕೇಶವಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

- - - -೨೧ಸಿಎಲ್‌ಕೆ೧: ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿ ರಾಣಿಕೆರೆಗೆ ಮೈಸೂರು-ಕೊಡಗು ಲೋಕಸಭಾ ಸದಸ್ಯ, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಗಂಗಾಪೂಜೆ ನೆರವೇರಿಸಿದರು.

-೨೧ಸಿಎಲ್‌ಕೆ೦೧: ಚಳ್ಳಕೆರೆ ತಾಲೂಕಿನ ಮೀರಸಾಬಿಹಳ್ಳಿ ರಾಣಿಕೆರೆಯ ಬಳಿ ಸಾರ್ವಜನಿಕರನ್ನು ಉದ್ದೇಶಿಸಿ ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು.

Share this article