ಉಪಚುನಾವಣೆ, ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ-೨೦೨೩ರ ಅಂಗವಾಗಿ ಜಿಲ್ಲೆಯ ರಾಣಿಬೆನ್ನೂರು ನಗರಸಭೆ ವಾರ್ಡ್ ಸಂಖ್ಯೆ ೨೨ಕ್ಕೆ ಡಿ.೨೭ರಂದು ಚುನಾವಣೆ ಜರುಗಲಿದೆ. ಮತದಾನ ಮುಕ್ತಾಗೊಳ್ಳುವ ಅವಧಿಯ ೪೮ ಗಂಟೆಗಳ ಪೂರ್ವದಲ್ಲಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸುಗಮ ಮತ್ತು ಮುಕ್ತ ಮತದಾನದ ಹಿತದೃಷ್ಟಿಯಿಂದ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾವೇರಿ

ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ-೨೦೨೩ರ ಅಂಗವಾಗಿ ಜಿಲ್ಲೆಯ ರಾಣಿಬೆನ್ನೂರು ನಗರಸಭೆ ವಾರ್ಡ್ ಸಂಖ್ಯೆ ೨೨ಕ್ಕೆ ಡಿ.೨೭ರಂದು ಚುನಾವಣೆ ಜರುಗಲಿದೆ. ಮತದಾನ ಮುಕ್ತಾಗೊಳ್ಳುವ ಅವಧಿಯ ೪೮ ಗಂಟೆಗಳ ಪೂರ್ವದಲ್ಲಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ಸುಗಮ ಮತ್ತು ಮುಕ್ತ ಮತದಾನದ ಹಿತದೃಷ್ಟಿಯಿಂದ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.

ಉಪ ಚುನಾವಣೆ ನಡೆಯುವ ರಾಣಿಬೆನ್ನೂರು ನಗರಸಭೆ ವಾರ್ಡ್ ಸಂಖ್ಯೆ೨೨ರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಕ್ರಿಯೆಗಳಿಗೆ ಅನ್ವಯಿಸುವಂತೆ ಡಿ.೨೫ರ ಸಂಜೆ ೫ ಗಂಟೆಯಿಂದ ಡಿ.೨೭ರ ಸಂಜೆ ೫ ಗಂಟೆವರೆಗೆ ಸಿ.ಆರ್.ಪಿ.ಸಿ. ೧೯೭೩ರ ಕಲಂ ೧೪೪ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ, ೧೯೬೩ ಕಲಂ ೩೫ರಡಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

ರಾಣಿಬೆನ್ನೂರು ನಗರಸಭೆ ವಾರ್ಡ್ ಸಂಖ್ಯೆ೨೨ರ ಮತಕ್ಷೇತ್ರ ವ್ಯಾಪ್ತಿ ಹಾಗೂ ಮತಗಟ್ಟೆಗಳ ಸುತ್ತ ೧೦೦ ಮೀಟರ್ ಅಂತರದಲ್ಲಿ ಪ್ರಚಾರದ ಸಲುವಾಗಿ ಐದು ಅಥವಾ ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು, ಮೆರವಣಿಗೆ ಅಥವಾ ಸಭೆ-ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ.

ಚುನಾವಣಾ ಅಭ್ಯರ್ಥಿಗಳು/ ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚನೆ ಮಾಡುಬಹುದಾಗಿದ್ದು, ಐದಕ್ಕಿಂತ ಹೆಚ್ಚಿನ ಜನರು ಸೇರುವಂತಿಲ್ಲ. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದು ಮತ್ತು ತಿರುಗಾಡುವುದನ್ನು, ಪ್ರತಿಬಂಧಿಸಲಾಗಿದೆ.

ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಹಾಗೂ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.

ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಯಾವತ್ತೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸಬೇಕು. ಮತಗಟ್ಟೆ ಸುತ್ತ ೧೦೦ ಮೀಟರ್ ಅಂತರದಲ್ಲಿ ಮೊಬೈಲ್, ಕಾಡ್ಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಒಯುವುದನ್ನು ನಿಷೇಧಿಸಲಾಗಿದೆ (ಚುಣಾವಣಾ ಕಾರ್ಯದಲ್ಲಿ ಆರ್.ಓ. ಅವರಿಂದ ಅನುಮತಿ ಪಡೆದ ಅಧಿಕಾರಿಗಳು ಮತ್ತು ಸಿಬ್ಬಂದಿ ಹೊರತುಪಡಿಸಿ).

ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಕೊನೆಗೊಳ್ಳುವ ೪೮ ಗಂಟೆಗಳ ಪೂರ್ವದಲ್ಲಿ ಎಲ್ಲ ಸ್ಕ್ಯಾನಿಂಗ್ ಮತ್ತು ಝರಾಕ್ಸ್ ಸೆಂಟರ್‌ಗಳನ್ನು ಸಂಪೂರ್ಣವಾಗಿ ಮುಚ್ಚಬೇಕು. ಮತಗಟ್ಟೆ ಸುತ್ತ ೧೦೦ ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಪೋಸ್ಟರ್/ ಬ್ಯಾನರ್ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸುವಂತಿಲ್ಲ.

ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಹಿತೆಯ ಕಲಂ ೧೮೮ರ ಪ್ರಕಾರ ಕ್ರಮವನ್ನು ಜರುಗಿಸಲಾಗುವುದು. ಈ ಆದೇಶವು ಮತದಾನ ಸಿಬ್ಬಂದಿ, ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ, ಚುನಾವಣಾ ಕಾರ್ಯ ನಿರತ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದ್ಯಪಾನ, ಮಾರಾಟ ಹಾಗೂ ಸಾಗಾಣಿಕೆ ನಿಷೇಧ:

ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಅಂಗವಾಗಿ ಜಿಲ್ಲೆಯ ರಾಣಿಬೆನ್ನೂರು ನಗರಸಭೆ ವಾರ್ಡ್ ಸಂಖ್ಯೆ ೨೨ಕ್ಕೆ ಡಿ.೨೭ರಂದು ಚುನಾವಣೆ ಜರುಗಲಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನದ ಹಿತದೃಷ್ಟಿಯಿಂದ ಡಿ.೨೬ರ ಸಂಜೆ ೫ ಗಂಟೆಯಿಂದ ಡಿ.೨೭ರ ಮಧ್ಯರಾತ್ರಿವರೆಗೆ ಮದ್ಯಪಾನ, ಮದ್ಯ ಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹಣೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ರಘುನಂದನ್ ಮೂರ್ತಿ ಆದೇಶ ಹೊರಡಿಸಿದ್ದಾರೆ.

Share this article