ಶಿಗ್ಗಾಂವಿ: ತೀರಾ ಸಂಕಷ್ಟದಲ್ಲಿರುವ ಶಿಗ್ಗಾಂವಿ ತಾಲೂಕನ್ನು ಸರ್ಕಾರ ಕಡೆಗಣಿಸಿದರೆ ಕ್ಷೇತ್ರದಲ್ಲಿ ಮುಂಬರುವ ಉಪಚುನಾವಣೆಯನ್ನು ಬಹಿಷ್ಕರಿಸಿ, ಉಗ್ರವಾಗಿ ಪ್ರತಿಭಟಿಸುವುದಾಗಿ ರೈತಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಘಟನೆ ಜರುಗಿದೆ.ಪಟ್ಟಣದ ತಹಸೀಲ್ದಾರ್ ಕಚೇರಿ ಎದರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಮುತ್ತಣ್ಣ ಗುಡಗೇರಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಶಾಸಕ ಸ್ಥಾನದ ರಾಜಿನಾಮೆಯಿಂದ ಉಪಚುನಾವಣೆ ಎದುರಿಸುತ್ತಿರುವ ತಾಲೂಕಿನಲ್ಲಿ ರೈತರ ಗೋಳನ್ನು ಕೇಳುವರು ಯಾರು ಇಲ್ಲದಂತಾಗಿದ್ದು, ಹಿಂದಿನ ವರ್ಷ ಬರಗಾಲ, ಈ ವರ್ಷ ಅತಿವೃಷ್ಟಿಯಿಂದ ತಾಲೂಕು ರೈತರು ಕಂಗಾಲಾಗಿದ್ದು, ನಾನಾ ತರಹದ ಸಂಕಷ್ಟಗಳನ್ನು ಜನ ಎದುರಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ, ತಾಲೂಕಿನ ಬಹುತೇಕ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಕಾರಿಗಳ ನೇಮಕ ಮಾಡಿಲ್ಲ. ತಾಲೂಕಿನಲ್ಲಿ ಹಲವಾರು ಕೆರೆ ಕಟ್ಟೆಗಳು ಒಡೆದಿದ್ದರೂ, ಅತೀವೃಷ್ಟಿಯಿಂದ ತಾಲೂಕಿನಲ್ಲಿ ಸುಮಾರು ೩೦೦ ಮನೆಗಳು ಬಿದ್ದಿದ್ದರೂ ಜನರ ನೆರುವಿಗೆ ಸರ್ಕಾರದ ಪ್ರತಿನಿಧಿಗಳು ಬಂದಿಲ್ಲ.ಸರ್ಕಾರ ರಾಜಕೀಯ ಕಿತ್ತಾಟವನ್ನು ಬಿಟ್ಟು ರೈತರ ಕಡೆ ಗಮನ ಕೊಡದಿದ್ದರೆ ತಾಲೂಕಿನ ಬೈ ಇಲೆಕ್ಷನ್ ತಿರಸ್ಕರಿಸಿ, ತಾಲೂಕು ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಸರ್ಕಾರ ತನ್ನ ನಿರ್ಲಕ್ಷ್ಯ ಧೋರಣೆಯನ್ನು ಮುಂದುವರೆಸಿದರೆ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕಿನ ರೈತರ ವಿವಿಧ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಯಿತು.ಪ್ರತಿಭಟನೆಯಲ್ಲಿ ಮುತ್ತಪ್ಪಾ ಗುಡಗೇರಿ, ಪಂಚಾಯ್ಯಾಸ್ವಾಮಿ ಹಿರೇಮಠ, ಮಾಂತೇಶ ಬಾರಕೇರ, ನಿಂಗನಗೌಡ್ರ ರಾಮನಗೌಡ್ರ, ಗದಿಗೆಪ್ಪಗೌಡಾ ಪಾಟೀಲ, ನಾಗಪ್ಪಾ ಕೋಟನದ, ಧನಪಾಲ ಕೋಳುರ, ಗದಿಗೆಪ್ಪಾ ಹೊನ್ನಿಹಳ್ಳಿ, ರುದ್ರಗೌಡ ಪಾಟೀಲ, ದೇವಿಂದ್ರಪ್ಪಾ ಬಂಕಾಪುರ, ನಾಗರಾಜ ಅಂಗಡಿ, ಈರಪ್ಪಾ ಸುಣಗಾರ, ಮಂಜುನಾಥ ಬಾರಕೇರ, ಹಜರೆಸಾಭ ಮುಲ್ಲಾನವರ, ಬಸವನಗೌಡ ಪಾಟೀಲ ಇತರರಿದ್ದರು.